ಒಳಮೀಸಲಾತಿ ಜಾರಿಗೆ ದತ್ತಾಂಶ ಬೇಕು: ಸಿದ್ದರಾಮಯ್ಯ

KannadaprabhaNewsNetwork | Updated : May 06 2025, 09:48 AM IST

ಸಾರಾಂಶ

 ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹ ಕಾರ್ಯ ನಡೆಯಲಿದ್ದು, ಎಲ್ಲರೂ ಭಾಗವಹಿಸಿ ಮಾಹಿತಿ ನೀಡಿ ಗೊಂದಲ ಬಗೆಹರಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ 

 ಬೆಂಗಳೂರು : ‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಸಲುವಾಗಿ ರಾಜ್ಯ ಸರ್ಕಾರ ರಚಿಸಿರುವ ನ್ಯಾ. ನಾಗಮೋಹನ್‌ದಾಸ್‌ ನೇತೃತ್ವದ ಆಯೋಗ ಸೋಮವಾರದಿಂದ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ- 2025ಗೆ ಚಾಲನೆ ನೀಡಿದೆ. ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹ ಕಾರ್ಯ ನಡೆಯಲಿದ್ದು, ಎಲ್ಲರೂ ಭಾಗವಹಿಸಿ ಮಾಹಿತಿ ನೀಡಿ ಗೊಂದಲ ಬಗೆಹರಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪರಿಶಿಷ್ಟ ಜಾತಿ/ಮೂಲ ಜಾತಿಗಳ ಸಮಗ್ರ ಸಮೀಕ್ಷೆ-2025 ಕುರಿತು ವಿವರಣೆ ನೀಡಿದರು.

ನಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲೇ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ಸಹ ಹಸಿರು ನಿಶಾನೆ ತೋರಿದ್ದರಿಂದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಿದ್ದೆವು. ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕುರಿತು ಸಮಿತಿ ಮಧ್ಯಂತರ ವರದಿ ನೀಡಿದ್ದು, ಸಂವಿಧಾನದ 341ನೇ ವಿಧಿ ಅಡಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶ ಸಂಗ್ರಹಿಸಲು ಮನೆ-ಮನೆ ಸಮೀಕ್ಷೆ ನಡೆಸಲು ಸಮಿತಿ ಶಿಫಾರಸು ಮಾಡಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ದತ್ತಾಂಶ ಸಂಗ್ರಹಿಸಲು ಸಮೀಕ್ಷೆ:

ಒಳ ಮೀಸಲಾತಿ ಜಾರಿ ಮಾಡಬೇಕಾದರೆ ಪರಿಶಿಷ್ಟ ಜಾತಿಗಳ ದತ್ತಾಂಶ ಅಗತ್ಯವಿದೆ. ಆದರೆ ಸುಪ್ರೀಂ ಕೋರ್ಟ್‌ ಅಗತ್ಯ ಎಂದು ಹೇಳಿರುವ ದತ್ತಾಂಶ ನಮ್ಮ ಬಳಿ ಇಲ್ಲ. ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಗುರುತಿಸುವಿಕೆಯಲ್ಲಿ ಗೊಂದಲಗಳು ಉಂಟಾಗಿವೆ. ಕೆಲವರು ಆದಿ ದ್ರಾವಿಡ ಎಡಗೈ ಎಂದು ಬರೆಸಿದರೆ, ಮತ್ತೆ ಕೆಲವರು ಆದಿ ದ್ರಾವಿಡ ಬಲಗೈ ಎಂದು ಬರೆಸಿರುತ್ತಾರೆ. ಇವುಗಳ ಬಗ್ಗೆ ಗೊಂದಲ ಬಗೆಹರಿಸಿ ಸ್ಪಷ್ಟವಾಗಿ ಎಡಗೈ ಸಮುದಾಯ, ಬಲಗೈ ಸಮುದಾಯ ಎಷ್ಟಿದೆ ಎನ್ನುವುದು ವೈಜ್ಞಾನಿಕವಾಗಿ ತಿಳಿಯಬೇಕಿದೆ. 101 ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕೊಡುವಾಗ ನಿರ್ದಿಷ್ಟ ಅಂಕಿ-ಅಂಶಗಳು ಬೇಕಾಗುತ್ತವೆ. ಹೀಗಾಗಿ ಮನೆ-ಮನೆಗೆ ಭೇಟಿ ನೀಡಿ 48 ರೀತಿಯ ಮಾಹಿತಿ ಸಂಗ್ರಹಿಸಿ ಅವರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಹಾಗೂ ಔದ್ಯೋಗಿಕ ಸ್ಥಿತಿಗತಿ ಅರಿಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೂರು ಹಂತದಲ್ಲಿ ಸಮೀಕ್ಷೆ :ಮೊದಲ ಹಂತದಲ್ಲಿ ಮೇ 5 ರಿಂದ 17ರವರೆಗೆ ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸುವ ಕೆಲಸ ಆಗಲಿದೆ. ಎರಡನೇ ಹಂತದಲ್ಲಿ ಮೇ 19 ರಿಂದ 21ರವರೆಗೆ ಸ್ಥಳೀಯ ಮಟ್ಟದಲ್ಲಿ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಮನೆ-ಮನೆ ಸಮೀಕ್ಷೆಯಲ್ಲಿ ಮಾಹಿತಿ ನೀಡದವರು ಅಥವಾ ಸಮೀಕ್ಷೆಯಿಂದ ತಪ್ಪಿಸಿಕೊಂಡವರು ಶಿಬಿರಕ್ಕೆ ತೆರಳಿ ಮಾಹಿತಿ ನೀಡಬಹುದು.

