ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮೂಲ್ಕಿಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿರುವ ದೇವರಗುಡ್ಡೆ ಬಳಿಯ ಅರಸಲುಪದವಿನಿಂದ ದಿನಂಪ್ರತಿ ಆಂಧ್ರಪ್ರದೇಶಕ್ಕೆ ಮಳೆಗಾಲದಲ್ಲಿ ಲೋಡುಗಟ್ಟಲೆ ಮಣ್ಣು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಕಟೀಲು, ಎಕ್ಕಾರು ಆಸುಪಾಸಿನಲ್ಲಿ ಗುಡ್ಡಕುಸಿತವಾಗಿ ಅಪಾಯ ಆಗುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಪ್ರಸಿದ್ಧ ಕ್ಷೇತ್ರವಾಗಿರುವ ಕಟೀಲು ದೇವಸ್ಥಾನದ ಹಿಂಬದಿ ದೇವರಗುಡ್ಡೆ ಅರಸುಲಪದವು ಬಳಿ 60 ಎಕರೆಗೂ ಹೆಚ್ಚು ಜಾಗದಲ್ಲಿ18 ಹೆಚ್ಚು ಕಡೆ ಕೆಂಪು ಕಲ್ಲುಕ್ವಾರಿಗಳು ನಡೆಯುತ್ತಿದ್ದು, ಯಾವುದನ್ನೂ ಮುಚ್ಚದೆ ಹಾಗೆ ಬಿಟ್ಟಿರುವುದರಿಂದ ನೀರು ತುಂಬಿ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಮಧ್ಯೆ ಎಕ್ಕಾರಿನ ಅರಸುಲು ಪದವಿನಿಂದ ಆಂಧ್ರಪ್ರದೇಶಕ್ಕೆ ಸಿಮೆಂಟ್‌ಗೆ ಮಿಕ್ಸ್ ಮಾಡಲು ಎಂದು ಹೇಳಿಕೊಂಡು ಲೋಡುಗಟ್ಟಲೆ ಮಣ್ಣು ಹೋಗುತ್ತಿದ್ದು ಖಾಸಗಿಯವರ ಭೂಮಿಯಿಂದ ಮಣ್ಣು ಪ್ರತಿದಿನ ಹತ್ತಕ್ಕಿಂತಲೂ ಹೆಚ್ಚು ಲೋಡು 16 ಚಕ್ರಗಳ ಲಾರಿಗಳಲ್ಲಿ ಹೋಗುತ್ತಿದೆ. ಸರ್ಕಾರದಿಂದ ಲೀಸ್ ಮಾಡಲಾಗಿದ್ದು ಇಲಾಖೆಗಳು ಅನುಮತಿ ಕೊಟ್ಟಿವೆ ಎನ್ನಲಾಗುತ್ತಿದೆಯಾದರೂ, ಮುಂದಿನ ದಿನಗಳಲ್ಲಿ ಭೂಕುಸಿತದ ಆತಂಕ ಎದುರಾಗುವ ಬಗ್ಗೆ ಸ್ಥಳೀಯರು ಹೇಳುತ್ತಾರೆ.ಕಟೀಲು ಬಳಿಯ ಎಕ್ಕಾರಿನಿಂದ ನೆಲ್ಲಿತೀರ್ಥಕ್ಕೆ ಹೋಗುವ ಒಂದು ಕಿಲೋಮೀಟರ್ ವ್ಯಾಪ್ತಿಯಷ್ಟು ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿದ್ದು 16 ಚಕ್ರದ ಲಾರಿ ಹೋಗಬಾರದು ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ.
ದಿನಕ್ಕೆ 200ಕ್ಕೂ ಹೆಚ್ಚು ಲಾರಿಗಳು ಇಲ್ಲಿ ಓಡಾಟ ನಡೆಸುತ್ತಿದ್ದು, ರಸ್ತೆಯಲ್ಲಿ ಕೆಸರಾಗಿ ದ್ವಿಚಕ್ರ ವಾಹನ ಸವಾರರು ಬೀಳುವುದು, ಸಣ್ಣ ಪುಟ್ಟ ಅಪಘಾತವಾಗುವುದು ಮಾಮೂಲಾಗಿದೆ. ಮೂರು ನಾಲ್ಕು ತಿಂಗಳಿನಿಂದ ಮಣ್ಣು ಹೋಗುತ್ತಿದ್ದು ಗಣಿ ಇಲಾಖೆಗೆ, ಲೋಕಾಯುಕ್ತ ಕ್ಕೆ ಮೌಖಿಕವಾಗಿ ದೂರು ನೀಡಿದರೂ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.................
ದೇವರಗುಡ್ಡೆಯ ಸಮೀಪದಿಂದ ಆಂಧ್ರ ಪ್ರದೇಶಕ್ಕೆ ಮಣ್ಣು ಸಾಗಾಟ ನಡೆಯುತ್ತಿದ್ದು ಗ್ರಾಮೀಣ ಪ್ರದೇಶದ ಇಕ್ಕಟ್ಟಾದ ಒಳ ರಸ್ತೆಯಲ್ಲಿ 16 ಚಕ್ರದ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಫೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ದೊಡ್ಡ ಹೊಂಡಗಳಾಗಿದ್ದು ಕೆಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳಾಗಿವೆ. ಮಣ್ಣು ಸಾಗಾಟ ಬಗ್ಗೆ ಗಣಿ ಇಲಾಖೆಗೆ ದೂರು ನೀಡಿದ್ದು ,ಇಲ್ಲಿನ ರಸ್ತೆಯು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ಜಿ.ಪಂ.ಗೆ ದೂರು ನೀಡಲಾಗಿದೆ. ಕೂಡಲೇ ಮಣ್ಣು ಸಾಗಾಟವನ್ನು ನಿಲ್ಲಿಸಿ ಒಳ ರಸ್ತೆಯನ್ನು ದೊಡ್ಡ ದೊಡ್ಡ ಲಾರಿಗಳಿಂದ ಸಂಚಾರ ಮುಕ್ತಗೊಳಿಸಬೇಕು- ಸ್ಟ್ಯಾನಿ ಪಿಂಟೋ, ಸಮಾಜ ಸೇವಕ.ಬಡಗ ಎಕ್ಕಾರು ಭಾಗದ ಸುಮಾರು 15 ಕಡೆಗಳಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಈಗಾಗಲೇ ಎರಡು ಪ್ರಕರಣ ದಾಖಲಿಸಿದ್ದೇವೆ. ಇಲ್ಲಿ ಕೆಲವರು 50 ಸೆಂಟ್ಸ್ ಗಣಿಗಾರಿಕೆಗೆ ಪರವಾನಗಿ ಪಡೆದು ಒಂದು ಎಕರೆ ವರೆಗೂ ಗಣಿಗಾರಿಕೆ ಮಾಡಿದ್ದಾರೆ, ಸರ್ಕಾರಿ ಜಾಗವನ್ನೂ ಒತ್ತುವರಿ ಮಾಡಿದ್ದಾರೆ. ಯಾರೆಲ್ಲ ಅಕ್ರಮದಲ್ಲಿ ಭಾಗಿಯಾಗುತ್ತಿದ್ದಾರೋ ಅವರ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ. ಖಂಡಿತಾ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. -ಮಹೇಶ್, ಗಣಿ ಇಲಾಖೆ ಅಧಿಕಾರಿ