ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಪ್ರಸಕ್ತ ಕರ್ನಾಟಕದ ಚಿಕ್ಕಮಗಳೂರು, ಹಾಸನ , ಕೊಡಗು ಜಿಲ್ಲೆಗಳಲ್ಲಿ ಬೆಳೆಸಲಾಗುವ ಕಾಫಿ ಬೆಳೆಯ ಒಂದು ತಳಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿಯೂ ಬೆಳೆಯಬಹುದೆಂಬುದನ್ನು ಸಂಶೋಧನೆ ಮುಂಚಿತವಾಗಿಯೇ ಇಲ್ಲಿನ ರೈತರು ಸಾಧಿಸಿ ತೋರಿಸಿದ್ದಾರೆ. ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹದೊಂದಿಗೆ ಹೆಚ್ಚಿನ ಇಳುವರಿ ಪಡೆಯಲು ಮುಂದಾಗಬೇಕೆಂದು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಫಿ ಬೋರ್ಡ್ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಚಂದ್ರಶೇಖರ್ ಕರೆ ನೀಡಿದ್ದಾರೆ.ಉಪ್ಪಿನಂಗಡಿಯ ಚಂದ್ರಶೇಖರ್ ತಾಳ್ತಜೆ ಅಡಕೆ ತೋಟದಲ್ಲಿ ಉಪ ಬೆಳೆಯಾಗಿ ಮಾಡಿರುವ ಕಾಫಿ ಬೆಳೆಯನ್ನು ಬುಧವಾರ ಪರಿಶೀಲಿಸಿದ ಬಳಿಕ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಾಫಿ ತಳಿಯಲ್ಲಿ ಅರೆಬಿಕಾ ಮತ್ತು ರೊಬಸ್ಟೊ ತಳಿಗಳಿದ್ದು, ಈ ಪೈಕಿ ಸಾಮಾನ್ಯವಾಗಿ ಅರೆಬಿಕಾಗೆ ಸಮುದ್ರ ಮಟ್ಟದಿಂದ ೧೦೦೦ ಮೀಟರ್ ಎತ್ತರದ ಪ್ರದೇಶದಲ್ಲಿ ಉತ್ತಮ ಇಳುವರಿ ನೀಡಿದರೆ, ಅದಕ್ಕಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ ರೋಬಾಸ್ಟೊ ತಳಿ ಬೆಳೆಸಬಹುದಾಗಿದೆ. ಈ ಕಾರಣಕ್ಕೆ ದಕ್ಷಿಣ ಕನ್ನಡದ ಈ ಭಾಗದಲ್ಲಿ ರೋಬಾಸ್ಟೊ ತಳಿ ಬೆಳೆಸಬಹುದೆಂದು ತಿಳಿಸಿದರು.ಚಟ್ಟಳ್ಳಿ ಕಾಫಿ ಬೋರ್ಡು ಸಂಶೋಧನಾ ವಿಭಾಗದ ಉಪ ನಿರ್ದೇಶಕಿ, ಚಟ್ಟಳ್ಳಿ ಕಾಫಿ ಮಂಡಳಿ ಚೇರ್ಮನ್ ಡಾ. ಝೀನಾ ದೇವಸ್ಯ ಮಾತನಾಡಿ , ಈ ಭಾಗದ ಮಣ್ಣಿನ ಫಲವತ್ತತೆ ಅಧ್ಯಯನ ಒಳಪಡಿಸಬೇಕಾಗಿದ್ದು, ಇಲ್ಲಿನ ಕೃಷಿಕರ ಅಭಿಪ್ರಾಯದಂತೆ ಇಲ್ಲಿನ ಮಣ್ಣು ಸೂಕ್ತ ಫಲವತ್ತತೆ ಹೊಂದಿದೆ ಎಂದು ತಿಳಿದು ಬಂದಿದ್ದು, ಈ ಕಾರಣದಿಂದ ಈ ಮಣ್ಣಿನಲ್ಲಿ ರೊಬಸ್ಟೊ ಕಾಫಿ ತಳಿಯನ್ನು ಉಪ ಬೆಳೆಯಾಗಿ ಬೆಳೆಯಲು ಸೂಕ್ತವಾಗಿದೆ ಎಂದರು.
