ತೆಲಂಗಾಣ ಮಾದರಿಯಲ್ಲಿ ಡ್ಯಾಂ, ಕೆರೆಗಳ ಹೂಳೆತ್ತಿಸಬೇಕು: ಸಿಎಂಗೆ ಒತ್ತಾಯ

KannadaprabhaNewsNetwork | Published : Sep 11, 2024 1:09 AM

ಸಾರಾಂಶ

ರಾಜ್ಯದ ಎಲ್ಲ ಅಣೆಕಟ್ಟೆಗಳು ಹಾಗೂ ಕೆರೆಗಳ ಹೂಳು ತೆಗೆಸಿ, ಮಣ್ಣನ್ನು ರೈತರ ಜಮೀನಿಗೆ ಪೂರೈಸಲು ಯೋಜನೆಯನ್ನು ತೆಲಂಗಾಣ ರಾಜ್ಯದ ಮಾದರಿಯಲ್ಲಿ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತು.

- ಕೃಷಿ ಪಂಪ್‌ಸೆಟ್‌ಗೆ ರೈತರ ಆಧಾರ್‌ ಲಿಂಕ್ ಬೇಡ: ಬೆಂಗಳೂರಲ್ಲಿ ರೈತ ಮುಖಂಡರ ನಿಯೋಗ ಮನವಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಎಲ್ಲ ಅಣೆಕಟ್ಟೆಗಳು ಹಾಗೂ ಕೆರೆಗಳ ಹೂಳು ತೆಗೆಸಿ, ಮಣ್ಣನ್ನು ರೈತರ ಜಮೀನಿಗೆ ಪೂರೈಸಲು ಯೋಜನೆಯನ್ನು ತೆಲಂಗಾಣ ರಾಜ್ಯದ ಮಾದರಿಯಲ್ಲಿ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತು.

ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ನೇತೃತ್ವದಲ್ಲಿ ಭೇಟಿ ಮಾಡಿದ್ದ ಉಭಯ ಸಂಘಟನೆಗಳ ಮುಖಂಡರ ನಿಯೋಗವು, ರಾಜ್ಯದ ಎಲ್ಲ ಜಲಾಶಯಗಳು, ಕೆರೆಗಳ ಹೂಳನ್ನು ತೆಗೆಸಿ, ಮಣ್ಣನ್ನು ರೈತರ ಜಮೀನಿಗೆ ಪೂರೈಸಲು ಯೋಜನೆ ರೂಪಿಸಬೇಕು ಎಂದರು.

ಆಧಾರ ಲಿಂಕ್‌ ಕೈ ಬಿಡಬೇಕು:

ಕೃಷಿ ಪಂಪ್ ಸೆಟ್‌ಗೆ ರೈತರ ಆಧಾರ್ ಲಿಂಗ್ ಮಾಡುವುದನ್ನು ಕೈಬಿಡಬೇಕು. ಭೂ ಸುಧಾರಣಾ ಕಾಯ್ದೆ ರದ್ದುಪಡಿಸಬೇಕು. ಕೃಷಿ ಸಾಲ ಪಾವತಿಸದ ರೈತರ ಜಮೀನು ವಶಪಡಿಸಿಕೊಳ್ಳುವ ಕಾಯ್ದೆಯನ್ನು ರದ್ದುಪಡಿಸಲು ಕೇಂದ್ರಕ್ಕೆ ಒತ್ತಾಯಿಸಬೇಕು. ಬರ, ಅತಿವೃಷ್ಠಿ ಹಾನಿ, ಪ್ರವಾಹ ಹಾನಿ, ಎನ್‌ಡಿಆರ್‌ಎಫ್ ಪರಿಹಾರ ಮಾನದಂಡ ತಿದ್ದುಪಡಿ ಮಾಡಿ, ವೈಜ್ಞಾನಿಕ ಪರಿಹಾರ ಮಾನದಂಡ ಜಾರಿಗೊಳಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಸಾಲ ವಸೂಲಿ ಕಿರುಕುಳ ತಪ್ಪಲಿ:

ಖಾಸಗಿ ಫೈನಾನ್ಸ್‌ಗಳು, ಬ್ಯಾಂಕ್‌ಗಳು ಸಾಲ ವಸೂಲಿಗೆ ನೋಟಸ್ ನೀಡಿ, ಕಿರುಕುಳ ಕೊಟ್ಟು, ಜಮೀನು ಹರಾಜು ಮಾಡುವುದನ್ನು ನಿಲ್ಲಿಸಬೇಕು. ಕಬ್ಬಿನ ಉತ್ಪನ್ನ, ಇಳುವರಿ ಕಡಿಮೆ ತೋರುತ್ತಿರುವ ಕಾರಣ ಪ್ರಸಕ್ತ ಸಾಲಿಗೆ ಎಫ್‌ಆರ್‌ಪಿ ದರಕ್ಕಿಂದ ಹೆಚ್ಚುವರಿ ದರ ನಿಗದಿಪಡಿಸಬೇಕು. ಜಿಂದಾಲ್ ಕಂಪನಿಗೆ 3667 ಎಕರೆ ಜಮೀನು ನೀಡುವುದನ್ನು ಕೈ ಬಿಡಬೇಕು. ಕಳಸಾ ಬಂಡೂರಿ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನೀಡಿ, ಯೋಜನೆಗೆ ಅವಕಾಶ ಕಲ್ಪಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಲಾಯಿತು.

