ಜ್ವರ ಇದ್ರೆ, ಕೋವಿಡ್ ಹೆಚ್ಚಿರುವ ರಾಜ್ಯಕ್ಕೆ ಹೋಗಿ ಬಂದ್ರೆ, ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಿಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಕೋವಿಡ್ ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ, ಜ್ವರ ಇದ್ರೆ, ಕೋವಿಡ್ ಪ್ರಕರಣಗಳು ಹೆಚ್ಚಿರುವ ರಾಜ್ಯಗಳಿಗೆ ಹೋಗಿ ಬಂದಿದ್ದರೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಲ್ಲೂ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ. ಆದರೂ ಕೂಡ ಸರ್ಕಾರದ ನಿರ್ದೇಶನದಂತೆ ಮುಂಜಾಗ್ರತೆ ತೆಗೆದುಕೊಳ್ಳಲಾಗುವುದು ಎಂದರು.
ಕಳೆದ ಬಾರಿ ಕೋವಿಡ್-19 ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಳ್ಳಲಾಗಿತ್ತು. ಅವುಗಳಲ್ಲಿ ಪ್ರಮುಖವಾಗಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ತೆರೆಯಲಾಗಿತ್ತು ಎಂದರು.ಇನ್ನೂ ಮುನ್ನೆಚ್ಚರಿಕೆಯಾಗಿ ಕಿಟ್‌ಗಳ ಬಗ್ಗೆ ಪರಿಶೀಲನೆ ನಡೆಸಿ, ಅವುಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ಕೆಲಸವನ್ನು ಶನಿವಾರದೊಳಗೆ ಪೂರ್ಣಗೊಳಿಸಬೇಕೆಂದು ಅರೋಗ್ಯ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.ಮೊದಲಿಗೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು, ಜ್ವರ, ಕಫದ ಲಕ್ಷಣ ಇದ್ದವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದರೆ, ಯಾರೂ ಕೂಡ ಆತಂಕ ಪಡಬಾರದು ಎಂದರು. ಚಿಕ್ಕಮಗಳೂರು ಜಿಲ್ಲೆಗೆ ಬೇರೆ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿರುವ ಬಗ್ಗೆ ಕೇಳಿದಾಗ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ಯಾವುದೇ ರೀತಿಯ ಆದೇಶ ಸರ್ಕಾರದಿಂದ ಬಂದಿಲ್ಲ. ಆದರೂ ಕೂಡ ಹೋಂ ಸ್ಟೇ ಹಾಗೂ ರೇಸಾರ್ಟ್ ಮಾಲಿಕರಿಗೆ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ದತ್ತ ಜಯಂತಿ ಸಂದರ್ಭದಲ್ಲಿ ಚಿಕ್ಕಮಗಳೂರಿಗೆ ಸಾವಿರಾರು ಭಕ್ತರು ಬರಲಿದ್ದಾರೆ. ಈ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಬೇಕೆಂದು ದತ್ತಪೀಠ ಸಂವರ್ಧನಾ ಸಮಿತಿಯವರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ನಿಯಮ ಪಾಲನೆ ಮಾಡಬೇಕು ಎಂದರು. 60 ವರ್ಷ ಮೇಲ್ಪಟ್ಟವರು, ಜ್ವರ, ಕಫದಿಂದ ಬಳಲುತ್ತಿರುವವರು ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ಮಾಸ್ಕ್ ಧರಿಸುವುದು ಆರೋಗ್ಯ ದೃಷ್ಟಿಯಿಂದ ಒಳಿತು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್‌ಬಾಬು ಮಾತನಾಡಿ, ಜ್ವರ ಇದ್ದವರು, ಶಬರಿಮಲೈ ಧಾರ್ಮಿಕ ಕೇಂದ್ರಕ್ಕೆ ಹೋಗಿ ಬಂದವರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡಾ. ಮೋಹನ್‌ಕುಮಾರ್ ಮಾತನಾಡಿ, ಈ ವರ್ಷದಲ್ಲಿ ಕೋವಿಡ್ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸರ್ಕಾರದ ಸೂಚನೆಯ ಮೇರೆಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಈವರೆಗೆ 45 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಉಪಸ್ಥಿತರಿದ್ದರು.