ಬಂಡಿಗಣಿ ಮಠದ ದಾಸೋಹ ಕಾರ್ಯ ಶ್ಲಾಘನೀಯ: ಸಚಿವ ಎಚ್.ಕೆ.ಪಾಟೀಲ

KannadaprabhaNewsNetwork |  
Published : Nov 10, 2024, 01:51 AM IST
ರಾಜ್ಯೋತ್ಸವ ನಿಮಿತ್ತ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಂಡಿಗಣಿ ನೀಲಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳಿಗೆ ಸೊಗಲದ `ಶ್ರೀ ಸೋಮೇಶ್ವರ ಅನ್ನದಾಸೋಹ ಚಕ್ರವರ್ತಿ’ ಪ್ರಶಸ್ತಿಯನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ ನೀಡಿ ಗೌರವಿಸಿದರು. | Kannada Prabha

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಮಠವು ಅನ್ನದಾಸೋಹದ ಜೊತೆಗೆ ಶಿಕ್ಷಣ, ಸಮಾಜದಲ್ಲಿ ಕ್ರಾಂತಿ ಮಾಡುತ್ತಿರುವುದು ಹೆಮ್ಮೆ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಠ-ಮಾನ್ಯಗಳು ಸರ್ಕಾರದಷ್ಟೇ ಪ್ರಖರವಾಗಿ ಬೆಳೆಯುತ್ತಿವೆ. ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಮಠವು ಅನ್ನದಾಸೋಹದ ಜೊತೆಗೆ ಶಿಕ್ಷಣ, ಸಮಾಜದಲ್ಲಿ ಕ್ರಾಂತಿ ಮಾಡುತ್ತಿರುವುದು ಹೆಮ್ಮೆ. ಇಂತಹ ಮಠಗಳು ರಾಜ್ಯದಲ್ಲಿ ಮತ್ತಷ್ಟು ಬೆಳೆದಾಗ ಬಡತನ, ಅನಕ್ಷರತೆಯಿಂದ ದೂರವಾಗಲು ಸಾಧ್ಯ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಈಚೆಗೆ ಸುಕ್ಷೇತ್ರ ಸೊಗಲ ಜೀರ್ಣೋದ್ಧಾರ ಸಮಿತಿಯಿಂದ ಜರುಗಿದ ಶ್ರೀ ಸೋಮೇಶ್ವರ ಅನ್ನದಾಸೋಹ ಚಕ್ರವರ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸತತ ೩ ದಶಕಗಳಿಂದ ಅನ್ನದಾಸೋಹ ಸೇವೆಗೈದು ಮಠ-ಮಾನ್ಯಗಳಿಗೆ ಮಾದರಿಯಾಗುವುದರ ಜೊತೆಗೆ ಲಕ್ಷಾಂತರ ಭಕ್ತರ ಬೇಡಿಕೆ ಈಡೇರಿಕೆಗೆ ಯಶಸ್ವಿಯಾಗಿರುವ ಬಂಡಿಗಣಿ ನೀಲಮಾಣಿಕ ಮಠದ ಶ್ರೀಅನ್ನದಾನೇಶ್ವರ ಮಹಾಸ್ವಾಮೀಜಿ ಕಾರ್ಯ ಶ್ಲಾಘನೀಯವೆಂದರು.

ಅನ್ನದಾನೇಶ್ವರ ಶ್ರೀಗಳು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜನರ ಏಳ್ಗೆಗಾಗಿಯೇ ಶ್ರಮಿಸುತ್ತಿರುವ ಮಠ-ಮಾನ್ಯಗಳಿಗೆ ಖಾಕಿ-ಖಾದಿ ಪ್ರೋತ್ಸಾಹಿಸಿದ್ದಲ್ಲಿ ರಾಮರಾಜ್ಯವಾಗುತ್ತದೆ. ನಿರಂತರ ಜನರ ಸೇವೆಯಲ್ಲಿರುವ ಬಂಡಿಗಣಿ ಮಠದ ಭಕ್ತರು ಭಕ್ತಿ-ಭಾವದಿಂದ ಯಾವುದೇ ಅಪೇಕ್ಷೆಯಿಲ್ಲದೆ ನಡೆದುಕೊಳ್ಳುತ್ತಿರುವುದಕ್ಕೆ ಧನ್ಯತೆಯಾಗಿದೆ. ಸರ್ಕಾರದಿಂದ ಮಠಗಳಿಗೆ ಇನ್ನಷ್ಟು ಸಹಾಯ-ಸಹಕಾರ ದೊರೆಯಬೇಕೆಂದರು.

ಸುಕ್ಷೇತ್ರ ಸೊಗಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೀರನಗೌಡ ಸಂಗನ್ನವರ ಮಾತನಾಡಿ, ಕೇವಲ ಅನ್ನದಾಸೋಹವಷ್ಟೇ ಅಲ್ಲದೆ ಹೋಳಗಿ, ತರಹೆವಾರಿ ಪಲ್ಯದೊಂದಿಗೆ ಮೃಷ್ಟಾನ್ನ ಭೋಜನ ಏರ್ಪಡಿಸುವ ಕಾಯಕ ಬಂಡಿಗಣಿ ಮಠದ್ದಾಗಿದೆ. ಈ ಮಠಕ್ಕೆ ಒದಗುವ ಸಹಾಯ-ಸಹಕಾರ ಹೇಗೆ? ನಿರಂತರ ವರ್ಷವಿಡೀ ಅನ್ನದಾಸೋಹ ನಡೆಯಲು ಕಾರಣಗಳ ಮೂಲವೇ ದೊರೆಯುವುದಿಲ್ಲ. ಅಷ್ಟೊಂದು ಮುಕ್ತ ಹಾಗೂ ಪ್ರಚಾರ ಬಯಸದೇ ಭಕ್ತರು ನಿತ್ಯ ಮಠದ ಸೇವೆಗೆ ಮುಂದಾಗಿರುವುದು ವಿಶೇಷವೆಂದರು.

ಇದೇ ಸಂದರ್ಭ ಹೊಸೂರಿನ ಗುರು ಮಡಿವಾಳೇಶ್ವರ ಮಠದ ಗಂಗಾಧರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಿತಿ ಧರ್ಮದರ್ಶಿ ನಿಂಗಯ್ಯ ಸ್ವಾಮೀಜಿ, ಶಿವಾನಂದ ಟಕ್ಕಳಕಿ ಸೇರಿದಂತೆ ಅನೇಕರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