ಸೆ.30ರೊಳಗೆ ಸ್ಪಂದಿಸದಿದ್ದರೆ ಹೋರಾಟ:

ಕಳೆದ ವರ್ಷ ನಿಗದಿಪಡಿಸಿದ್ದ ಟನ್‌ಗೆ ₹150 ದರವನ್ನು ತಕ್ಷಣ ಕೊಡಿಸಬೇಕು. ರಾಜ್ಯಾದ್ಯಂತ ಎಪಿಎಂಸಿಗಳಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಿದ ದಲ್ಲಾಳಿಗಳು ಶೇ.10 ಕಮೀಷನ್ ತೆಗೆದುಕೊಳ್ಳುವುದನ್ನು ನಿಲ್ಲಿಸಲಿ. ತೂಕದಲ್ಲಿ ಐದಾರು ಕೆಜಿ ಸ್ಯಾಂಪಲ್ ಪಡೆಯುವುದನ್ನು ತಡೆಯಬೇಕು. ಶಿವಮೊಗ್ಗದ ತರಕಾರಿ ಮಾರುಕಟ್ಟೆಯಲ್ಲಿ ಇಂತಹ ಚಟುವಟಿಕೆ ಹೆಚ್ಚಾಗಿದೆ. ಜಿಎಂ ಸೀಡ್ಸ್‌ ನಮಗೆ ಬೇಕಾಗಿಲ್ಲ. ರಾಜ್ಯದ ರೈತರ ಪರವಾಗಿ ರಾಜ್ಯ ಸರ್ಕಾರವೇ ಅದನ್ನು ಬಹಿಷ್ಕರಿಸಬೇಕು. ನಮ್ಮ ಬೇಡಿಕೆಗೆ ಸೆ.30ರೊಳಗೆ ಸ್ಪಂದಿಸದಿದ್ದರೆ ರಾಜ್ಯವ್ಯಾಪಿ ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಎಂದು ಮುಖಂಡರು ಎಚ್ಚರಿಸಿದರು.

ಉಭಯ ಸಂಘಟನೆಗಳ ಮುಖಂಡರಾದ ಕುರುಬೂರು ಶಾಂತಕುಮಾರ, ವೀರೇಶ ಸೊಬರದ ಮಠ, ಬಲ್ಲೂರು ರವಿಕುಮಾರ ವೀರನಗೌಡ ಪಾಟೀಲ್‌, ಕರಿಬಸಪ್ಪ ಗೌಡ, ಅತ್ತಹಳ್ಳಿ ದೇವರಾಜ, ಮಂಜೇಶ ಗೌಡ ಇತರರು ಇದ್ದರು.

- - - ಬಾಕ್ಸ್‌* ದೇವರ ಬೆಳಕೆರೆ ಭೂ ಸಂತ್ರಸ್ತರಿಗೆ ಪರಿಹಾರ ನೀಡಿ: ಬಲ್ಲೂರು ರವಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ತಾಲೂಕು ದೇವರ ಬೆಳಕೆರೆ ಪಿಕಪ್ ಯೋಜನೆಗೆ 17.11.1992ರಲ್ಲಿ ಭೂ ಸ್ವಾಧೀನವಾದ ಭೂ ಸಂತ್ರಸ್ತ ರೈತರಿಗೆ ಬೆಳೆ ಪರಿಹಾರ ವಿಷಯದಲ್ಲಿ ನ್ಯಾಯಾಲಯದಲ್ಲಿ ಹೂಡಿರುವ ದಾವೆ ಹಿಂಪಡೆಯುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಲಾಯಿತು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಉಭಯ ಸಂಘಟನೆಗಳ ಮುಖಂಡರು, ದೇವರ ಬೆಳಕೆರೆ ಪಿಕಪ್ ಯೋಜನೆಗೆ ದೇವರ ಬೆಳಕೆರೆ, ಬೂದಾಳ್‌, ಗುಳದಹಳ್ಳಿ, ಸಂಕ್ಲೀಪುರ ಹಾಗೂ ದಾವಣಗೆರೆ ತಾ. ಮುದಹದಡಿ, ವಡೇರಹಳ್ಳಿ, ಹದಡಿ, ಕನಗೊಂಡನಹಳ್ಳಿ, ಶಿರಗಾನಹಳ್ಳಿ, ಬಲ್ಲೂರು, ಜಡಗನಹಳ್ಳಿ ಹಾಗೂ ನಾಗರಸನಹಳ್ಳಿ ರೈತರ ಜಮೀನುಗಳು ನವೆಂಬರ್ 1991ರಲ್ಲಿ ಭೂ ಸ್ವಾಧೀನವಾಗಿದ್ದು, 2001- 2002ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆಗಿದೆ ಎಂದು ಸಿಎಂ ಗಮನಕ್ಕೆ ತಂದರು.