ಅಗತ್ಯವುಳ್ಳ ಕೃಷಿಕರಿಗೆ ಚಿಕ್ಕಮಗಳೂರಿನಲ್ಲಿರುವ ತರಬೇತಿ ಕೇಂದ್ರದಲ್ಲಿ ಸೂಕ್ತ ತರಬೇತಿ ನೀಡಲಾಗುವುದೆಂದು ವಿವರಿಸಿದರು.ಕಾಫಿ ಮಂಡಳಿ ಚಟ್ಟಳ್ಳಿಯ ಮಣ್ಣು ವಿಜ್ಞಾನಿ ಎಸ್.ಎ. ನದಾಫ್, ಬೇಸಾಯ ತಜ್ಞ ಡಾ. ನಾಗರಾಜ್ ಗೋಕವಿ , ಪುತ್ತೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ , ಕಾರ್ಯಕ್ರಮದ ಸಂಯೋಜಕ ಅಜಿತ್ ಪ್ರಸಾದ್ ರೈ ಮತ್ತಿತರರು ತಾಲೂಕಿನಾದ್ಯಂತದಿಂದ ಆಗಮಿಸಿದ ಕಾಫಿ ಬೆಳೆಗಾರರಿಗೆ ಪ್ರಾತ್ಯಕ್ಷಿಕೆ ಸಹಿತ ಗಿಡಗಳ ಪರಿಚಾರಿಕೆ ಬಗ್ಗೆ ಮಾಹಿತಿ ನೀಡಿದರು.
ಕಾಫಿ ಬೆಳೆಗಾರ ಅಜಿತ್ ಪ್ರಸಾದ್ ದಾರಂದಕುಕ್ಕು, ಪುಷ್ಪರಾಜ್ ಅಡೇಕಲ್, ಉಪ್ಪಿನಂಗಡಿ ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಸಿಪಿಸಿಆರ್.ಐ. ನಿವೃತ್ತ ವಿಜ್ಞಾನಿ ಡಾ. ಯದುಕುಮಾರ್, ಅನಂತಕೃಷ್ಣ ಪೆರುವಾಯಿ, ಪುತ್ತೂರು ಆಕರ್ಷಣ್ ಸಮೂಹ ಸಂಸ್ಥೆಯ ನಾಸಿರ್, ರೈತ ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಮ ಸುಳ್ಯ, ಡಾ. ತಾಳ್ತಜೆ ವಸಂತ ಕುಮಾರ್ , ಜಯರಾಮ ಸುಳ್ಯ, ರವಿ ಮುಳ್ಳಂಗುಚ್ಚಿ , ಪ್ರವೀಣ್ ಆಳ್ವ ಮತ್ತಿತರರಿದ್ದರು.ಗೀತಾಲಕ್ಷ್ಮೀ ತಾಳ್ತಜೆ, ಅತುಲ್ ಕಶ್ಯಪ, ಅಕ್ಷರ ಕಶ್ಯಪ ನಿವಹಿಸಿದರು.
...........................ಅಡಕೆ ಬೆಲೆ ಕುಸಿತ ಹಾಗೂ ರೋಗ ಬಾಧೆಯ ಭೀತಿ ಕಾಡುತ್ತಿರುವ ಈ ದಿನಗಳಲ್ಲಿ ಉಪ ಬೆಳೆಯಾಗಿ ಕಾಫಿ ಬೆಳೆ ಮಾಡಿದ್ದು, ಇಲ್ಲಿನ ಮಣ್ಣು ಮತ್ತು ಇದರ ನಿರ್ವಹಣೆಯ ಬಗ್ಗೆ ನಮ್ಮೊಳಗೆ ಗೊಂದಲ ಇತ್ತು. ಆದರೆ ಇದೀಗ ಇಲ್ಲಿಗೆ ಆಗಮಿಸಿ ಅಧ್ಯಯನ, ಪರಿಶೀಲನೆ ನಡೆಸಿದ ಅಧಿಕಾರಿಗಳು ಇಲಾಖೆಗೆ ವರದಿ ನೀಡಿ ಮುಂದೆ ಅಧಿಕೃತ ಮಾನ್ಯತೆ ನೀಡುವ ಬಗ್ಗೆ, ಸೂಕ್ತ ಮಾರ್ಗದರ್ಶನ , ಪ್ರೋತ್ಸಾಹ ಮತ್ತು ಮಾರುಕಟ್ಟೆಯನ್ನು ಒದಗಿಸುವ ಬಗ್ಗೆ ಭರವಸೆ ನೀಡಿರುವುದು ಕೃಷಿಕರ ಪಾಲಿಗೆ ಆಶಾದಾಯಕ ನಡೆಯಾಗಿದೆ.
-ಚಂದ್ರಶೇಖರ್ ತಾಳ್ತಜೆ, ಕಾಫಿ ಬೆಳೆಗಾರ.