ಹೊಸಪೇಟೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರ 133ನೇ ಜಯಂತಿ ನಿಮಿತ್ತ ಸಂವಿಧಾನ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಉತ್ತರಾದಿಮಠಕ್ಕೆ ಭಾನುವಾರ ದಲಿತರು ಪ್ರವೇಶ ಮಾಡಿದರು. ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್ ನೇತೃತ್ವದಲ್ಲಿ ಶ್ರೀಮಠದ ಅರ್ಚಕರು ಬರಮಾಡಿಕೊಂಡರು.
ಈ ವೇಳೆ ಸಂವಿಧಾನ ಹೋರಾಟ ಸಮಿತಿಯ ಮುಖಂಡ ಮರಡಿ ಜಂಬಯ್ಯ ನಾಯಕ ಹಾಗೂ ವಕೀಲ ಎ. ಕರುಣಾನಿಧಿ ಮಾತನಾಡಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಅವರು ಸಮಾನತೆಯನ್ನು ಸಾರಿದ್ದಾರೆ. ಮೊದಲು ನಮ್ಮ ಮನಸ್ಸುಗಳು ಒಂದಾಗಬೇಕು. ಹಾಗಾಗಿ ಅಂಬೇಡ್ಕರ್ ಅವರ ಜನ್ಮದಿನದ ನಿಮಿತ್ತ ಸೌಹಾರ್ದಯುತವಾಗಿ ಉತ್ತರಾದಿಮಠದ ಪ್ರವೇಶ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಶ್ರೀಮಠದವರು ಕೂಡ ಅಷ್ಟೇ ಆದರದಿಂದ ಬರಮಾಡಿಕೊಂಡಿದ್ದಾರೆ ಎಂದರು.ನಾವೆಲ್ಲರೂ ಸೇರಿ ಸಮಾಜಕ್ಕೆ ಉತ್ತಮ ಸಂದೇಶ ನೀಡೋಣ. ಶಾಂತಿ, ಸಹಬಾಳ್ವೆಯಿಂದ ಎಲ್ಲರೂ ಒಂದಾಗಿ ಜೀವಿಸೋಣ. ಸಂವಿಧಾನದ ಆಶಯ ಉಳಿಸೋಣ ಎಂದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್ ಮಾತನಾಡಿ, ಯಾವತ್ತೂ ನಾವು ಎಂದಿಗೂ ಎಲ್ಲರ ಜತೆಗೆ ಇದ್ದೇವೆ. ಇಡೀ ಹೊಸಪೇಟೆ ಜನರು ಎಲ್ಲರೂ ಸೇರಿ ಊರಮ್ಮದೇವಿ ಜಾತ್ರೆಯನ್ನು ನಮ್ಮೂರ ಹಬ್ಬದಂತೆ ಆಚರಣೆ ಮಾಡಿದ್ದೇವೆ. ಹಾಗಾಗಿ ಹೊಸಪೇಟೆ ನಗರದಲ್ಲಿ ಎಂದಿಗೂ ಸೌಹಾರ್ದಕ್ಕೆ ಧಕ್ಕೆಯಾಗಿಲ್ಲ. ನಾವೆಲ್ಲರೂ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡೋಣ ಎಂದರು.ಬಳಿಕ ಉತ್ತರಾದಿಮಠದಲ್ಲಿ ಎಲ್ಲರೂ ಸೇರಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಫಲ, ಪ್ರಸಾದ ಸ್ವೀಕರಿಸಿದರು.
ಮುಖಂಡರಾದ ಆರ್. ಭಾಸ್ಕರ್ ರೆಡ್ಡಿ, ವಿ. ಸ್ವಾಮಿ, ರಮೇಶ್, ಪವನ್, ಎನ್. ಯಲ್ಲಾಲಿಂಗ, ಬಿಸಾಟಿ ಮಹೇಶ್, ಧನರಾಜ್, ನಾಗಮ್ಮ, ದುರುಗಮ್ಮ, ಉತ್ತರಾದಿ ಮಠದ ಉಮರ್ಜಿ ರಾಮಾಚಾರ್ಯ, ಆನಂದಾಚಾರ್ಯ ಮಹಿಷಿ, ವ್ಯವಸ್ಥಾಪಕ ಕೃಷ್ಣಾಚಾರ್ಯ, ಮಠದ ಭಕ್ತರು ರಮೇಶ್ ನವರತ್ನ ಮತ್ತಿತರರಿದ್ದರು.ಪಟ್ಟಣ ಠಾಣೆ ಪಿಐ ಲಖನ್ ಮಸಗುಪ್ಪಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.