ಕನ್ನಡಪ್ರಭ ವಾರ್ತೆ, ವಿಧಾನಸಭೆ
ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಟ್ಯಾಂಕರ್ ನೀರಿನ ದಂಧೆಯ ನಿಯಂತ್ರಿಸಿ, ಸರ್ಕಾರದಿಂದಲೇ ನಿರ್ದಿಷ್ಟ ದರ ನಿಗದಿ ಪಡಿಸಲು ಕಾನೂನಾತ್ಮಕವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಬಿಜೆಪಿಯ ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಮುನಿರಾಜು ಅವರ ಪ್ರಶ್ನೆಗಳಿಗೆ ಉತ್ತರಿಸಿದ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್, ಖಾಸಗಿ ಟ್ಯಾಂಕರ್‌ಗಳ ದಂಧೆ ನಿಯಂತ್ರಿಸಲು ಸಿದ್ಧರಿದ್ದೇವೆ. ಆಡಳಿತ ಮತ್ತು ಪ್ರತಿಪಕ್ಷದ ಎರಡೂ ಕಡೆಯ ಸದಸ್ಯರು ಚರ್ಚಿಸಿ ಪ್ರತ್ಯೇಕವಾಗಿ ಮನವಿ ಪತ್ರ ಕೊಡಿ, ಖಾಸಗಿ ಟ್ಯಾಂಕರ್ ನೀರಿಗೆ ನಿರ್ದಿಷ್ಟ ದರ ನಿಗದಿಪಡಿಸಲು ಕ್ರಮ ವಹಿಸುತ್ತೇವೆ. ಜೊತೆಗೆ ಕೊಳವೆಬಾವಿಗಳ ನಿಯಂತ್ರಣಕ್ಕೆ ಕಾಯ್ದೆಯೂ ಇದೆ. ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳಬಹುದೆಂದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಮೂವರೂ ಸದಸ್ಯರು, ನಗರದಲ್ಲಿ ಒಂದು ಟ್ಯಾಂಕರ್‌ಗೆ 1500 ರು. ವರೆಗೂ ದರ ವಿಧಿಸಲಾಗುತ್ತಿದೆ. ನೀರಿನ ಲಭ್ಯತೆ ಇದ್ದರೂ ಟ್ಯಾಂಕರ್‌ನವರು ನೀರು ಪೂರೈಸದೆ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರ ವಸೂಲಿಗಿಳಿದಿದ್ದಾರೆ. ಹಾಗಾಗಿ ಕೂಡಲೇ ಸರ್ಕಾರ ಇದಕ್ಕೆ ಕಡಿವಾಣ ಹಾಕಿ ಒಂದು ಟ್ಯಾಂಕರ್ ನೀರಿಗೆ 500 ರು. ನಿಂದ 600 ರು. ನಿಗದಿಪಡಿಸಬೇಕೆಂದು ಆಗ್ರಹಿಸಿದರು.ಇದಕ್ಕೆ ದನಿನಿಗೂಡಿಸಿದ ಬಿಜೆಪಿಯ ಎಸ್. ಸುರೇಶ್‌ಕುಮಾರ್, ಗೋಪಾಲಯ್ಯ ಮತ್ತಿತರರು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಬೋರ್‌ವೆಲ್‌ಗಳಿಂದ ದಿನವಿಡೀ ನೀರು ತೆಗೆಯುವುದರಿಂದ ಅಂತರ್ಜಲ ತೀವ್ರವಾಗಿ ಕುಸಿಯುತ್ತಿದ್ದು, ವಸತಿ ಪ್ರದೇಶದ ಕೊಳವೆ ಬಾವಿಗಳು ಬತ್ತುತ್ತಿವೆ. ಹಾಗಾಗಿ ಇದಕ್ಕ ಕಡಿವಾಣ ಹಾಕಬೇಕು. ಸರ್ಕಾರ ಪ್ರತಿ ವಾರ್ಡಿಗೆ ಮೂರು, ನಾಲ್ಕು ಹೊಸ ಕೊಳವೆಬಾವಿ ಕೊರೆಯಲೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.