ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ಡೇ ಕೇರ್ ಘಟಕ ಪ್ರಾರಂಭ

KannadaprabhaNewsNetwork |  
Published : Aug 03, 2025, 11:45 PM IST
3.ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಜಿಲ್ಲಾ ಕೇಂದ್ರದಲ್ಲಿಯೇ ಥೆರಪಿ ಪಡೆಯಲು ಅನುಕೂಲವಾಗುವಂತೆ ಜಿಲ್ಲಾಸ್ಪತ್ರೆಗಳಲ್ಲಿ ಒಂದೊಂದು ಡೇ ಕೇರ್ ಘಟಕವನ್ನು ಆರಂಭಿಸಿ, ಖಾಸಗಿ ಆಸ್ಪತ್ರೆಗಳೊಂದಿಗೆ ಒಂಡಬಡಿಕೆ ಮಾಡಿಕೊಂಡು ಥೆರಪಿ ನೀಡುವ ಕೆಲಸ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಡೇ ಕೇರ್ ಕೀಮೋಥೆರಪಿ ಕೇಂದ್ರವನ್ನು ನಗರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿದೆ.ಸಾಮಾನ್ಯವಾಗಿ ಕ್ಯಾನ್ಸರ್ ಪೀಡಿತರು ಕೀಮೋಥೆರಪಿಗಾಗಿ ಬೆಂಗಳೂರಿನ ಕಿದ್ವಾಯ್ ಆಸ್ಪತ್ರೆ ಮೇಲೆಯೇ ಅವಲಂಬಿತರಾಗಿದ್ದರು. ಈಗ ಇದಕ್ಕೆ ಮುಕ್ತಿ ನೀಡಿರುವ ರಾಜ್ಯ ಸರ್ಕಾರ ಜಿಲ್ಲಾ ಕೇಂದ್ರದಲ್ಲಿಯೇ ಥೆರಪಿ ಪಡೆಯಲು ಅನುಕೂಲವಾಗುವಂತೆ ಜಿಲ್ಲಾಸ್ಪತ್ರೆಗಳಲ್ಲಿ ಒಂದೊಂದು ಡೇ ಕೇರ್ ಘಟಕವನ್ನು ಆರಂಭಿಸಿ, ಖಾಸಗಿ ಆಸ್ಪತ್ರೆಗಳೊಂದಿಗೆ ಒಂಡಬಡಿಕೆ ಮಾಡಿಕೊಂಡು ಥೆರಪಿ ನೀಡುವ ಕೆಲಸ ಆರಂಭಿಸಿದೆ.ಮೊದಲು ರೋಗ ಲಕ್ಷಣಗಳು ಕಂಡ ತಕ್ಷಣ ರೋಗಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಕಿದ್ವಾಯ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಲಾಗುತಿತ್ತು. ಇಲ್ಲಿ ಹಲವಾರು ಪರೀಕ್ಷೆಗಳನ್ನು ನಡೆಸಿ ಯಾವ ಮಾದರಿಯ ಕ್ಯಾನ್ಸರ್ ಹಾಗೂ ಎಷ್ಟನೇ ಹಂತದಲ್ಲಿ ಎನ್ನುವುದನ್ನು ಪತ್ತೆ ಹಚ್ಚಿ. ಆರಂಭಿಕ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಕೀಮೋ ಥೆರಪಿ ಅಗತ್ಯ ಇರುವವರಿಗೆ ಒಟ್ಟು 21 ಬಾರಿ ಥೆರಪಿ ನೀಡಲಾಗುತ್ತಿದೆ. ಇದರದ್ದೇ ಆದ ಮಾನದಂಡದ ಆಧಾರದ ಮೇಲೆ ಥೆರಪಿಯನ್ನು ನೀಡಲಾಗುತಿತ್ತು. ದೂರದ ಊರಿನಿಂದ ಬರುವ ಬಡವರಿಂದ ಧನಿಕರವರೆಗೆ ಎಲ್ಲರೂ ಬೆಂಗಳೂರಿನಲ್ಲಿಯೇ ಉಳಿದು, ಇಲ್ಲವೇ ರೋಗಿಯನ್ನು ದೂರದ ಊರಿನಿಂದಲೇ ಪ್ರತಿ ಬಾರಿ ಬೆಂಗಳೂರಿಗೆ ಕರೆತಂದು ಥೆರಪಿ ಕೊಡಿಸಬೇಕಿತ್ತು.

