ಕನ್ನಡಪ್ರಭ ವಾರ್ತೆ ದಾವಣಗೆರೆ
ಕೆಲಸದ ಮೇಲೆ ಬಂದ ಪೊಲೀಸ್ ಅಧಿಕಾರಿ ತುಮಕೂರಿನ ದ್ವಾರಕಾ ಹೊಟೆಲ್ ಲಾಡ್ಜ್‌ನಲ್ಲಿ ಜು.1ರಂದು ಕೊಠಡಿ ಬಾಡಿಗೆ ಪಡೆದು ಆತ್ಮಹತ್ಯೆ ಮಾಡಿಕೊಂಡ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಬಿ.ಆರ್.ನಾಗರಾಜಪ್ಪ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆಯ ವಸತಿ ಗೃಹದಲ್ಲಿ ವಾಸವಾಗಿದ್ದ ಬಡಾವಣೆ ಠಾಣೆ ಪಿಎಸ್ಐ ನಾಗರಾಜಪ್ಪ(59) ಜು.1ರಂದು ಮನೆಯಿಂದ ಹೋದವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇಡೀ ದಿನ ಕುಟುಂಬ ಸದಸ್ಯರು, ಬಂಧು-ಬಳಗ, ಸಹೋದ್ಯೋಗಿಗಳು ಸಾಕಷ್ಟು ಹುಡುಕಾಡಿದರೂ ಯಾವುದೇ ಮಾಹಿತಿ ಸಿಗದ ಹಿನ್ನೆಲೆ ಜು.2ರಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಮೃತ ಪಿಎಸ್‌ಐ ನಾಗರಾಜಪ್ಪಗೆ ಪತ್ನಿ, ಓರ್ವ ಮಗಳು, ಮಗ ಇದ್ದಾರೆ. ಮಗಳು ಈಗ ತುಂಬು ಗರ್ಭಿಣಿಯಾಗಿದ್ದು, ನಾಗರಾಜಪ್ಪ ತುಮಕೂರಿನ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದಾಗಿನಿಂದಲೂ ಇಡೀ ಕುಟುಂಬದ ಮೇಲೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ. ಮೃತ ನಾಗರಾಜಪ್ಪ ಮನೆಯಲ್ಲಿ ಮನೆಯ ಸದಸ್ಯರು, ಬಂಧು-ಬಳಗ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.ತುಮಕೂರಿನ ದ್ವಾರಕಾ ಹೊಟೆಲ್‌ನ ಲಾಡ್ಜ್ ಬುಕ್ಕಿಂಗ್‌ನಲ್ಲಿ ಮೃತ ಬಿ.ಆರ್.ನಾಗರಾಜಪ್ಪ ಫೋನ್ ನಂಬರ್, ವಿಳಾಸ ದಾಖಲಾಗಿತ್ತು. ಜು.1ರಂದು ಬೆಳಿಗ್ಗೆ 7ಕ್ಕೆ ಲಾಡ್ಜ್‌ಗೆ ಹೋಗಿದ್ದ ನಾಗರಾಜಪ್ಪ ಸಿವಿಲ್ ಡ್ರೆಸ್‌ನಲ್ಲಿದ್ದರು. ಅಲ್ಲಿನ ಸಿಬ್ಬಂದಿಗೆ ತಾವು ದಾವಣಗೆರೆ ಪೊಲೀಸ್ ಅಂತಲೇ ಪರಿಚಯಿಸಿಕೊಂಡಿದ್ದು, ಮೊದಲು ಬುಕ್ಕಿಂಗ್‌ನಲ್ಲಿ ಫೋನ್ ನಂಬರ್, ಆಧಾರ್ ಕಾರ್ಡ್ ನಂಬರ್ ದಾಖಲಿಸಿದ್ದರು. ನಂತರ ಆಧಾರ್ ನಂಬರ್ ಕಾಣದಂತೆ ಪೆನ್‌ನಿಂದ ಅಳಿಸಿದ್ದರು. ಆಧಾರ್ ನಂಬರ್ ಮುಂದಿನ ಕಾಲಂನಲ್ಲಿ ಪಿಎಸ್‌ಐ, ದಾವಣಗೆರೆ ಎಕ್ಸ್‌ಟೆನ್ಷನ್ ಅಂತಷ್ಟೇ ಬರೆದಿದ್ದರು. ಕೆಲಸದ ಕಾಲಂನಲ್ಲಿ ವೈಯಕ್ತಿಕ ಕೆಲಸ, ಕಾಯಂ ವಿಳಾಸದಲ್ಲಿ #4 ನಿಟ್ಟುವಳ್ಳಿ, ಪೊಲೀಸ್ ಕ್ವಾರ್ಟರ್ಸ್, ದಾವಣಗೆರೆ ಎಂಬುದಾಗಿ ಮಾಹಿತಿ ದಾಖಲಿಸಿದ್ದರು.