ಕನ್ನಡಪ್ರಭ ವಾರ್ತೆ ಮಂಗಳೂರು ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ವರು ಸಾಧಕ ವ್ಯಕ್ತಿಗಳು ಹಾಗೂ ಎರಡು ಸಂಘ ಸಂಸ್ಥೆಗಳು ಆಯ್ಕೆಯಾಗಿವೆ. ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಕೆ. ಲೀಲಾವತಿ ಬೈಪಡಿತ್ತಾಯ, ಸಮಾಜ ಸೇವಾ ಕಾರ್ಯಗಳಿಗಾಗಿ ಚಾರ್ಮಾಡಿ ಹಸನಬ್ಬ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಪ್ರಶಾಂತ್ ಶೆಟ್ಟಿ, ಮಾಧ್ಯಮ ಕ್ಷೇತ್ರದಲ್ಲಿ ದಿನೇಶ್ ಅಮೀನ್ ಮಟ್ಟು, ಸಂಘ ಸಂಸ್ಥೆಗಳ ನೆಲೆಯಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಮಾರುತಿ ಜನಸೇವಾ ಸಂಘ ಆಯ್ಕೆಯಾಗಿವೆ. ---------- ಲೀಲಾವತಿ ಬೈಪಾಡಿತ್ತಾಯ: ಇವರು ಯಕ್ಷಗಾನ ಭಾಗವತರು. ವೃತ್ತಿ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು. ತೆಂಕುತಿಟ್ಟು ಯಕ್ಷಗಾನದ ತವರೂರು ಮಧೂರಿನಲ್ಲಿ ಹುಟ್ಟಿ ಬೆಳೆದ ಲೀಲಾ ಬೈಪಡಿತ್ತಾಯ ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾದವರು. ಸಂಗೀತ ಕಲಿತಿದ್ದ ಅವರನ್ನು ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರು ಹರಿನಾರಾಯಣ ಬೈಪಡಿತ್ತಾಯರು ಕೈಹಿಡಿದ ಬಳಿಕ ಯಕ್ಷಗಾನ ಕಲಿಸಿದರು. ಪರಿಣಾಮ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ ಅವರಿಗೆ ದೊರೆತಿತ್ತು. ಪತಿಯೊಂದಿಗೆ ಅಂದಿನ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ (ಅಳದಂಗಡಿ), ಕುಂಬಳೆ ಬಪ್ಪನಾಡು ಮೇಳ, ಕುಂಬಳೆ, ತಲಕಳ ಮುಂತಾದ ಡೇರೆ- ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿಯೂ 17ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಗಂಡು ಮೆಟ್ಟಿನ ಕಲೆಯಲ್ಲಿ ಅದರಲ್ಲೂ ವೀರರಸ ಪ್ರಧಾನ ಸನ್ನಿವೇಶಗಳಲ್ಲಿ ಹೆಣ್ಣು ಕಂಠವನ್ನು ಮೆರೆಸಿ, ಯಕ್ಷಗಾನ ಕಲೆಯತ್ತ ಮಹಿಳೆಯರೂ ಆಕರ್ಷಿತರಾಗುವಂತೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅವರು. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ಇವರ ಹೆಗ್ಗಳಿಕೆ. ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠವನ್ನೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡಿದ್ದಾರೆ. ಅಲ್ಲದೆ ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಗುರುಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ದಿನೇಶ್ ಅಮೀನ್ ಮಟ್ಟು: ಮೂಲತಃ ದಕ್ಷಿಣ ಕನ್ನಡದ ಮಟ್ಟು ಗ್ರಾಮದವರಾದ ದಿನೇಶ್ ಅಮೀನ್ ಮಟ್ಟು ಸುದೀರ್ಘ ಕಾಲ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸಿದವರು. ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಕೆಲಸ ಆರಂಭಿಸಿ ವಿವಿಧ ಹುದ್ದೆಗಳನ್ನು ಗಳಿಸಿ, ದೆಹಲಿ ಪ್ರತಿನಿಧಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ‘ದೆಹಲಿ ನೋಟ’ ಅಂಕಣದ ಮೂಲಕ ಜನಪ್ರಿಯರಾಗಿದ್ದರು. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಡಾ.ಪ್ರಶಾಂತ್ ಶೆಟ್ಟಿ: ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಹಾಗೂ ಅಪದ್ಬಾಂಧವ ಚಾರ್ಮಾಡಿ ಹಸನಬ್ಬ ಈ ಸಾಲಿನ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಾ. ಪ್ರಶಾಂತ್ ಶೆಟ್ಟಿ ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿಯ ಮಾಬ್ಳಿಯಲ್ಲಿ ಜನಿಸಿದರು. ಅಲ್ಲಿಯೆ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದರು. ೧೯೯೪ ರಲ್ಲಿ ಉಜಿರೆಯಲ್ಲಿರುವ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿನಲ್ಲಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಯಾಗಿ ಬಿ.ಎನ್.ವೈ.ಎಸ್. ಪದವಿ ಪಡೆದರು. ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ವೈದ್ಯಾಧಿಕಾರಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ೨೦೦೬ರಲ್ಲಿ ಬೆಂಗಳೂರಿನಲ್ಲಿ ಎಸ್.ವ್ಯಾಸ ಯೋಗ ವಿಶ್ವವಿದ್ಯಾಲಯದಲ್ಲಿ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೨೦೧೪ರಲ್ಲಿ ಅದೇ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದರು. ಪ್ರಸ್ತುತ ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಟಾಸ್ಕ್ ಫೋರ್ಸ್ ಸದಸ್ಯರಾಗಿ, ಅಭಿವೃದ್ಧಿ ಮಂಡಳಿ ಸದಸ್ಯರಾಗಿ, ಹಾಗೂ ರಾಜ್ಯದ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯಲ್ಲಿ ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಸಲಹಾ ಮಂಡಳಿ ಸದಸ್ಯರಾಗಿ, ರಾಜೀವ್ ಗಾಂಧಿ ವಿ.ವಿ.ಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಾರ್ಮಾಡಿ ಹಸನಬ್ಬ: ಅತ್ಯಂತ ಅಪಾಯಕಾರಿಯಾದ ಚಾರ್ಮಾಡಿ ಘಾಟಿಯಲ್ಲಿ ಅಪಘಾತಗಳು ಸಂಭವಿಸಿದಾಗ ಹಲವು ಜೀವಗಳನ್ನು ರಕ್ಷಿಸಿದವರು ಚಾರ್ಮಾಡಿ ಹಸನಬ್ಬ. ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಹೃದಯ ಶ್ರೀಮಂತ ಸಮಾಜ ಸೇವೆಯನ್ನು ಆತ್ಮ ಸಂತೋಷಕ್ಕಾಗಿ ಮಾಡುತ್ತಿರುವ ಅಪರೂಪದ ವ್ಯಕ್ತಿ. ಉಜಿರೆ ಹತ್ತಿರದ ಲಾಯಿಲ ಇವರ ಹುಟ್ಟೂರು. ಊಟಕ್ಕೂ ಕಷ್ಟವಿದ್ದ ಕಾಲದಲ್ಲಿ 1ನೇ ತರಗತಿ ತನಕ ಓದಿದರು. ಬಾಳೆಹೊನ್ನೂರಿನಲ್ಲಿ ಹೋಟೆಲೊಂದಕ್ಕೆ ಕೆಲಸಕ್ಕೆ ಸೇರಿದರು. 18ನೇ ವಯಸ್ಸಿನಲ್ಲಿ ಚಾರ್ಮಾಡಿಗೆ ಮರಳಿ ಚಿಕ್ಕ ಹೋಟೆಲ್ ತೆರೆದರು. ಹೊಟೇಲ್‌ಗೆ ಬರುತ್ತಿದ್ದ ಲಾರಿ ಚಾಲಕರು ಕೊಟ್ಟ ವರ್ತಮಾನದಿಂದ ಆ ಮಾರ್ಗದಲ್ಲಾಗುವ ಅಪಘಾತಗಳ ಪರಿಚಯವಾಯಿತು. ಹೀಗಾಗಿ ತುರ್ತು ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಹವ್ಯಾಸ ರೂಢಿಸಿಕೊಂಡರು. 50 ವರ್ಷಗಳಿಂದ ಚಾರ್ಮಾಡಿ ತಪ್ಪಲಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ತಿಂಗಳಿಗೆ ಕನಿಷ್ಠ 3ರಿಂದ 4 ಮತ್ತು ವರ್ಷಕ್ಕೆ ಸರಾಸರಿ 40ರಿಂದ 50 ಬಾರಿ ಇವರು ಹೆದ್ದಾರಿಯುದ್ದಕ್ಕೂ ಧಾವಿಸಿ ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಕೈ ಚಾಚುತ್ತಾರೆ. ಸಾವಿರಾರು ದಾರಿ ಹೋಕರಿಗೆ ನೆರವಾಗುತ್ತಿದ್ದಾರೆ. ಘಾಟಿ ರಸ್ತೆಯಲ್ಲಿ ಯಾವುದೇ ಅಪಾಯ ಉಂಟಾದರೂ ತಕ್ಷಣ ತಮ್ಮ ಕಾರಿನಲ್ಲಿ ಧಾವಿಸಿ ಸಮಸ್ಯೆಗೆ ಸ್ಪಂದಿಸುತ್ತಾರೆ. ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಮಳೆಗಾಲದಲ್ಲಿ ಗುಡ್ಡದ ಕಲ್ಲುಬಂಡೆಗಳು ಜಾರಿ ಕುಸಿದು ಬಿದ್ದರೆ, ಮಣ್ಣಿನ ಚಿಕ್ಕ ಬೆಟ್ಟಗಳು ಕುಸಿದು ರಸ್ತೆ ಬ್ಲಾಕ್ ಆದರೆ, 22 ಕಿ.ಮೀ. ಏರು ಇಳಿತಗಳ ದಾರಿಯಲ್ಲಿ ಟ್ರಕ್‌ಗಳು ಮೇಲೇರಲಾರದೆ ಮುಗ್ಗರಿಸಿ ಬಿದ್ದರೆ ಆಗೆಲ್ಲ ಅಲ್ಲಿಗೆ ಧಾವಿಸುವ ಮೊದಲ ಆಪತ್ಬಾಂಧವ ಎಂದರೆ ಚಾರ್ಮಾಡಿ ಹಸನಬ್ಬ. ‘ಸಮಾಜಸೇವೆ ನಿಲ್ಲಿಸಬೇಡ, ಪ್ರಾಣ ರಕ್ಷಣೆಗಿಂತ ಮಿಗಿಲಾದ ಪುಣ್ಯದ ಕೆಲಸ ಬೇರೊಂದಿಲ್ಲ’ ಎಂದು ಸ್ವತಃ ಹಸನಬ್ಬರ ತಾಯಿ ಮಗನಿಗೆ ಹರಸಿದ್ದರಂತೆ. ತಾಯಿಯ ಆಶೀರ್ವಾದದಂತೆ ಹಸನಬ್ಬ ಇವತ್ತಿಗೂ ಕಾಯಕ ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. 72 ವರ್ಷದ ಹಸನಬ್ಬ ಪತ್ನಿ, ಮೂವರು ಪುತ್ರರ ಜತೆ ವಾಸವಾಗಿದ್ದಾರೆ. 