ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಯುವಕನೋರ್ವ ಬೈಕ್‌ನಲ್ಲಿ ಬಂದು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾನೆ ನನಗೆ ರಕ್ಷಣೆ ಬೇಕು ಎಂದು ಪಿಯುಸಿ ವಿದ್ಯಾರ್ಥಿನಿ ಮಕ್ಕಳ ಗ್ರಾಮಸಭೆಯಲ್ಲಿ ಮನವಿ ಮಾಡಿದ ಬೆಳವಣಿಗೆ ಬುಧವಾರ ನಡೆದಿದೆ.ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿನಿ ಸಹನ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಐಗೂರು ಗ್ರಾಮ ಪಂಚಾಯಿತಿ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿ ತನ್ನ ಅಸಹಾಯಕತೆ ವ್ಯಕ್ತಪಡಿಸಿದರು.
ಸಂಜೆ ತರಗತಿ ಮುಗಿದ ನಂತರ ಬಸ್‌ನಲ್ಲಿ ತೆರಳು ತಂಗುದಾಣದಲ್ಲಿ ನಿಂತಿರುವಾಗ ಬೈಕ್‌ನಲ್ಲಿ ಬರುವ ಯುವಕ ಕೆಟ್ಟದಾಗಿ ಕೈಸನ್ನೆ ಮಾಡುತ್ತಾನೆ. ಮೊನ್ನೆ ನನ್ನ ಹೆಸರು ಕೇಳಿದ, ನನಗೆ ಶಾಲೆಗೆ ಬರಲು ಭಯವಾಗುತ್ತಿದೆ ಎಂದು ವಿದ್ಯಾರ್ಥಿನಿ ಹೇಳಿದರು.ವಿದ್ಯಾರ್ಥಿನಿಗೆ ಧೈರ್ಯ ತುಂಬಿದ ಚಿಲ್ಡ್ರನ್ಸ್ ಮೂವ್ಮೆಂಟ್ ಫಾರ್ ಸಿವಿಕ್ ಅವೆರ್ನೆಸ್(ಸಿಎಂಸಿಎ) ಸಂಸ್ಥೆಯ ಅಸೋಸಿಯೇಟ್ ಡೈರೆಕ್ಟರ್ ಎಂ.ಪಿ. ಮರುಳಪ್ಪ ಅವರು, ನಿನಗೆ ಎಲ್ಲಾ ಭದ್ರತೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಪೊಲೀಸರಿಗೆ ಮಾಹಿತಿ ನೀಡುತ್ತೇನೆ. ಶಿಕ್ಷಕಿಯರು ವಿದ್ಯಾರ್ಥಿನಿಗೆ ಧೈರ್ಯ ಹೇಳಿ, ಪೂರ್ಣ ಮಾಹಿತಿ ಸಂಗ್ರಹಿಸಿ ಕೊಡಬೇಕು ಎಂದು ಪಿಡಿಒ ಪೂರ್ಣಕುಮಾರ್ ಹೇಳಿದರು.
ರಾತ್ರಿ ಸಮಯದಲ್ಲಿ ಕಾಲೇಜು ಆವರಣದಲ್ಲಿ ಮದ್ಯದ ಬಾಟಲಿಗಳನ್ನು ಒಡೆದಿರುತ್ತಾರೆ. ಶೌಚಗೃಹದ ಬಾಗಿಲು ಒಡೆದು ಹಾಕಿದ್ದಾರೆ. ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ೫೫ ಮಂದಿ ಬಾಲಕಿಯರು ಇದ್ದೇವೆ. ಶೌಚಗೃಹದ ಸಮಸ್ಯೆಯಿದೆ. ಕಟ್ಟಿಸಿಕೊಡಿ. ಹಾಗೂ ಕಾಲೇಜು ಸುತ್ತಲು ಭದ್ರತಾ ಬೇಲಿಯ ಅವಶ್ಯಕತೆ ಇದೆ ಎಂದು ವಿದ್ಯಾರ್ಥಿಗಳಾದ ರೊಸ್ನಿ, ಸಹನಾ ಮತ್ತಿತರ ವಿದ್ಯಾರ್ಥಿನಿಯರು ಮನವಿ ಮಾಡಿದರು.ಐಗೂರು ಗ್ರಾಮ ಪಂಚಾಯಿತಿಗೆ ಆದಾಯದ ಮೂಲಗಳಿಲ್ಲ. ಬಂದ ಅನುದಾನದಲ್ಲೇ ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ ಹಣ ವಿನಿಯೋಗಿಸಬೇಕು. ಶೌಚಗೃಹ ನಿರ್ಮಾಣ ಮಾಡಿಕೊಡಲಾಗುವುದು ಎಂದು ಪಿಡಿಒ ಭರವಸೆ ನೀಡಿದರು.
ಐಗೂರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದೀಕ್ಷಿತ ಮತ್ತು ರಕ್ಷಿತಾ ಮಾತನಾಡಿ, ನಮಗೆ ತಂದೆ, ತಾಯಿ ತೀರಿಕೊಂಡಿದ್ದಾರೆ. ಅಜ್ಜಿಯ ಮನೆಯಲ್ಲಿ ವಾಸವಿದ್ದು, ಅಜ್ಜಿ ಕೂಲಿ ಮಾಡಿ ಸಾಕಬೇಕು. ನಮ್ಮಿಬ್ಬರಿಗೆ ಭವಿಷ್ಯ ಕಟ್ಟಿಕೊಡಿ ಎಂದು ಮನವಿ ಮಾಡಿದರು. ಪ್ರಾಯೋಜಕತ್ವ ಯೋಜನೆಯಲ್ಲಿ ಮಕ್ಕಳಿಗೆ ಸೌಲಭ್ಯ ಒದಗಿಸಲು ಅವಕಾಶವಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀಕ್ಷರು ಅರ್ಜಿಯನ್ನು ತೆಗೆದುಕೊಂಡು ಕ್ರಮವಹಿಸಬೇಕು. ಈ ಬಗ್ಗೆ ಪಿಡಿಒ ಅವರು ಎಲ್ಲಾ ಸಹಾಯವನ್ನು ನೀಡಬೇಕು ಎಂದು ಮರುಳಪ್ಪ ಹೇಳಿದರು.ಯಡವಾರೆ ಸುತ್ತಮುತ್ತಲಿನ ಕಾರ್ಮಿಕರ ಮಕ್ಕಳು ೧೪ ಕಿ.ಮೀ. ನಡೆದುಕೊಂಡು ಬರಬೇಕು. ಮೀಸಲು ಅರಣ್ಯದಲ್ಲಿ ಕಾಲ್ನಡಿಗೆಯಲ್ಲಿ ಬರಲು ಕಾಡಾನೆಗಳ ಭಯವೂ ಇದೆ. ಮಳೆಗಾಲದಲ್ಲಿ ಬಟ್ಟೆ ಒದ್ದೆಯಾಗುತ್ತದೆ. ವಾಹನದ ವ್ಯವಸ್ಥೆ ಮಾಡಿಕೊಡಿ ಎಂದು ಕಾಜೂರು ಸರ್ಕಾರಿ ಶಾಲೆಯ ರೋಶಿನಿ, ಹರ್ಷಿಕ, ವೇಣುಗೋಪಾಲ್ ಬೇಡಿಕೆಯಿಟ್ಟರು.
