ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶಗಳಲ್ಲಿ ಇತಿಹಾಸವನ್ನು ಮತ್ತಷ್ಟು ಹೆಕ್ಕಲು ಉತ್ಖನನ ಮಾಡಲಾಗುತ್ತದೆ. ನಿವಿರಾದ ಬ್ರಶ್ ಮೂಲಕ ವರ್ಷಾನುಗಟ್ಟಲೆ ಮಣ್ಣು ತೆಗೆದು ಅಲ್ಲಿ ಏನಾದರೂ ಇತಿಹಾಸದ ಕುರುಹುಗಳು ಸಿಗುತ್ತವೆಯೇ ಎಂದು ಶೋಧ ಮಾಡಲಾಗುತ್ತದೆ. ಹಿಂದೆಲ್ಲ ಹಲವಾರು ಉತ್ಖನನಗಳು ಐತಿಹಾಸಿಕ ಚಿತ್ರದುರ್ಗ ಕೋಟೆ ಒಳ ಆವರಣದಲ್ಲಿ ನಡೆದಿವೆ. ಆದರೆ ಚಿತ್ರದುರ್ಗದಲ್ಲಿ ಇದೀಗ ಹೊಸ ನಮೂನೆಯ ಉತ್ಖನನ ಶುರುವಾಗಿದ್ದು ಆಧುನಿಕ ಎಂಜಿನಿಯರಿಂಗ್ ತಂತ್ರಜ್ಞಾನದ ಶೋಧ ನಡೆದಿದೆ.ಒನ್‌ವೇ ನಲ್ಲೂ ಡಿವೈಡರ್ ನಿರ್ಮಿಸಿ ಜಾಗತಿಕ ಮಟ್ಟದಲ್ಲಿ ತಮ್ಮ ಬುದ್ದಿ ಮತ್ತೆಯ ಪ್ರಚುರಪಡಿಸಿಕೊಂಡಿದ್ದ ಇಲ್ಲಿನ ಎಂಜಿನಿಯರ್‌ಗಳ ಮುಂದುವರಿದ ಕೈಂಕರ್ಯದ ಭಾಗವಾಗಿ ಸಿಸಿ ರಸ್ತೆಗಳ ಮೇಲೆ ಉತ್ಖನನ ಕಾರ್ಯಗಳು ನಿರಂತರವಾಗಿ ನಡೆದಿವೆ. ಚಿತ್ರದುರ್ಗ ನಗರದ ನಾಗರಿಕರಿಗೆ ಕಲ್ಪಿಸಲಾದ ಸೌಲಭ್ಯದ ಪಳೆಯುಳಿಕೆಗಳ ಹುಡುಕಾಟ ನಡೆದಿದೆ. ಸಿಸಿ ರಸ್ತೆ ಅಗೆಯುತ್ತಿರುವ ಪರಿ ನೋಡಿ ಯಾರಾದರೂ ಏನ್ರಪ್ಪಾ ಯಾಕೆ ಅಗೆಯುತ್ತಿರಾ ಎಂದು ಕೇಳಿದರೆ ನಮ್ ಎಂಜಿನಿಯರ್‌ಗಳ ಮೆದುಳು ಹುಡುಕುತ್ತಿದ್ದೇವೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ ಕಾರ್ಮಿಕರು.ಚಿತ್ರದುರ್ಗ ನಗರದಲ್ಲಿ ನೂರಾರು ಕೋಟಿ ಖರ್ಚು ಮಾಡಿ ಸಿಸಿ ರಸ್ತೆಗಳ ನಿರ್ಮಿಸಲಾಗಿದೆ. ರಸ್ತೆಗಳ ಮಾಡುವಾಗ ಭೂಮಿಯಲ್ಲಿ ಏನಾದರೂ ಪೈಪ್ ಲೈನ್ ಇದೆಯಾ, ಕುಡಿವ ನೀರಿನ ಮಾರ್ಗವೇನಾದರೂ ಹೋಗಿದೆಯಾ, ಒಳಚರಂಡಿ ಡ್ರೈನೇಜ್ ಇದೆಯಾ ಎನ್ನುವುದು ಗಮನಿಸಿ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿ. ನಂತರವೇ ಸಿಸಿ ರಸ್ತೆ ಮಾಡಬೇಕು. ಕನಿಷ್ಟ 30 ವರ್ಷಗಳಷ್ಟು ಸುದೀರ್ಘ ಬಾಳಿಕೆ ನಿಟ್ಟಿನಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುತ್ತದೆ. ಹಾಗೊಂದು