2001ರಲ್ಲಿ ಇವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಮಾರುತಿ ಜನಸೇವಾ ಸಂಘ: ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಮಾರುತಿ ಜನಸೇವಾ ಸಂಘ ಕಳೆದ ಸುಮಾರು 30 ವರ್ಷಗಳಿಂದ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿದೆ. ಮಾರುತಿ ಕ್ರಿಕೆಟರ್ಸ್ ಮೂಲಕ ಹುಟ್ಟು ಪಡೆದ ತಂಡ ಮುಂದೆ ಸಮಾಜಮುಖಿಯಾಗಿಯೂ ತನ್ನನ್ನು ಗುರುತಿಸಿಕೊಂಡಿತು. ಸಂಘದ ಬೆಳ್ಳಿಹಬ್ಬದ ನೆನಪಿಗಾಗಿ ಉಳ್ಳಾಲ ಮೊಗವೀರ ಸಂಘದ ಹಿರಿಯರು ಕಟ್ಟಿಸಿದ್ದ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಗೆ ಅಂದಾಜು 1.5 ಕೋಟಿ ರು. ವೆಚ್ಚದಲ್ಲಿ ಎರಡು ಮಹಡಿಯ ಕಟ್ಟಡ ಮರುನಿರ್ಮಿಸಿ ಕೊಟ್ಟಕೀರ್ತಿ ಈ ಸಂಘಟನೆಗಿದೆ. ಅಲ್ಲದೆ ಉಳ್ಳಾಲದ ಸರ್ವ ಧರ್ಮೀಯರನ್ನು ಸೇರಿಸಿಕೊಂಡು ಪ್ರಥಮ ಬೀಚ್ ಫೆಸ್ಟಿವಲ್ ಆಯೋಜಿಸಿ ಎಲ್ಲರ ಗಮನ ಸೆಳೆದಿತ್ತು. ಈ ಸಂಘಟನೆ ವತಿಯಿಂದ ಕಡಲ್ಕೊರೆತದಿಂದಾಗಿ ಮೆನೆ ಕಳೆದುಕೊಂಡ ನಿರ್ಗತಿಕರಿಗೆ ಐದು ಮನೆ ನಿರ್ಮಿಸಿ ಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು, ಸಾಮೂಹಿಕ ವಿವಾಹ ಕಾರ್ಯಕ್ರಮ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಈ ಸಂಘಟನೆಯೊಂದಿಗೆ ಮಾರುತಿ ಯುವಕ ಮಂಡಲ ಕೂಡ ಸಾಥ್ ನೀಡುತ್ತಿದೆ. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ: ಎರಡು ದಶಕಗಳ ಹಿಂದೆ ಅಂದಿನ ಉನ್ನತ ಶಿಕ್ಷಣ ಸಚಿವರೂ, ಸಾಮಾಜಿಕ, ರಾಜಕೀಯ ಮುತ್ಸದ್ದಿಯೂ ಆದ ದಿ.ಬಿ.ಎ. ಮೊಯಿದೀನ್ ಅವರ ದೂರದೃಷ್ಟಿಯ ಪರಿಕಲ್ಪನೆಯಲ್ಲಿ ಸ್ಥಾಪನೆಗೊಂಡ ಈ ಒಕ್ಕೂಟವು ಸಮುದಾಯದ ಸಬಲೀಕರಣ, ಸಮಾಜದಲ್ಲಿ ಸಾಮರಸ್ಯ ಮತ್ತು ರಾಷ್ಟ್ರದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಂಡು ಪ್ರಗತಿ ಸಾಧಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಈ ಒಕ್ಕೂಟವು ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 180ಕ್ಕೂ ಮಿಕ್ಕಿದ ಮುಸ್ಲಿಂ ಸಮಾಜದ ಆಡಳಿತ ಮಂಡಳಿಯ ಶಿಕ್ಷಣ ಸಂಸ್ಥೆಗಳನ್ನು ನೋಂದಾಯಿಸಿಕೊಂಡಿದ್ದು, ಜಾತಿ ಮತ ಭೇದವಿಲ್ಲದೆ ಬಡ ಮತ್ತು ಮಧ್ಯಮ ವರ್ಗದ 60,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳು, ನಾಗರಿಕ ಸೇವಾ ತರಬೇತಿ ಶಿಬಿರಗಳು, ಬಡ ಮತ್ತು ಆರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಂಗಳೂರು, ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಉನ್ನತ ವ್ಯಾಸಂಗದ ಅವಕಾಶ ಕಲ್ಪಿಸಿಕೊಂಡು ಬರುತ್ತಿದೆ.