ಡಿ. 1ರಿಂದ ನೋಂದಣಿ, ಜನವರಿಯಿಂದ ಭತ್ತ, ರಾಗಿ, ಜೋಳ ಖರೀದಿ

KannadaprabhaNewsNetwork |  
Published : Nov 23, 2023, 01:45 AM IST
ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ 2023-24 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯ ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ ಸಭೆ ಜರುಗಿತು.  | Kannada Prabha

ಸಾರಾಂಶ

ಈಗಾಗಲೇ ಭತ್ತ ಖರೀದಿ ಕೇಂದ್ರಗಳು ಪ್ರಾರಂಭವಾಗಿವೆ. ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಜೋಳ ಬೆಳೆಗಳನ್ನು ಖರೀದಿಸಲು ರೈತರು ಡಿ. 1ರಿಂದ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಖರೀದಿ ಕೇಂದ್ರವಿರುವ ಎಪಿಎಂಸಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಖರೀದಿ ಪ್ರಕ್ರಿಯೆಯನ್ನು 2024ರ ಜ. 1ರಿಂದ ಆರಂಭವಾಗಿ 2024ರ ಮಾರ್ಚ್ ಅಂತ್ಯದವರೆಗೆ ಖರೀದಿ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ, ರಾಗಿ ಮತ್ತು ಜೋಳ ಖರೀದಿ ಕೇಂದ್ರಗಳು ತೆರೆದಿದ್ದು, ರೈತರು ಬೆಳೆದ ಬೆಳೆಗಳನ್ನು ನೋಂದಾಯಿಸಿಕೊಳ್ಳಲು ಡಿ. 1ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 2023- 24ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಭತ್ತ ಖರೀದಿ ಕೇಂದ್ರಗಳು ಪ್ರಾರಂಭವಾಗಿವೆ. ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಜೋಳ ಬೆಳೆಗಳನ್ನು ಖರೀದಿಸಲು ರೈತರು ಡಿ. 1ರಿಂದ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಖರೀದಿ ಕೇಂದ್ರವಿರುವ ಎಪಿಎಂಸಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಖರೀದಿ ಪ್ರಕ್ರಿಯೆಯನ್ನು 2024ರ ಜ. 1ರಿಂದ ಆರಂಭವಾಗಿ 2024ರ ಮಾರ್ಚ್ ಅಂತ್ಯದವರೆಗೆ ಖರೀದಿ ಮಾಡಲಾಗುತ್ತದೆ. ಇದಕ್ಕೆ ಬೇಕಾದ ನೋಂದಣಿ ಮತ್ತು ಖರೀದಿ ಸಿದ್ಧತೆ, ಸಂಗ್ರಹಕ್ಕೆ ಗೋದಾಮುಗಳನ್ನು ಸಿದ್ಧಪಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಖರೀದಿ ಕೇಂದ್ರಗಳು:

2023- 24ನೇ ಸಾಲಿಗೆ ಎಂಎಸ್‌ಪಿ ಕಾರ್ಯಾಚರಣೆಗೆ ಖರೀದಿ ಕೇಂದ್ರಗಳಾಗಿ ಜಿಲ್ಲೆಯಲ್ಲಿ ಬಳ್ಳಾರಿಯ ಎಪಿಎಂಸಿ ಯಾರ್ಡ್, ಕಂಪ್ಲಿಯ ಎಪಿಎಂಸಿ ಯಾರ್ಡ್, ಸಂಡೂರು ಎಪಿಎಂಸಿ ಯಾರ್ಡ್, ಸಿರುಗುಪ್ಪ ಎಪಿಎಂಸಿ ಯಾರ್ಡ್ ಸೇರಿದಂತೆ 4 ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

2023- 24ನೇ ಸಾಲಿಗೆ ಖರೀದಿಸುವ ಕೃಷಿ ಉತ್ಪನ್ನಗಳಾದ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‍ಗೆ ₹2183, ಗ್ರೇಡ್ ಎ- ಭತ್ತಕ್ಕೆ ₹2203, ರಾಗಿಗೆ ₹3846, ಹೈಬ್ರೀಡ್- ಬಿಳಿ ಜೋಳಕ್ಕೆ ₹3180, ಮಾಲ್ದಂಡಿ- ಬಿಳಿ ಜೋಳಕ್ಕೆ ₹3225 ಬೆಂಬಲ ಬೆಲೆಗಳಾಗಿವೆ ಎಂದರು.

ನಿರ್ಧರಿಸಿರುವ ಎಪಿಎಂಸಿ ಸ್ಥಳದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಖರೀದಿ ಕೇಂದ್ರಗಳಿಗೆ ನುರಿತ ಗುಣಮಟ್ಟ ಪರೀಕ್ಷಕರನ್ನು ನೇಮಿಸಬೇಕು ಹಾಗೂ ಗುಣಮಟ್ಟ ಪರಿಶೀಲನೆ ಹೆಸರಲ್ಲಿ ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಎಚ್ಚರ ವಹಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಬಲ ಬೆಲೆ ಕಾರ್ಯಾಚರಣೆ ಬಗ್ಗೆ ಖರೀದಿ ಏಜೆನ್ಸಿಗಳು, ಕೃಷಿ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆಗಳು ಕರಪತ್ರ, ಡಂಗೂರ, ಬ್ಯಾನರ್ ಮೂಲಕ ವ್ಯಾಪಕ ಪ್ರಚಾರ ನೀಡಬೇಕು ಎಂದರು.

ಕೃಷಿ ಇಲಾಖೆಯಿಂದ ಈಗಾಗಲೇ ಜಾರಿಗೊಳಿಸಿರುವ ಫ್ರುಟ್ಸ್ ದತ್ತಾಂಶದಲ್ಲಿರುವ ರೈತರ ಫ್ರುಟ್ಸ್ ಐಡಿ ಮಾಹಿತಿಯನ್ನು ಪಡೆದು, ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿ ರೈತರಿಂದ ಬೆಳೆಗಳನ್ನು ಖರೀದಿಸುವಂತೆ ಸೂಚಿಸಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಸಕೀನಾ, ಕೃಷಿ ಇಲಾಖೆಯ ಉಪ ನಿರ್ದೇಶಕ ದಯಾನಂದ, ಕೆಎಫ್‍ಸಿಎಸ್‍ಸಿಯ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದ ಶಾಖಾ ವ್ಯವಸ್ಥಾಪಕರು, ಎಪಿಎಂಸಿಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