ಇನ್ನು ಮೂರನೇ ಹಂತದಲ್ಲಿ ಮೇ 19 ರಿಂದ 22ರವರೆಗೆ ಆನ್​ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೂರೂ ಹಂತಗಳಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲಾಗುವುದು. ನಿಖರ ದತ್ತಾಂಶ ಸಂಗ್ರಹಿಸಿದ ಮೇಲೆ ನಮಗೆ ಶಿಫಾರಸು ಮಾಡುತ್ತಾರೆ. ಇದಕ್ಕಾಗಿ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಶಿವರಾಜ್‌ ತಂಗಡಗಿ, ಕೆ.ಎಚ್.ಮುನಿಯಪ್ಪ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು.

ನಾಗಮೋಹನ್‌ದಾಸ್‌ ವರದಿ

ಮಾತ್ರ ಪರಿಗಣನೆ: ಸಿಎಂಕಾಂತರಾಜು ಆಯೋಗದ ವರದಿ (ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಹಾಗೂ ನಾಗಮೋಹನ್‌ದಾಸ್‌ ಆಯೋಗದ ವರದಿ ನಡುವೆ ಗೊಂದಲ ಉಂಟಾಗಲ್ಲವೇ ಎಂಬ ಪ್ರಶ್ನೆಗೆ, ಈಗ ನಡೆಸುತ್ತಿರುವ ಮನೆ-ಮನೆ ಸಮೀಕ್ಷೆ ಒಳ ಮೀಸಲಾತಿ ಜಾರಿ ಉದ್ದೇಶದಿಂದಲೇ ಮಾಡಲಾಗುತ್ತಿದೆ. ಮುಖ್ಯವಾಗಿ ಪರಿಶಿಷ್ಟ ಜಾತಿಗಳಿಂದ ಎಲ್ಲಾ ರೀತಿಯ ದತ್ತಾಂಶ ಸಂಗ್ರಹ ನಮ್ಮ ಆದ್ಯತೆ. ಹೀಗಾಗಿ ಒಳ ಮೀಸಲಾತಿಗೆ ಸಂಬಂಧಿಸಿ ಈಗ ಮನೆ-ಮನೆ ಸಮೀಕ್ಷೆ ನಡೆಸಿ ನಾಗಮೋಹನ್‌ದಾಸ್ ಅವರು ನೀಡುವ ವರದಿ ಮಾತ್ರ ಪರಿಗಣಿಸುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಮೀಕ್ಷೆಗೆ 100 ಕೋಟಿ ರು. ವೆಚ್ಚ:

ಪರಿಶಿಷ್ಟ ಜಾತಿ ಕುರಿತು ನಿಖರ ದತ್ತಾಂಶ ಅಗತ್ಯವಿದೆ. ಹೀಗಾಗಿ ಸ್ಪಷ್ಟವಾದ ದತ್ತಾಂಶಕ್ಕಾಗಿ ಸಮೀಕ್ಷೆ ನಡೆಸಲಾಗುವುದು. ಈ ಸಮೀಕ್ಷೆಗಾಗಿ ಸುಮಾರು 100 ಕೋಟಿ ರು. ವೆಚ್ಚವಾಗಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಹಾಯವಾಣಿ

ಮನೆ-ಮನೆ ಸಮೀಕ್ಷೆ ಕುರಿತು ಮಾಹಿತಿ ಹಾಗೂ ಗೊಂದಲಗಳು ಇದ್ದರೆ ಸಹಾಯವಾಣಿ ಸಂಖ್ಯೆ 9481359000 ಗೆ ಕರೆ ಮಾಡಬಹುದು.

Share this article