ಹಿಂದಿನ ನೀರಾವರಿ ಸಚಿವರಾದ ಎಚ್.ಕೆ.ಪಾಟೀಲ, ಕಂದಾಯ ಪ್ರಧಾನ ಕಾರ್ಯದರ್ಶಿ ಜಾಮದಾರ್, ನೀರಾವರಿ ಇಲಾಖೆ ಕಾರ್ಯದರ್ಶಿ ಕಂಬ್ಲೆ, ಕಾನೂನು ಕಾರ್ಯದರ್ಶಿ ಡಿಸೋಜಾ, ರೈತರ ಪರವಾಗಿ ಬಿ.ಎಂ.ರವಿಕುಮಾರ ಬಲ್ಲೂರು ಆಗಿನ ಸಭೆಯಲ್ಲಿ ಪಾಲ್ಗೊಂಡು, ಭೂ ಸ್ವಾಧೀನ ದಿನದಿಂದ ಭೂ ಸ್ವಾಧೀನ ಪ್ರಕ್ರಿಯೆವರೆಗೆ ಬೆಳೆ ನಷ್ಟ ನೀಡಬೇಕೆಂಬ ತೀರ್ಮಾನವಾಗಿ, ಸರ್ಕಾರದ ಸುತ್ತೋಲೆ ಹೊರಡಿಸಲಾಗಿತ್ತು. ಹರಿಹರ, ದಾವಣಗೆರೆ ತಾಲೂಕಿನ ಡಿಬಿ ಕೆರೆ ಭೂ ಸಂತ್ರಸ್ಥರಿಗೆ ಬೆಳೆ ಪರಿಹಾರ ನೀಡಲು ಭೂ ಸ್ವಾಧೀನಾಧಿಕಾರಿಗಳು, ನೀರಾವರಿ ಇಲಾಖೆಯವರಿಗೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಶೇ.50ರಷ್ಟು ಭೂ ಸಂತ್ರಸ್ತರಿಗೆ ಬೆಳೆ ಪರಿಹಾರ ನೀಡಿದ್ದು, ಉಳಿದ ಶೇ.50 ಸಂತ್ರಸ್ತರಿಗೆ ಬೆಳೆ ಪರಿಹಾರ ನೀಡದೇ, ಹೈಕೋರ್ಟ್‌ನಲ್ಲಿ ದಾವೆ ಹಾಕಲಾಗಿದೆ ಎಂದು ಬಲ್ಲೂರು ರವಿಕುಮಾರ ವಿವರಿಸಿದರು.

ಶೇ.50 ಸಂತ್ರಸ್ತರಿಗೆ ಭೂ ಪರಿಹಾರ ನೀಡಿ, ಉಳಿದ ಶೇ.50 ಸಂತ್ರಸ್ತರಿಗೆ ಪರಿಹಾರ ನೀಡಲು ಹೈಕೋರ್ಟ್‌ನಲ್ಲಿರುವ ಪ್ರಕರಣವನ್ನು ಹಿಂಪಡೆಯಲು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರಿನ ಕಾಫಿ ಮಂಡಳಿ, ಕರ್ನಾಟಕ ನೀರಾವರಿ ನಿಗಮದ ಇಇ, ಭದ್ರಾ ನಾಲಾ ವಿಭಾಗ-5 ಮಲೇಬೆನ್ನೂರು ಅವರಿಗೆ ನಿರ್ದೇಶನ ನೀಡಿ, ದಾವೆ ವಾಪಸ್ ಪಡೆದು, ಉಳಿದ ಶೇ.50ರಷ್ಟು ಸಂತ್ರಸ್ತರಿಗೂ ಬೆಳೆ ಹಾನಿ ಪರಿಹಾರ ಕೊಡಿಸುವಂತೆ ಮನವಿ ಮಾಡಲಾಯಿತು.

- - - -10ಕೆಡಿವಿಜಿ8:

ಬೇಡಿಕೆಗಳ ಈಡೇರಿಸುವಮತೆ ಆಗ್ರಹಿಸಿ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರೈತ ಸಂಘಟನೆಗಳ ಮುಖಂಡರ ನಿಯೋಗ ಮನವಿ ಸಲ್ಲಿಸಿತು. -10ಕೆಡಿವಿಜಿ9:

ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರ ನಿಯೋಗದಿಂದ ಮನವಿ ಸಲ್ಲಿಸಲಾಯಿತು.

Share this article