ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಷರತ್ತು ರದ್ದುಪಡಿಸಲು ದಸಂಸ ಆಗ್ರಹ

KannadaprabhaNewsNetwork |  
Published : Jul 06, 2024, 12:53 AM IST
ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಜಾರಿಯ ನಿಯಮದಲ್ಲಿ ವಿಧಿಸಲಾಗಿರುವ 1 ಮತ್ತು 6ನೇ ಷರತ್ತು ರದ್ದುಪಡಿಸಲು ಆಗ್ರಹಿಸಿ ದಸಂಸ ಕಾರ್ಯಕರ್ತರು ದಂಟರಮಕ್ಕಿ ಶ್ರೀನಿವಾಸ್‌ ನೇತೃತ್ವದಲ್ಲಿ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಹೊರ ಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಅನುಸರಿಸುವ ಆದೇಶದಲ್ಲಿ 1 ಮತ್ತು 6ನೇ ಷರತ್ತುಗಳನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

1 ಮತ್ತು 6ನೇ ಷರತ್ತು ಮೀಸಲಾತಿ ವಿರೋಧಿಗಳಿಗೆ ಅನುಕೂಲ। ರೋಸ್ಟರ್‌ ನಿಯಮ ಪಾಲನೆಗೆ ಒತ್ತಾಯ । ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹೊರ ಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಅನುಸರಿಸುವ ಆದೇಶದಲ್ಲಿ 1 ಮತ್ತು 6ನೇ ಷರತ್ತುಗಳನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಆಜಾದ್‌ ಪಾರ್ಕ್‌ ವೃತ್ತದಲ್ಲಿ ದಸಂಸ ಮುಖಂಡ ದಂಟರಮಕ್ಕಿ ಶ್ರೀನಿವಾಸ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ್‌ ಹೇಮಂತ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮೀಸಲಾತಿ ನಿಯಮವನ್ನು ಪಾಲನೆ ಮಾಡಬೇಕೆಂದು 2024ರ ಮೇ 20 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಹಲವು ವರ್ಷ ಗಳಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳು ನಡೆಯದೆ ಅಹಿಂದ ಸಮುದಾಯದ ಲಕ್ಷಾಂತರ ನಿರುದ್ಯೋಗಿ ಯುವ ಸಮೂಹ ಅಕ್ಷರಶಃ ಬೀದಿಗೆ ಬಿದ್ದಿತ್ತು. ಇಂತಹ ನಿರಾಶದಾಯಕ ಹೊತ್ತಿನಲ್ಲಿ ಸರ್ಕಾರ ಆದೇಶ ಹೊರಡಿಸಿರುವುದರಿಂದ ಅನುಕೂಲವಾಯಿತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ನೇಮಕಾತಿ ನಿಯಮಾವಳಿಯಲ್ಲಿ 1 ಮತ್ತು 6ನೇ ಷರತ್ತುಗಳು ವಿಧಿಸಿರುವುದು ಸದುದ್ದೇಶದ ಆಶಯಗಳಿಗೆ ವಿರುದ್ಧವಾಗಿದೆ. 1ನೇ ಷರತ್ತಿನಲ್ಲಿ 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗೆ ಮೀಸಲಾತಿ ಅನ್ವಯ ವಾಗುವುದಿಲ್ಲ ಎಂದು ಹೇಳಲಾಗಿದೆ. ಇದು, ಮೀಸಲಾತಿ ವಿರೋಧಿಗಳಿಗೆ ಅನುಕೂಲಕರವಾಗಿದೆ. ಈ ಷರತ್ತು ರದ್ದುಪಡಿಸಿ ಎಷ್ಟೇ ಅವಧಿಯ ನೇಮಕಾತಿ ಮಾಡಿಕೊಂಡರೂ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲು ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.

6ನೇ ಷರತ್ತಿನಲ್ಲಿ ಯಾವುದೇ ಇಲಾಖೆಯಲ್ಲಿ ಕನಿಷ್ಟ 20 ಅಭ್ಯರ್ಥಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ಅನುಸರಿಸಬೇಕೆಂದು ಹೇಳಲಾಗಿದೆ. ಇದೊಂದು ಅವೈಜ್ಞಾನಿಕ ಮತ್ತು ದುರುದ್ದೇಶ ಪೂರಿತವಾಗಿದೆ. ಮೀಸಲಾತಿಯನ್ನು ವಂಚಿಸಲು ಸಿದ್ಧ ಇರುವವರಿಗೆ ಈ ನಿಬಂಧನೆ ಸಹಕಾರಿ ಆಗಲಿದೆ.

ಇದುವರೆಗೆ ನಡೆದಿರುವ ನೇಮಕಾತಿ ಪ್ರಕ್ರಿಯೆಗಳನ್ನು ಅವಲೋಕನ ಮಾಡಿದರೆ ಜಾತಿವಾದಿ ಅಧಿಕಾರಿಗಳ ಮೀಸಲಾತಿ ವಿರೋಧಿ ದುರಾಡಳಿತಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಇಂತಹ ಸಂದರ್ಭದಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಜಾರಿಗೆ ತರುವುದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈಗ ವಿಧಿಸಿರುವ ಷರತ್ತುಗಳು ಜಾತಿವಾದಿ ಅಧಿಕಾರಿಗಳಿಗೆ ಕಾನೂನುಬದ್ಧ ಪ್ರೋತ್ಸಾಹ ನೀಡಿದಂತಾಗುತ್ತದೆ.

ಹುದ್ದೆಗಳ ಸಂಖ್ಯೆ ಎಷ್ಟೇ ಇರಲಿ, ಎಷ್ಟೇ ಅವಧಿಯಾಗಿರಲಿ ಅಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ರೋಸ್ಟರ್‌ ನಿಯಮಗಳ ಅನುಸಾರ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇರಲೇಬೇಕು ಎಂದು ಸರ್ಕಾರ ಮಾರ್ಪಾಡು ಆದೇಶ ಹೊರಡಿಸ ಬೇಕು. ಇಲ್ಲದೆ ಹೋದರೆ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ರಮೇಶ್‌, ಎಂ.ಎಸ್‌. ಪುಟ್ಟಸ್ವಾಮಿ, ಅಂಬೇಡ್ಕರ್‌ ಸೇನೆಯ ಜಿಲ್ಲಾಧ್ಯಕ್ಷ ಸಂತೋಷ್‌, ವಸಂತಕುಮಾರ್‌, ಮರ್ಲೆ ಅಣ್ಣಯ್ಯ ಹಾಗೂ ದಸಂಸ ಕಾರ್ಯಕರ್ತರು ಇದ್ದರು. 5 ಕೆಸಿಕೆಎಂ 1ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಜಾರಿಯ ನಿಯಮದಲ್ಲಿ ವಿಧಿಸಲಾಗಿರುವ 1 ಮತ್ತು 6ನೇ ಷರತ್ತು ರದ್ದುಪಡಿಸಲು ಆಗ್ರಹಿಸಿ ದಸಂಸ ಕಾರ್ಯಕರ್ತರು ದಂಟರಮಕ್ಕಿ ಶ್ರೀನಿವಾಸ್‌ ನೇತೃತ್ವದಲ್ಲಿ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