ದಲಿತ ಸಿಎಂ ಹೇಳಿಕೆ ಅಪ್ರಸ್ತುತ: ಪ್ರಿಯಾಂಕ ಖರ್ಗೆ

KannadaprabhaNewsNetwork | Published : Mar 7, 2024 1:47 AM

ಸಾರಾಂಶ

ನಾವು ಜನರ ಮೆಚ್ಚುಗೆಗೆ ಪಾತ್ರವಾಗುವಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 4 ಕೋಟಿಗೂ ಅಧಿಕ ಜನರು ಸವಲತ್ತು ಪಡೆಯುತ್ತಿದ್ದಾರೆ. 136 ಶಾಸಕರು ಆರಿಸಿ ಬಂದಿದ್ದೇವೆ. ಸಿಎಂ, ಡಿಸಿಎಂ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಗದಗ: ರಾಜ್ಯದಲ್ಲಿ ದಲಿತ ಸಿಎಂ ಎನ್ನುವ ಚರ್ಚೆಯೇ ಈಗ ಅಪ್ರಸ್ತುತ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನಮ್ಮ ಸರ್ಕಾರ ಚೆನ್ನಾಗಿಯೇ ನಡೆಯುತ್ತದೆ, ಹಾಗಾಗಿ ಮಹಾದೇವಪ್ಪ ಅವರ ಹೇಳಿಕೆ ಬಗ್ಗೆ ಹೆಚ್ಚೇನು ಹೇಳಲಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಬುಧವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜನರ ಮೆಚ್ಚುಗೆಗೆ ಪಾತ್ರವಾಗುವಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 4 ಕೋಟಿಗೂ ಅಧಿಕ ಜನರು ಸವಲತ್ತು ಪಡೆಯುತ್ತಿದ್ದಾರೆ. 136 ಶಾಸಕರು ಆರಿಸಿ ಬಂದಿದ್ದೇವೆ. ಸಿಎಂ, ಡಿಸಿಎಂ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಮಾಡುತ್ತೇವೆ. 15ರಿಂದ 20 ಸೀಟು ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯು ಟರ್ನ್‌: ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಕುರಿತು ಪ್ರಶ್ನೆಗೆ ಯೂ-ಟರ್ನ್ ಹೊಡೆದ ಸಚಿವರು, ನನ್ನ ಬಳಿ ಬಂದ ಫುಟೇಜ್‌ನ್ನು ಖಾಸಗಿಯಾಗಿ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ ಬಂದಿಲ್ಲ ಎಂದು ಈ ಹಿಂದೆ ಹೇಳಿದ್ದೆ, ಸರ್ಕಾರದ ವರದಿಯೇ ಫೈನಲ್ ಅಂತಾನೂ ಹೇಳಿದ್ದೆ. ಬಿಜೆಪಿ ಖಾಸಗಿ ವರದಿಯನ್ನು ಸರ್ಕಾರಿ ವರದಿಯಾಗಿ ಬಿಂಬಿಸುವುದು ತಪ್ಪು ಎಂದು ಹೇಳಿದ್ದೆ ಅಥವಾ ನನ್ನ ವರದಿ ಸರಿ ಎಂದು ಹೇಳುವುದೂ ತಪ್ಪು ಅಂತಾನೇ ಹೇಳಿದ್ದೆ. ನಾನು ಎಫ್ಎಸ್ಎಲ್ ವರದಿ ನೋಡಿಲ್ಲ, ಗೃಹ ಸಚಿವರು ವರದಿ ನೋಡಿ ಹೇಳಿದ್ದಾರೆ. ಎಫ್‌ಎಸ್‌ಎಲ್‌ ರಿಪೋರ್ಟ್ ಬಂದಿದೆ. ಘೋಷಣೆ ಕೂಗಿರಬಹುದು ಎಂದು ಹೇಳಿದ್ದಾರೆ. ಮೂವರನ್ನು ಕರೆದುಕೊಂಡು ಹೋಗಿದ್ದಾರೆ. ಧ್ವನಿ ಮ್ಯಾಚ್ ಆಗಬೇಕು. ಆ ಸಂದರ್ಭದಲ್ಲಿ ಅವರಿದ್ದರಾ ಎಂದು ದೃಢಪಡಿಸಿಕೊಳ್ಳಬೇಕು ಎಂದರು.

