₹ 500ರ ಗಡಿ ತಲುಪಿದ ಕೃಷಿ ಕೂಲಿಕಾರರ ದಿನಗೂಲಿ

KannadaprabhaNewsNetwork |  
Published : Jul 06, 2025, 01:48 AM ISTUpdated : Jul 06, 2025, 01:28 PM IST
ಪೋಟೋ ಇದೆ. | Kannada Prabha

ಸಾರಾಂಶ

ಮುಂಗಾರಿ ಬಿತ್ತನೆಯಾಗಿ ತಿಂಗಳಾಗುತ್ತ ಬಂದಿದೆ. ಹದಭರಿತ ಮಳೆ ಹಿನ್ನೆಲೆಯಲ್ಲಿ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದು, ಜತೆ ಜತೆಗೆ ಹುಲ್ಲು, ಕಸ ಸಹ ಹೆಚ್ಚಾಗಿ ಬೆಳೆದಿದ್ದು, ಈ ಕಳೆ ತೆಗೆಯಲು ಕೂಲಿಯಾಳುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ದಿನವೊಂದಕ್ಕೆ ₹ 400ರಿಂದ 500 ವರೆಗೂ ದುಡಿಯುತ್ತಿದ್ದಾರೆ.

ಶಿವಾನಂದ ಅಂಗಡಿ 

ಹುಬ್ಬಳ್ಳಿ: ಮುಂಗಾರಿ ಬಿತ್ತನೆಯಾಗಿ ತಿಂಗಳಾಗುತ್ತ ಬಂದಿದೆ. ಹದಭರಿತ ಮಳೆ ಹಿನ್ನೆಲೆಯಲ್ಲಿ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದು, ಜತೆ ಜತೆಗೆ ಹುಲ್ಲು, ಕಸ ಸಹ ಹೆಚ್ಚಾಗಿ ಬೆಳೆದಿದ್ದು, ಈ ಕಳೆ ತೆಗೆಯಲು ಕೂಲಿಯಾಳುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ದಿನವೊಂದಕ್ಕೆ ₹ 400ರಿಂದ 500 ವರೆಗೂ ದುಡಿಯುತ್ತಿದ್ದಾರೆ.ಮುಂಗಾರು ಪೂರ್ವದಲ್ಲಿ ಕೃತಿಕಾ ಹಾಗೂ ರೋಹಿಣಿ ಮಳೆ ಹದವಾಗಿ ಸುರಿದ ಹಿನ್ನೆಲೆಯಲ್ಲಿ ಈ ಬಾರಿ ಜೂನ್‌ ಮೊದಲ ವಾರದಲ್ಲೇ ಹೆಸರು ಕಾಳು, ಗೋವಿನಜೋಳ, ಸೋಯಾಬಿನ್‌, ಶೇಂಗಾ ಸೇರಿ ಹಲವು ಬೀಜಗಳು ಬಿಡುವಿಲ್ಲದೇ ಬಿತ್ತನೆಯಾಗಿದೆ. ಹೀಗಾಗಿ ಬೆಳೆಗಳು ಹಚ್ಚ ಹಸುರಿನಿಂದ ನಳನಳಿಸುತ್ತಿದ್ದು, ಹುಲ್ಲು ಸಹ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ನಿಂತಿದೆ.

ಟ್ರ್ಯಾಕ್ಟರ್‌, ಎತ್ತುಗಳ ಹೊಂದಿದ ರೈತರು ಎಡಿ ಹೊಡೆದು ಬೆಳೆಗಳ ಸಾಲುಗಳ ಮಧ್ಯೆ ಬೆಳೆ ಕಸ, ಹುಲ್ಲನ್ನು ಹಸನುಗೊಳಿಸಿದ್ದಾರೆ. ಬೆಳೆ ಮಧ್ಯದ ಹುಲ್ಲು ತೆಗೆಯಲು ಸದ್ಯ ಕೂಲಿಯಾಳುಗಳೇ ಬೇಕಾಗಿದ್ದು, ಎಲ್ಲೆಡೆ ಬೇಡಿಕೆ ಹೆಚ್ಚಾಗಿ ಕೂಲಿ ದರ ಸಹ ಹೆಚ್ಚಾಗುತ್ತ ಸಾಗಿದೆ.