ಕಾಜೂರು ಸರ್ಕಾರಿ ಶಾಲೆಯಲ್ಲಿ ೬೩ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಮುರುಕಲು ಡೆಸ್ಕ್, ಬೆಂಚ್‌ನಲ್ಲಿ ಕೂರುವಂತ ಪರಿಸ್ಥಿತಿ ಇದೆ ಎಂದು ದೀಪ್ತಿ ಅಸಹಾಯಕತೆ ವ್ಯಕ್ತಪಡಿಸಿದರು. ಬೀಡಾಡಿ ದನಗಳ ಕಾಟವಿದೆ, ಯಡವಾರೆ ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಡಬೇಕು ಎಂದು ನಂದಿನಿ ಕೇಳಿಕೊಂಡರು.ಮಡಿಕೇರಿ ರಸ್ತೆ ಬಜೆಗುಂಡಿ ಜಂಕ್ಷನ್‌ನಿಂದ ವಿವಿಧ ಶಾಲಾ ಕಾಲೇಜುಗಳಿಗೆ ೭೦ ಮಂದಿ ವಿದ್ಯಾರ್ಥಿಗಳು ಬಸ್‌ನಲ್ಲಿ ಸಂಚರಿಸುತ್ತಾರೆ. ಶಾಲಾ ಕಾಲೇಜು ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲ. ತಿಂಗಳಿಗೆ ೭೦೦ರಿಂದ ೧೦೦೦ ರು.ಗಳನ್ನು ಬಸ್‌ಗೆ ನೀಡಬೇಕಾಗಿದೆ. ಕೂಲಿ ಕಾರ್ಮಿಕರ ಮಕ್ಕಳೆ ಹೆಚ್ಚಿದ್ದಾರೆ. ಬೆಳಿಗ್ಗೆ ಸಂಜೆ ಸರ್ಕಾರಿ ಬಸ್ ಕಲ್ಪಿಸಬೇಕು ಎಂದು ಕಾಲೇಜು ವಿದ್ಯಾರ್ಥಿನಿ ಫಾತಿಮತ್ ಫಾರಿಜಾ ಹೇಳಿದರು.ಬಸ್ ವ್ಯವಸ್ಥೆ ಕಲ್ಪಿಸಲು ಶಾಸಕ ಡಾ.ಮಂತರ್‌ಗೌಡ ಅವರೊಂದಿಗೆ ಚರ್ಚಿಸುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಭರವಸೆ ನೀಡಿದರು.
ಯಡವನಾಡು ಮಹರ್ಷಿ ವಾಲ್ಮಿಕಿ ವಸತಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಆಟದ ಮೈದಾನವೇ ಇಲ್ಲ ಎಂದು ವಿದ್ಯಾರ್ಥಿ ಅಮರಸಿಂಹ ಹೇಳಿದರು. ಸದ್ಯಕ್ಕೆ ಪಕ್ಕದ ಸರ್ಕಾರಿ ಶಾಲೆಯ ಮೈದಾನದಲ್ಲಿ ಆಟವಾಡಿಕೊಳ್ಳುವಂತೆ ಪಿಡಿಒ ಸಲಹೆ ನೀಡಿದರು.ನಾವು ಪ್ರತಿಷ್ಠಾನ ಸಂಸ್ಥೆಯ ಮುಖ್ಯಸ್ಥ ಸುಮನ ಮ್ಯಾಥ್ಯು ಮಾತನಾಡಿ, ೨೦೧೧ರ ಸರ್ವೆ ಪ್ರಕಾರ ರಾಷ್ಟ್ರದಲ್ಲಿ ಶೇ.೩೮ರಷ್ಟು ೧೮ ವರ್ಷಗಳ ವರೆಗಿನ ಮಕ್ಕಳಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ.೪೫ರಷ್ಟು ಮಕ್ಕಳಿದ್ದಾರೆ. ಇವರಿಗೆ ಮಕ್ಕಳ ಹಕ್ಕಿನ ಸೌಲಭ್ಯ ಲಭಿಸುತ್ತಿದೆಯೋ ಎಂಬ ಸಂಶಯವಿದೆ. ೧೦೦ಮಂದಿ ಗರ್ಭೀಣಿಯರಲ್ಲಿ ಶೇ.೭ರಷ್ಟು ಬಾಲಗರ್ಭಿಣಿಯರು ಇದ್ದಾರೆ. ಮಕ್ಕಳನ್ನು ರಕ್ಷಿಸಲೇ ಬೇಕಾದ ಅನಿವಾರ್ಯತೆ ಇದೆ. ಮಕ್ಕಳ ರಕ್ಷಣೆಯ ಜವಾಬ್ದಾರಿ ಇಡೀ ಸಮುದಾಯದ ಮೇಲಿದೆ ಎಂದು ಹೇಳಿದರು.
ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಜುನೈದ್, ಬೇಬಿ, ಜಾನಕಿ, ಸಿಆರ್‌ಪಿ ಗಿರೀಶ್ ಇದ್ದರು.