ಸಮಾಜದ ಅಂಕುಡೊಂಕು ತಿದ್ದಿದವರು ದಾಸಿಮಯ್ಯ

KannadaprabhaNewsNetwork | Published : Apr 15, 2024 1:17 AM

ಸಾರಾಂಶ

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕ ಮೊದಲಾದ ಬದಲಾವಣೆಗಳನ್ನು ಹಿಂದಿನ ಕಾಲದಲ್ಲಿ ಕಂಡಿದ್ದೇವೆ. ಇದಕ್ಕೆಲ್ಲಾ ಮೂಲ ಭದ್ರ ಬುನಾದಿ ಹಾಕಿದವರು ದೇವರ ದಾಸಿಮಯ್ಯ ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ್ ಹೇಳಿದರು.

ಶ್ರೀ ದೇವರ ದಾಸಿಮಯ್ಯ ಜಯಂತಿಯಲ್ಲಿ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ್

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕ ಮೊದಲಾದ ಬದಲಾವಣೆಗಳನ್ನು ಹಿಂದಿನ ಕಾಲದಲ್ಲಿ ಕಂಡಿದ್ದೇವೆ. ಇದಕ್ಕೆಲ್ಲಾ ಮೂಲ ಭದ್ರ ಬುನಾದಿ ಹಾಕಿದವರು ದೇವರ ದಾಸಿಮಯ್ಯ ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ್ ಹೇಳಿದರು.

ನಗರದ ಶ್ರೀ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ದೇವಾಂಗ ಸಂಘ, ಬನಶಂಕರಿ ಮಹಿಳಾ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸಮಾಜದಲ್ಲಿ ಮೌಢ್ಯ, ಕಂದಾಚಾರದ ವಿರುದ್ಧ ಕ್ರಾಂತಿಕಾರ ಹೆಜ್ಜೆನಗಳನ್ನಿಟ್ಟ ಶರಣರು ವೈಚಾರಿಕ ಚಿಂತನೆಗಳ ಮೂಲಕ ಜನರಿಗೆ ಅರಿವಿನ ದಾರಿ ತೋರಿದವರು. ಮನುಷ್ಯನ ಅಹಂಕಾರವನ್ನು ತೊರೆದು ಭಕ್ತಿ ಮಾರ್ಗದಲ್ಲಿ ನಡೆದಾಗ ಮಾತ್ರ ಭಗವಂತನ ಸಾಕ್ಷಾತ್ಕಾರವಾಗಲಿದೆ ಎಂಬ ತತ್ವವನ್ನು ಸಾರಿದವರು ಎಂದರು.ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ ದೇವರ ದಾಸಿಮಯ್ಯ 10ನೇ ಶತಮಾನ ದಲ್ಲಿದ್ದ ಆದ್ಯ ವಚನಕಾರ, ಸ್ತ್ರೀ ಸಮಾನತೆ ಬಗ್ಗೆ ಒತ್ತಿ ಹೇಳಿದ, ಕಾಯಕದ ಮಹತ್ವ ತಿಳಿಸಿದ, ಜಾತೀಯತೆ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾಜ್ಞಾನಿ ಎಂದು ಹೇಳಿದರು.ಜಾತಿ, ವರ್ಗ, ಲಿಂಗತ್ವ ವರ್ಗೀಕರಣದಲ್ಲಿ ರಚನೆಯಾಗಿದ್ದ ಸಮಾಜದಲ್ಲಿನ ಕಂದಾಚಾರ, ಮೌಢ್ಯ , ಅಂಧ ಶ್ರದ್ಧೆಗಳ ಬಗ್ಗೆ ದನಿ ಎತ್ತಿದವರು ದೇವರ ದಾಸಿಮಯ್ಯ, ಜನ ಸಾಮಾನ್ಯರ ಬದುಕು, ಭಾವನೆಗಳನ್ನು ಕಾವ್ಯವನ್ನಾ ಗಿಸಿ, ತಮ್ಮ ಅನುಭವದ ಮೂಲಕ ವಚನಗಳನ್ನು ರಚಿಸಿ, ಕಾಯಕದ ಮಹತ್ವವನ್ನು ತಿಳಿಸಿದ ವಚನಕಾರರು ಎಂದು ಬಣ್ಣಿಸಿದರು.ಸಂಘದ ಗೌರವಾಧ್ಯಕ್ಷ ಅರೇಕಲ್ ಪ್ರಕಾಶ್ ಮಾತನಾಡಿ, ಜನಸಾಮಾನ್ಯರು ಆಡುವ ಭಾಷೆಯಲ್ಲಿಯೇ ಸರಳವಾಗಿ ವಚನ ಗಳನ್ನು ರಚಿಸಿ ಅಂತರಂಗದ ಅನುಭವ ಬಿಚ್ಚಿಟ್ಟವರು. ಕಾಯಕ, ದಾಸೋಹ, ಜ್ಞಾನ ಬೋಧನೆ ಎಂಬ ಮೂರು ತತ್ವಪದಗಳ ಮೂಲಕ ಸಮಾಜದಲ್ಲಿರುವ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ ಸಮಾನತೆ ಸಾರಿದ ಶ್ರೇಷ್ಟರು ಎಂದರು.ಸರಳ, ಸುಲಲಿತ, ವಚನ ಸಾಹಿತ್ಯದ ತತ್ವಗಳು ದೇವರ ದಾಸಿಮಯ್ಯ ಬದುಕಿನ ನೀತಿ ಪಾಠಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ವಚನ ಸಾಹಿತ್ಯದ ಚರಿತ್ರೆ ತಿಳಿಸುವ ಮೂಲಕ ನಾವೆಲ್ಲರೂ ಜಗತ್ತಿಗೆ ಸಾರಬೇಕಿದೆ ಎಂದು ತಿಳಿಸಿದರು.ಇದೇ ವೇಳೆ ನಿವೃತ್ತಿ ಶಿಕ್ಷಕಿ ಹೇಮಾವತಿ ದೇವರ ದಾಸಿಮಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ಕಾರ್ಯದರ್ಶಿ ರವಿಕುಮಾರ್‌, ಸದಸ್ಯ ಹರೀಶ್, ಜಿಲ್ಲಾ ಸಂಘದ ಕಾರ್ಯದರ್ಶಿ ತ್ಯಾಗರಾಜ್, ಸಹ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಬಿ.ಎಲ್.ಪ್ರಕಾಶ್, ನಗರ ಅಧ್ಯಕ್ಷ ಭಗವತಿ ಹರೀಶ್, ಕಡೂರು ಅಧ್ಯಕ್ಷ ರಂಗನಾಥ್, ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣ ಕೇಶವಮೂರ್ತಿ, ಭಾರತಿ ರಂಗನಾಥ್ ಹಾಜರಿದ್ದರು.

14 ಕೆಸಿಕೆಎಂ 4

ಚಿಕ್ಕಮಗಳೂರಿನ ಶ್ರೀ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಯಿತು. ಕೆ. ಶ್ರೀನಿವಾಸ್‌, ರವಿಕುಮಾರ್‌, ಹರೀಶ್‌, ತ್ಯಾಗರಾಜ್‌ ಇದ್ದರು.

Share this article