ಎಡಿ ಹೊಡೆಯುವುದೂ ದುಬಾರಿ:ಎತ್ತುಗಳ ಸಂಖ್ಯೆಯೇ ಕಡಿಮೆಯಾಗಿರುವುದರಿಂದ ಎಡೆ ಹೊಡೆಯಲು ಸಹ ನಾಲ್ಕು ಎಕರೆ ಹೊಲಕ್ಕೆ 3 ಸಾವಿರ ವರೆಗೂ ಹಣ ನೀಡಬೇಕಾಗಿದೆ. ಜತೆಗೆ ಈ ಕಾರ್ಯಕ್ಕೆ ಈಗಾಗಲೇ ಸಣ್ಣ ಸಣ್ಣ ಗಾಲಿಯ ಟ್ರ್ಯಾಕ್ಟರ್‌ಗಳು ಸಹ ಬಂದಿದ್ದು, ಅವುಗಳ ಬಾಡಿಗೆ ಸಹ ಕಡಿಮೆಯೇನು ಇಲ್ಲ. ಮೂರು ಕುಂಟಿ ಕಟ್ಟಿದರೆ ಒಂದು ಕುಂಟಿಗೆ ಎತ್ತುಗಳ ಮಾಲೀಕ, ಇನ್ನೆರಡು ಕುಂಟಿಗೆ ಆಳುಗಳೇ ಬೇಕು, ಅವರಲ್ಲಿ ಒಬ್ಬೊಬ್ಬ 500 ರು. ಕೂಲಿ ಪಡೆಯುತ್ತಿರುವುದರಿಂದ ನಾಲ್ಕು ಎಕರೆ ಹೆಸರು ಬಿತ್ತಿದ ರೈತ ಎಡೆ ಹೊಡಿಸಲು 3500ರಿಂದ 4 ಸಾವಿರ ರು. ಖರ್ಚು ಮಾಡಬೇಕಾಗಿದೆ.

ಹೆಸರು ಕಾಳು ಹಾಗೂ ಗೋವಿನ ಜೋಳ ಕಟಾವಿಗೆ ಕೆಲ ವರ್ಷಗಳಿಂದ ಬೃಹತ್‌ ಪ್ರಮಾಣದ ಒಕ್ಕಲಿ ಯಂತ್ರಗಳು ಬಂದಿದ್ದು, ಹೀಗಾಗಿ ಸುಗ್ಗಿ ಕಾಲಕ್ಕೆ ಅಷ್ಟೊಂದು ಕಾರ್ಮಿಕರು ಬೇಕಾಗುವುದಿಲ್ಲ. ಆದರೆ ಕಳೆ ತೆಗೆದು ಹೊಲಗಳು ಹಸನಾಗುವವರೆಗೂ ಕಾರ್ಮಿಕರ ಬೇಡಿಕೆಗಳನ್ನು ಪುರಸ್ಕರಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಅಣ್ಣಿಗೇರಿ ರೈತರು.

ಅಣ್ಣಿಗೇರಿಯ ಜಮೀನುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರಾಪುರವರೆಗೆ ಹಾಗೂ ನವಲಗುಂದ ರಸ್ತೆಯಲ್ಲಿ ನವಲಗುಂದವರೆಗೂ ಹಾಗೂ ಗದಗ ರಸ್ತೆಯಲ್ಲಿ 8ರಿಂದ 10 ಕಿಮೀ ದೂರದಲ್ಲಿದ್ದು, ಕೂಲಿ ಕಾರ್ಮಿಕರನ್ನು ಹೊಲಕ್ಕೆ ಕರೆದುಕೊಂಡು ಹೋಗಲು ಟ್ರ್ಯಾಕ್ಟರ್‌ ಇಲ್ಲವೇ ಬೇರೆ ವಾಹನದ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಹೀಗಾಗಿ ಹೆಚ್ಚು ಹಿಡುವಳಿ ಹೊಂದಿದ ಜಮೀನುದಾರರಿಗೆ ಕಳೆ ತೆಗೆಯುವುದೇ ವೆಚ್ಚದಾಯಕವಾಗಿ ಪರಿಣಮಿಸಿದೆ.

ಕೃಷಿ ಕೆಲಸಕ್ಕೆ ಕೂಲಿಯಾಳುಗಳೇ ಸಿಗುತ್ತಿಲ್ಲ. ಹೀಗಾಗಿ ಮುಂಗಾರಿ ಆರಂಭದಲ್ಲಿ ನಮ್ಮ ಭಾಗದಲ್ಲಿ ಕಳೆ ತೆಗೆಯಲು 500 ರು. ಪಡೆಯುತ್ತಿದ್ದಾರೆ. ಕಳೆ ತೆಗೆದು ಹೊಲ ಹಸನು ಮಾಡದಿದ್ದರೆ ಬೆಳೆ ಉಳಿಯುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ದುಬಾರಿ ಕೂಲಿ ತೆತ್ತು ಹೊಲ ಹಸನು ಮಾಡಬೇಕಾಗಿದೆ ಬಂಡಿವಾಡ ರೈತ ಬಸವರಾಜ ಮೇಗೂರ ಹೇಳಿದರು.

ಅಣ್ಣಿಗೇರಿಯಲ್ಲಿ ಕಳೆ ಸುಗ್ಗಿ ಜೋರಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ 300 ರು. ಕೂಲಿ ಕೊಡುತ್ತಾರೆ. ಸಂಜೆ ಮತ್ತ ಬೇರೆ ಹೊಲಕ್ಕೆ ಹೋಗುತ್ತೇವೆ. ಸಂಜೆ ಸಹ 150 ರು.ವರೆಗೂ ಕೂಲಿ ಸಿಗುತ್ತಿದೆ. ಕೂಲಿಕಾರ ಅಭಾವ ಹೆಚ್ಚಾಗಿದ್ದು, ಕೂಲಿ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಣ್ಣಿಗೇರಿ ಕೂಲಿಕಾರ್ಮಿಕ ರಮೇಶ ಹೇಳಿದರು.

PREV
Read more Articles on