ನೀರು ಉಳಿಸಿ ಅಭಿಯಾನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ

KannadaprabhaNewsNetwork | Updated : Mar 15 2024, 01:15 PM IST

ಸಾರಾಂಶ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಂಡ ಬೆನ್ನಲ್ಲೇ ನೀರು ಉಳಿಸಿ ಅಭಿಯಾವನ್ನು ಜಲಮಂಡಳಿ ಆರಂಭಿಸಿದ್ದು, ಇದಕ್ಕೆ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬರ ಪರಿಸ್ಥಿತಿಯಲ್ಲಿ ಎಲ್ಲರೂ ನೀರನ್ನು ಬಹಳ ಜವಾಬ್ದಾರಿಯಿಂದ ಸಮರ್ಪಕವಾಗಿ ಬಳಸಬೇಕು. ಈ ವಿಚಾರವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಗುರುವಾರ ಆಯೋಜಿಸಿದ್ದ ‘ನೀರು ಉಳಿಸಿ ಬೆಂಗಳೂರು ಬೆಳಸಿ’ ಅಭಿಯಾನಕ್ಕೆ ಚಾಲನೆ ನೀಡಿ, ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ, ಜಲಸ್ನೇಹಿ ಆ್ಯಪ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. 

ನಾಲ್ಕು ಆ್ಯಪ್‌ಗಳನ್ನು ಪರಿಚಯಿಸುತ್ತಿದ್ದು, ಯಾರೇ ಹೊಸ ಕೊಳವೆಬಾವಿ ಕೊರೆಯುವಾಗ ಜಲಮಂಡಳಿಯಿಂದ ಅನುಮತಿ ಪಡೆಯಬೇಕಾಗಿದೆ. ಇದರಲ್ಲಿ ಹೆಚ್ಚುವರಿ ನೀರನ್ನು ಸರ್ಕಾರ ಯಾರಿಗೆ ಹಂಚಿಕೆ ಮಾಡಬೇಕು ಎಂದು ತೀರ್ಮಾನಿಸಲು ಹಾಗೂ ನೀರಿನ ಸಮರ್ಪಕ ಬಳಕೆಗೆ ಈ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಶಾಸಕರಾದ ಅಶೋಕ್ ಮನಗೂಳಿ, ಬಸವರಾಜ್ ಶಿವಗಂಗಾ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಮನೋಹರ್, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಇದ್ದರು.

ಇ-ರಿಕ್ಷಾಗಳಲ್ಲಿ ನೀರು ಉಳಿಸಿ: ಸಮೃದ್ಧ ಬೆಂಗಳೂರಿಗೆ ನೀರು ಉಳಿಸುವ ಅಗತ್ಯತೆ ಮತ್ತು ಪ್ರಾಮುಖ್ಯತೆ ಸಾರುವ ಸಂದೇಶ ಹೊತ್ತ ಇ-ರಿಕ್ಷಾ ವಾಹನಗಳಿಗೆ ಇದೇ ವೇಳೆ ಚಾಲನೆ ನೀಡಲಾಯಿತು. ಈ ವಾಹನಗಳು ಬೆಂಗಳೂರು ನಗರದಾದ್ಯಂತ ಸಂಚರಿಸಿ ಅರಿವು ಮೂಡಿಸಲಿವೆ.

ಜಲಸ್ನೇಹಿ ಆ್ಯಪ್: ಸಂಸ್ಕರಿಸಿದ ನೀರನ್ನು ಸಾರ್ವಜನಿಕರು ಕುಡಿಯುವುದನ್ನು ಹೊರತುಪಡಿಸಿ ಇನ್ನಿತರೆ ಕಾರ್ಯಗಳಿಗೆ ಮರುಬಳಕೆ ಮಾಡಲು ಕಾಯ್ದಿರಿಸಿ ಸರಬರಾಜು ಪಡೆಯಲು ಈ ಆ್ಯಪ್‌ ಬಳಕೆ ಮಾಡಬಹುದಾಗಿದೆ.ಅಂತರ್ಜಲ ಆ್ಯಪ್

ಈ ಆ್ಯಪ್‌ ಮೂಲಕ ಬೆಂಗಳೂರು ನಗರದ ನಾಗರಿಕರು ತಮ್ಮ ಮನೆಯಲ್ಲಿ ಕುಳಿತು ಕೊಳವೆಬಾವಿಯ ಅನುಮತಿ ಪಡೆಯಲು ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಸಮಿತಿ ವರದಿ ಪರಿಶೀಲಿಸಿ ನಿರಾಪೇಕ್ಷಣಾ ಪತ್ರವನ್ನು ಮಂಡಳಿಯು ಆ್ಯಪ್‌ ಮೂಲಕವೇ ಒದಗಿಸಲಿದೆ.

ಜಲಸಂರಕ್ಷಕ ಆ್ಯಪ್: ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಸುವುದನ್ನು ಮಂಡಳಿ ಈಗಾಗಲೇ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲು ಜಲಸಂರಕ್ಷಕ ಆ್ಯಪ್ ಬಳಕೆ ಮಾಡಲಾಗುತ್ತದೆ.

ಜಲಮಿತ್ರ ಆ್ಯಪ್: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನೀರು ಸೋರಿಕೆ, ಒಳಚರಂಡಿ ನೀರು ಉಕ್ಕಿ ಹರಿಯುವುದು, ಜಲಮಂಡಳಿಯ ಅವಶ್ಯಕ ದಾಖಲಾತಿಗಳ ಸರ್ವೆ ಮಾಡಲು ಹಾಗೂ ಇನ್ನೀತರೆ ಕಾರ್ಯಗಳಿಗೆ ಸ್ವಯಂ ಸೇವೆ ಇಚ್ಚಿಸುವ ನಾಗರಿಕರು, ಎನ್‌ಜಿಒ, ನಿವೃತ್ತ ತಾಂತ್ರಿಕ ಸಿಬ್ಬಂದಿ ನೋಂದಣಿಗಾಗಿ ಜಲಮಿತ್ರ ಆ್ಯಪ್ ಬಳಕೆ ಮಾಡಿಕೊಳ್ಳಲಾಗುವುದು. ಈ ಆ್ಯಪ್ ಗಳನ್ನು ಬೆಂಗಳೂರಿಗರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

Share this article