ಬಿಜೆಪಿಯವರಂತೆ ಮಂಡ್ಯದಲ್ಲಿ ಕೂಗಿದ್ದನ್ನು ಮುಚ್ಚಿಹಾಕಿದ್ದೀವಾ? ಇಲ್ಲವಲ್ಲ, ಇನ್ನೂ ತನಿಖೆ ನಡೀತಿದೆ. ಧ್ವನಿ ಸ್ಯಾಂಪಲ್ ಅವರದ್ದು, ಇವರದ್ದು ಅಂತಾ ಎಲ್ಲೂ ಹೇಳಿಲ್ಲ. ಗೃಹ ಸಚಿವರ ಹೇಳಿಕೆ ನೀವೇ ಕೇಳಿದ್ದೀರಾ? ಒಂದರಲ್ಲಿ ಕೇಳಿದಂಗಿದೆ, ಹೆಚ್ಚಿನ ಸಾಧ್ಯತೆ (ಹೈ ಪ್ರಾಬೆಬಲಿಟಿ) ಇದೆ ಅಂತಾ ಹೇಳಿದ್ದಾರೆ. ವಿಚಾರಣೆ ಮಾಡಲಾಗುತ್ತಿದೆ. ಧ್ವನಿ ಸ್ಯಾಂಪಲ್ ಮ್ಯಾಚ್ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ನಾನು ಅಂದು ಕೂಡಾ ಹೇಳಿದ್ದೆ, ಸರ್ಕಾರಿ ವರದಿ ಫೈನಲ್, ಆರ್.ಎಸ್.ಎಸ್. ವರದಿ ಒಪ್ಪಲ್ಲ. ಆ ವರದಿಗೆ ಅಪಸ್ವರ ಎತ್ತಿದ್ದೀವಾ? ಇಲ್ಲವಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಬಿಡಬೇಡಿ ಎಂಬ ಬಿಜೆಪಿ ವಾದ, ಬಿಜೆಪಿಗೆ ನೈತಿಕತೆ ಇದ್ದರೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಬಗ್ಗೆ ಮಾತನಾಡಲಿ. ಕುಕ್ಕರ್ ಬಾಂಬ್ ಟ್ರೇನಿಂಗ್ ತೆಗೆದುಕೊಂಡಿದ್ದು ತೀರ್ಥಹಳ್ಳಿಯಲ್ಲಿ, ತೀರ್ಥಹಳ್ಳಿ ಆಗಿನ ಗೃಹ ಸಚಿವರ ಕ್ಷೇತ್ರ. ಅವರ ಕ್ಷೇತ್ರದಲ್ಲಿ ಟ್ರೇನಿಂಗ್ ತೆಗೆದುಕೊಂಡಿದ್ದು. ಆಗಿನ ಸಚಿವರು ರಾಜೀನಾಮೆ ಕೊಟ್ಟಿದ್ದರಾ? ಇವ್ರು ಉಸ್ರು ಬಿಟ್ರಾ? ಮಂಡ್ಯದಲ್ಲಿ ಪಾಕ್ ಜಿಂದಾಬಾದ್ ಘಟನೆಯನ್ನು ಯಾಕೆ ಮುಚ್ಚಿಹಾಕಿದರು? ಸಂಸತ್‌ನಲ್ಲಿ ನುಗ್ಗಿದ್ದ ಪ್ರಕರಣ, ಪ್ರತಾಪ್ ಸಿಂಹ ಪಾಸ್ ಕೊಟ್ಟಿದ್ದು ಸತ್ಯ. ಅದರ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ? ನಾಸಿರ ಹುಸೇನ್ ಪ್ರಮಾಣ ಸ್ವೀಕರಿಸಬಾರದು ಎಂದು ಹೇಳಲು ಇವರು ಯಾರು? ಪಾಸ್ ಕೊಟ್ಟಿದ್ದರು ಎಂದು ದೃಢವಾಗಿದೆಯಲ್ಲ. ನಾಸೀರ್ ಹುಸೇನ್ ಘೋಷಣೆ ಕೂಗಿದ್ದಾ? ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಪ್ರಿಯಾಂಕ್ ಖರ್ಗೆ ವಿರುದ್ಧ ಗುಲಾಮ್ ಗ್ಯಾಂಗ್ ಅಭಿಯಾನ ವಿಷಯ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ನಾನು ಮನೆ ದೇವರು ಇದ್ದಂಗೆ, ಅವರು ನನ್ನ ಹೆಸರು ಹೇಳದೇ ಮನೆ ಬಾಗಿಲು ತೆಗೆಯಲ್ಲ, ತಿಂದ ಊಟ ಜೀರ್ಣವಾಗಲ್ಲ ಎಂದರು.

Share this article