ಇದರ ಜೊತೆಗೆ ರಾಜ್ಯಾಧ್ಯಂತ ಬರುವ ರೋಗಿಗಳ ಸಂಖ್ಯೆ ಹೆಚ್ಚಳವಾದ ಕಾರಣ, ಸಾಮಾನ್ಯವಾಗಿ ಕಿದ್ವಾಯ್ ಆಸ್ಪತ್ರೆ ಮೇಲೂ ಕಾರ್ಯದೊತ್ತಡ ನಿರ್ಮಾಣವಾಗಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿಯೇ ಈಗ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಥೆರಪಿ ಘಟಕಗಳನ್ನು ಆರಂಭಿಸಲಾಗಿದೆ.ಸರ್ಕಾರದ ಹೊಸ ಯೋಜನೆಯಂತೆ ಈಗ ರೋಗ ಲಕ್ಷಣ ಪತ್ತೆಯಾದ ಹಾಗೂ ಪತ್ತೆಗಾಗಿ ಬೆಂಗಳೂರಿನ ಕಿದ್ವಾಯ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇಲ್ಲಿ ರೋಗಿಗೆ ಕ್ಯಾನ್ಸರ್ ಇರುವುದು ದೃಢಪಟ್ಟರೆ, ಆರಂಭಿಕ ಚಿಕಿತ್ಸೆ ಇಲ್ಲಿಯೇ ದೊರೆಯುತ್ತದೆ. ನಂತರ ಕೀಮೋ ಆಗತ್ಯವಿದ್ದರೆ, 21 ಕೀಮೋಗಳಲ್ಲಿ ಮೊದಲ ಥೆರಪಿ ಕಿದ್ವಾಯ್‍ನಲ್ಲಿಯೇ ಆಗಲಿದೆ. ಉಳಿದ 20 ಥೆರಪಿಗಳು ಆಯಾ ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿಯೇ ದೊರೆಯುತ್ತದೆ. ಆದರೆ ರೋಗಿ ಯಾವ ಜಿಲ್ಲೆಗೆ ಒಳಪಟ್ಟಿರುತ್ತಾರೋ ಅದೇ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ರೋಗಿಗೆ ಥೆರಪಿ ದೊರೆಯಲಿದೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಬೇಕಾದರೆ ದೂರದ ಊರಿನಿಂದ ಬರುವ ರೋಗಿಗಳು ಬೆಂಗಳೂರಿನಲ್ಲಿಯೇ ಮನೆ ಮಾಡಿಕೊಳ್ಳಬೇಕಿತ್ತು. ಇದು ಬಡ ರೋಗಿಗಳ ಪಾಲಿಗೆ ವೆಚ್ಚವನ್ನು ಜಾಸ್ತಿ ಮಾಡುತಿತ್ತು. ಇನ್ನು ಬಂದು ಹೋಗುವ ರೋಗಿಗಳ ಪಾಲಿಗೆ ದೊಡ್ಡ ಸವಾಲಿನ ಕೆಲಸವೇ ಆಗಿತ್ತು. ಥೆರಪಿ ರೋಗಿಗಳನ್ನು ಒಂದಿಷ್ಟು ಬಳಲಿಸುತ್ತೆ. ಇದರ ಜತೆಗೆ ಪ್ರಯಾಣ ಮತ್ತಷ್ಟು ನೋವು ತರುತಿತ್ತು. ಆದರೆ ಈಗ ತಮ್ಮದೇ ಜಿಲ್ಲೆಯಲ್ಲಿ ಥೆರಪಿ ದೊರೆಯುವ ಕಾರಣ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ.

ಥೆರಪಿ ಇರುವ ದಿನದಂದು ಬರುವ ರೋಗಿಗೆ ಡೇ ಕೇರ್ ಥೆರಪಿ ಕೇಂದ್ರದಲ್ಲಿ ತಜ್ಞ ವೈಧ್ಯರು ಚಿಕಿತ್ಸೆ ನೀಡಿದ ನಂತರ ಒಂದಿಷ್ಟು ಕಾಲ ವಿಶ್ರಾಂತಿ ಪಡೆದು ಸಂಜೆ ವೇಳೆಗೆ ತಮ್ಮ ಮನೆಗೆ ಸೇರಿಕೊಳ್ಳಬಹುದು.

ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯಲ್ಲಿ ಈಗ 10 ಬೆಡ್‍ನ ಕೀಮೋಥೆರಪಿ ಡೇ ಕೇರ್ ಕೇಂದ್ರವನ್ನು ಆರಂಭಿಸಲಾಗಿದೆ. ಜಿಲ್ಲೆಗೆ ಸಂಬಂ„ಸಿದಂತೆ ಸಂಜೀವಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಈವರೆವಿಗೂ ಜಿಲ್ಲೆಗೆ ಓರ್ವ ರೋಗಿಯನ್ನು ಶಿಫಾರಸ್ಸು ಮಾಡಿಲ್ಲ. ಇದಕ್ಕೆ ಬೇಕಾದ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿ, ಅವರಿಗೆ ತರಬೇತಿಯನ್ನು ಸಹ ನೀಡಲಾಗಿದೆ.

ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಕೀಮೋ ಥೆರಪಿ ಡೇ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದ್ದು, ನಮ್ಮ ಜಿಲ್ಲೆಯಲ್ಲಿಯೂ ಸಹ ಆರಂಭಗೊಂಡಿದೆ. ಆಯಾ ಜಿಲ್ಲೆಯ ರೋಗಿಗಳಿಗೆ ಮಾತ್ರವಷ್ಟೇ ಇಲ್ಲಿ ಕಿಮೋ ಥೆರಪಿ ಮಾಡಲಾಗುತ್ತದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ದತೆ ಸಹ ಕೈಗೊಳ್ಳಲಾಗಿದೆ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿ. ಮಂಜುನಾಥ್ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದರು.

-------

3ಕೆಆರ್ ಎಂಎನ್ 3,4.ಜೆಪಿಜಿ

3.ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆ

4. ಕೀಮೋಥೆರಪಿ ಪ್ರಚಾರ ಫಲ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