ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ.ಕ. ಪ್ರಥಮ ಸ್ಥಾನಕ್ಕೆ ‘ದಶಾಂಶ ಸೂತ್ರ’ ಪ್ರಯೋಗ!

KannadaprabhaNewsNetwork | Published : Oct 24, 2024 12:48 AM

ಸಾರಾಂಶ

ಮಧ್ಯಂತರ ರಜೆ ಬಳಿಕ ಬಾಕಿಯುಳಿದ ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ಹಾಗೂ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದೃಷ್ಟಿಯಲ್ಲಿರಿಸಿ ಪ್ರತಿದಿನ ಸ್ಟುಡಿಯೋ ಮೂಲಕ ಆನ್‌ಲೈನ್‌ ತರಬೇತಿ ಕೂಡ ನೀಡಲು ಉದ್ದೇಶಿಸಲಾಗಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರುಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 2023-24ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆ ಪಡೆದಿದೆ. ಈ ಬಾರಿ ಇದನ್ನೂ ಮೀರಿ ಪ್ರಥಮ ಸ್ಥಾನಕ್ಕೆ ಲಗ್ಗೆ ಇಡಲು ಶಾಲೆಗಳಲ್ಲಿ ಇನ್ನಿಲ್ಲದ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿಯೇ ದ.ಕ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ‘ದಶಾಂಶ ಸೂತ್ರ’ದ ಕ್ರಿಯಾಯೋಜನೆಯನ್ನು ಹಮ್ಮಿಕೊಂಡು ಜಾರಿಗೊಳಿಸುತ್ತಿದ್ದಾರೆ. ಜೂನ್‌, ಜುಲೈನಲ್ಲೇ ಈ ಸಲದ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್ ಆಗುವ ಪರಿಸ್ಥಿತಿಯಲ್ಲಿ ಇರುವ, ಅಂದರೆ ಕಲಿಕೆಯಲ್ಲಿ ಅತಿಯಾಗಿ ಹಿಂದುಳಿದ ವಿದ್ಯಾರ್ಥಿಗಳ ಪಟ್ಟಿ ಮಾಡಿದ್ದಾರೆ. ಈ ಬಾರಿಯ ಎಸ್‌ಎಸ್‌ಎಲ್‌ಸಿಯ ಒಟ್ಟು 28,612 ಮಕ್ಕಳ ಪೈಕಿ 4,742 ಮಕ್ಕಳು ಕಲಿಕೆಯಲ್ಲಿ ಹಿಂದುಳಿದವರು. ಇವರನ್ನೆಲ್ಲ ದಶಾಂಶ ಸೂತ್ರ ಕಾರ್ಯಕ್ರಮದಡಿ ಕಲಿಕಾ ಸುಧಾರಣೆ ತರುತ್ತಿದ್ದಾರೆ.

ಏನಿದು ‘ದಶಾಂಶ ಸೂತ್ರ’?:

10ನೇ ತರಗತಿಯಲ್ಲಿ ನಿಧಾನ ಕಲಿಕೆಯ ಮಕ್ಕಳನ್ನು ಗುರುತಿಸಿ ಅವರನ್ನು ಇತರೆ ಮಕ್ಕಳ ಸಾಲಿಗೆ ತರುವ ಕಾರ್ಯಕ್ರಮವೇ ದಶಾಂಶ ಸೂತ್ರ. ಇಲ್ಲಿ 10 ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲವನ್ನೂ ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದೆ.

ನಿಧಾನ ಕಲಿಕೆಯ ಮಕ್ಕಳನ್ನು ಆಯಾ ಶಾಲಾ ಶಿಕ್ಷಕರಿಗೆ ಹಂಚಿಕೆ ಮಾಡಿ ಮಕ್ಕಳಿಗೆ ಕಠಿಣ ಇರುವ ವಿಷಯಗಳ ಬಗ್ಗೆ ಶಿಕ್ಷಕರು ಹೆಚ್ಚಿನ ತರಬೇತಿ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ. ಮಕ್ಕಳ ಹಾಜರಾತಿ ಹೆಚ್ಚಳವಾಗುವಂತೆ ನೋಡಿಕೊಂಡು ಶಾಲೆಯಲ್ಲಿ ಆನಂದದಾಯಕ ಕಲಿಕಾ ವಾತಾವರಣ ನಿರ್ಮಿಸುತ್ತಾರೆ. ವಿಶೇಷ ತರಗತಿ ಆಯೋಜಿಸಿ ಪ್ರತಿ ದಿನ ಬೆಳಗ್ಗೆ ಒಂದು ಗಂಟೆ ಕಾಲ ತರಗತಿ ನಡೆಸುತ್ತಾರೆ, ಅವಶ್ಯವಾದರೆ ಸಂಜೆಯೂ ತರಗತಿ ಇರುತ್ತದೆ. ಮಕ್ಕಳಿಗೆ ವೈಯಕ್ತಿಕವಾಗಿಯೂ ಶಿಕ್ಷಕರು ಕಲಿಕೆಗೆ ಗಮನ ನೀಡುತ್ತಾರೆ. ಓದು, ಬರಹದ ಬಗ್ಗೂ ಒತ್ತು ನೀಡುತ್ತಾರೆ.