ವೇಳೆ ಕಾಂಕ್ರಿಟ್ ರಸ್ತೆಗಳ ಅಗದರೆ ಅದನ್ನು ಪುನರ್ ನಿರ್ಮಿಸಲು ಸಾಧ್ಯವಿಲ್ಲ. ದುರಸ್ತಿ ಮಾಡಿದರೂ ಪದೇ ಪದೆ ಕಿತ್ತು ಹೋಗಿ ಗುಂಡಿ ಬೀಳುತ್ತದೆ. ರಸ್ತೆ ಮಾಡಿದ ಉದ್ದೇಶ ಸಫಲವಾಗುವುದಿಲ್ಲ. ಆದರೆ ಚಿತ್ರದುರ್ಗದಲ್ಲಿರುವ ಎಂಜಿನಿಯರ್‌ಗಳು ಭೂಮಿ ಆಳದಲ್ಲಿ ಏನಿವೆ ಎಂದು ಗಮನಿಸದೇ ರಸ್ತೆ ಮೇಲೆ ಕಾಂಕ್ರಿಟ್ ಎಳೆದುಕೊಂಡು ಹೋಗಿದ್ದು ಇದೀಗ ಸೌಲಭ್ಯಗಳ ಹುಡುಕಾಟ ಶುರವಾಗಿವೆ. ಕುರುಡರು ಕೈಯಲ್ಲಿ ಕೋಲಿಡಿದು ರಸ್ತೆ ಕುಟ್ಟಿ ಗುಂಡಿಗಳು ಇಲ್ಲವೆಂಬುದ ಮನವರಿಕೆ ಮಾಡಿಕೊಂಡು ಮುಂದಡಿ ಇಡುವ ರೀತಿ ಒಳಚರಂಡಿ ಸಂಪರ್ಕದ ಚೇಂಬರ್‌ಗಳು ಎಲ್ಲಿವೆ ಎಂದು ಹಾರೆಯಿಂದ ಕುಟ್ಟಿ ಕಾರ್ಮಿಕರು ಪರಿಶೀಲಿಸುತ್ತಿದ್ದಾರೆ.ಚಿತ್ರದುರ್ಗದ ವಾಸವಿ ಮಹಲ್ ಪಕ್ಕ ಭೂಮಿ ಆಳದಲ್ಲಿ ಕುಡಿವ ನೀರು ಪೂರೈಕೆ ವಾಲ್ವ್ ಹೋಗಿದೆ. ಅಲ್ಲಿ ವಾಲ್ವ್ ಇದೆ ಎಂಬ ಕನಿಷ್ಟ ಪ್ರಜ್ಞೆ ಇಲ್ಲದೆ ಎಂಜಿನಿಯರ್‌ಗಳು ಸಿಸಿ ರಸ್ತೆ ಮಾಡಿ ಬಿಲ್ ತಗಂಡು ಸುಮ್ಮನಾದರು. ಕುಡಿವ ನೀರು ಪೂರೈಕೆ ವ್ಯತ್ಯಯವಾದಾಗ ವಾಲ್ವ್ ಗಳ ಹುಡುಕಿಕೊಂಡು ಬಂದ ನಗರಸಭೆ ಸಿಬ್ಬಂದಿ ಅಂತಿಮವಾಗಿ ಭೂಮಿ ಅಗೆದು ಅಳದಲ್ಲಿದ್ದ ವಾಲ್ವ್ ಪತ್ತೆ ಮಾಡಿ ದುರಸ್ತಿ ಕೈಗೊಂಡು ನಿರಾಳವಾಗಿದೆ. ಆದರೆ ಅಗೆದ ರಸ್ತೆ ಎಂದಿನಂತೆ ಮಾಡುವುದು ಕಷ್ಟದ ಕೆಲಸ. ಇಡೀ ಚಿತ್ರದುರ್ಗದ ತುಂಬ ಸಿಸಿ ರಸ್ತೆ ಅಗೆಯುವ ಇಂತಹ ದೃಶ್ಯಗಳು ನಿತ್ಯ ಹತ್ತಾರು ಕಡೆ ಕಂಡು ಬರುತ್ತವೆ.ಚಿತ್ರದುರ್ಗದಲ್ಲಿ ನಿತ್ಯವೂ ಸಿಸಿ ರಸ್ತೆಗಳ ಅಗೆಯುತ್ತಿರುವ ಪರಿ ಸ್ವತಃ ನಗರಸಭೆಗೂ ಅತೀವ ಕಿರಿಕಿರಿಯಾಗಿದೆ. ರಸ್ತೆ ಮಾಡುವಾಗ ನಮ್ಮನ್ನು ಸಂಪರ್ಕಿಸಿಲ್ಲ, ಭೂಮಿಯಾಳದಲ್ಲಿ ಎಲ್ಲೆಲ್ಲಿ ಏನಿವೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ರಸ್ತೆ ಮಾಡಿದ ನಂತರವೂ ಹಸ್ತಾಂತರಿಸಿಲ್ಲವೆಂಬ ಕೊರಗು ಅಧಿಕಾರಿಗಳು. ಯಾರೋ ಮಾಡಿದ ತಪ್ಪಿನಿಂದಾಗಿ ನಾಗರಿಕರಿಂದ ನಿತ್ಯ ಬೈಯಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಚಿತ್ರದುರ್ಗ ಜೆಸಿಆರ್ ಬಡಾವಣೆ 1ನೇ ಕ್ರಾಸ್‌ನಲ್ಲಿರುವ ಶಾಸಕ ವೀರೇಂದ್ರ ಪಪ್ಪಿ ಮನೆ ಪಕ್ಕದಲ್ಲಿಯೇ ಮೂರು ಕಡೆ ಸಿಸಿ ರಸ್ತೆ ಅಗೆಯಲಾಗಿದ್ದು, ಅವೆಲ್ಲ ಬ್ಲಾಕ್ ಸ್ಪಾಟ್‌ಗಳಾಗಿ ರೂಪಾಂತರಗೊಂಡಿವೆ. ಕತ್ತಲಲ್ಲಿ ದ್ವಿಚಕ್ರ ವಾಹನ ಸವಾರರು ಜಾಗರೂಕತೆಯಿಂದ ಹೋಗಬೇಕಾಗಿದೆ. ತುಸು ಮೈಮರತರು ಸೊಂಟದ ಡಿಸ್ಕ್ ಗೆ ಹೊಡೆತ ಬೀಳುತ್ತದೆ. ಚಿತ್ರದುರ್ಗದಲ್ಲಿ ರಸ್ತೆ ಅಗೆಯುತ್ತಿರುವ ಈ ಪರಿ ಗಮನಿಸಿದರೆ ಊರು ತುಂಬಾ ರಸ್ತೆಗಳ ಬದಲಾಗಿ ಗುಂಡಿಗಳೇ ಕಾಣಿಸುತ್ತವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ರಸ್ತೆ ಸುರಕ್ಷತಾ ಸಮಿತಿ, ರಸ್ತೆ ಸುರಕ್ಷಿತ ಪ್ರಾಧಿಕಾರಗಳು ಅಗತ್ಯವಿದೆಯೇ ಎಂಬ ಪ್ರಶ್ನೆಗಳು ಎದುರಾಗುತ್ತವೆ. ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರ ಕಚೇರಿ ರಸ್ತೆಗೆ ದಿಗ್ಬಂಧನಚಿತ್ರದುರ್ಗ ನಗರದ ಹಲವು ಕಡೆ ಸಿಸಿ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒಳಚರಂಡಿಯ ಫಿಟ್ ಹುಡುಕಿ ಸಂಪರ್ಕ ಕಲ್ಪಿಸಲು ತಮ್ಮ ಕಚೇರಿ ಮುಂಭಾಗದ ಸಿಸಿ ರಸ್ತೆಯನ್ನೇ (ಭದ್ರಾ ಮೇಲ್ದಂಡೆ ಅನುದಾನದಲ್ಲಿ ಮಾಡಿಸಿದ ರಸ್ತೆ ಇದು) ಅಗೆದಿದ್ದಾರೆ. ಜಿಲ್ಲಾಧಿಕಾರಿ ತಮ್ಮ ನಿವಾಸದಿಂದ ಕಚೇರಿಗೆ ಹೋಗುವ ಮಾರ್ಗ ಇದಾಗಿದ್ದು ಎರಡನೇ ಶನಿವಾರ, ಭಾನುವಾರ ನೋಡಿಕೊಂಡು ರಸ್ತೆ ಅಗೆದು ಒಳಚರಂಡಿ ಸಂಪರ್ಕ ಕಲ್ಪಿಸಲಾಗಿದೆ. ಅಂದರೆ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರಿಗೆ ತಮ್ಮ ಕಚೇರಿಗೆ ಹೋಗಲು ಸಾಧ್ಯವಾಗದಷ್ಟರ ಮಟ್ಟಿಗೆ ವಿಧಿಸಿದ ದಿಗ್ಬಂಧನದಂತೆ ಬ್ಯಾರಿಕೇಡ್ ಗಳನ್ನು ಇಟ್ಟು ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು.
.