ಇ-ಸಂಪನ್ಮೂಲಗಳ ಬಳಕೆ ಮಾಡುವ ಮೂಲಕ ಮಕ್ಕಳಿಗೆ ಸುಲಭವಾಗಿ ಕಲಿಕೆಗೆ ನೆರವಾಗುತ್ತಾರೆ. ದೀಕ್ಷಾ ಆ್ಯಪ್‌, ಇ-ಲರ್ನಿಂಗ್‌ ಸಾಧನೆಗಳನ್ನು ಬಳಸಿ ಪಾಠ ಬೋಧಿಸುತ್ತಾರೆ. ಇದಕ್ಕಾಗಿಯೇ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡಲಾಗಿದೆ. ಬಿ ಮತ್ತು ಸಿ ಗ್ರೇಡ್‌ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡಿ ಇಲಾಖಾ ಅಧಿಕಾರಿಗಳಿಂದ ಶಾಲಾ ಸಂದರ್ಶನ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಅದಕ್ಕಾಗಿ ಸಂದರ್ಶನ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಮುಖ್ಯಗುರುಗಳ ಸಭೆ ನಡೆಸಿ ಪ್ರಗತಿ ವಿಶ್ಲೇಷಿಸಲಾಗುತ್ತಿದೆ.

ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಿಸುವ ಕಾರ್ಯಾಗಾರ ನಡೆಸುತ್ತಿದ್ದು, ಪರೀಕ್ಷಾ ಭಯ ಹೋಗಲಾಡಿಸುವ ಕಾರ್ಯ ಮಾಡಲಾಗಿದೆ. ಅಲ್ಲದೆ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಈ ಮಕ್ಕಳ ತಾಯಂದಿರವನ್ನು ಕರೆಸಿ ಶಾಲೆಯಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಿ ಮಕ್ಕಳ ಪ್ರಗತಿ ಕುರಿತು ಚರ್ಚಿಸಲಾಗುತ್ತಿದೆ.

ಈಗ ಮಧ್ಯಂತರ ರಜೆ ಬಳಿಕ ಬಾಕಿಯುಳಿದ ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ಹಾಗೂ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದೃಷ್ಟಿಯಲ್ಲಿರಿಸಿ ಪ್ರತಿದಿನ ಸ್ಟುಡಿಯೋ ಮೂಲಕ ಆನ್‌ಲೈನ್‌ ತರಬೇತಿ ಕೂಡ ನೀಡಲು ಉದ್ದೇಶಿಸಲಾಗಿದೆ.

ಎರಡನೇ ತಿಂಗಳಲ್ಲಿ ವಿದ್ಯಾರ್ಥಿಗಳು ಸುಧಾರಣೆ:

ದಶಾಂಶ ಸೂತ್ರದ ಪ್ರಯೋಗ ಆರಂಭವಾದ ಎರಡೇ ತಿಂಗಳಲ್ಲಿ ಅಂದರೆ ಸೆಪ್ಟೆಂಬರ್‌ ಕೊನೆಗೆ ಇದರ ಫಲಶ್ರುತಿ ಗೊತ್ತಾಗಿದೆ. ನಿಧಾನ ಕಲಿಕೆಯ 4,742 ವಿದ್ಯಾರ್ಥಿಗಳ ಪೈಕಿ 1,242 ವಿದ್ಯಾರ್ಥಿಗಳು ಬೇಗನೆ ಸುಧಾರಣೆಯಾಗಿದ್ದು, ಸುಲಭವಾಗಿ ಪಠ್ಯ ವಿಷಯಗಳನ್ನು ಜೀರ್ಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಬಾಕಿ ಉಳಿದ 3,500 ವಿದ್ಯಾರ್ಥಿಗಳನ್ನು ಡಿಸೆಂಬರ್‌ ಕೊನೆಯೊಳಗೆ ಮುಖ್ಯವಾಹಿನಿಗೆ ತರುವ ಇರಾದೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಹೊಂದಿದ್ದಾರೆ.

................

ದಶಾಂಶ ಸೂತ್ರ ಕಾರ್ಯಕ್ರಮದಲ್ಲಿ ಡಿಸೆಂಬರ್‌ ಅಂತ್ಯಕ್ಕೆ ಎಲ್ಲ ಮಕ್ಕಳೂ ಕಲಿಕಾ ಸುಧಾರಣೆಗೊಳ್ಳುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಬಾರಿ ಶತಾಯಗತಾಯ ನೂರಕ್ಕೆ ನೂರು ಶೇಕಡಾ ಮಕ್ಕಳು ತೇರ್ಗಡೆಯಾಗಿ ದ.ಕ. ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಗುರಿ ಈಡೇರುವ ವಿಶ್ವಾಸ ಇದೆ. ಇದಕ್ಕಾಗಿ ಎಲ್ಲ ಶಿಕ್ಷಕರು ಅಹರ್ನಿಶಿ ದುಡಿಯುತ್ತಿದ್ದಾರೆ.

-ವೆಂಕಟೇಶ್‌ ಪಟಗಾರ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ದ.ಕ.

Share this article