ಕನ್ನಡಪ್ರಭ ವಾರ್ತೆ ಮಂಗಳೂರು
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರಕ್ಕೆ ನೆರವಾಗಲು ಸ್ಥಾಪಿಸಲಾಗಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ)ವನ್ನು 33 ವಿಶೇಷ ಪೊಲೀಸ್ ಠಾಣೆಗಳನ್ನಾಗಿ ಪರಿವರ್ತಿಸಲು ಸರ್ಕಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಈ ಯೋಜನೆ ಕಾನೂನುಗಳ ಆಶಯದಂತೆ ಅನುಷ್ಠಾನಗೊಳ್ಳಲು ಈ ಎಲ್ಲ ವಿಶೇಷ ಪೊಲೀಸ್ ಠಾಣೆಗಳಿಗೆ ಸಾಕಷ್ಟು ಅಧಿಕಾರಿಗಳು, ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ - ಸಂಸ್ಥೆಗಳ ಮಹಾ ಒಕ್ಕೂಟ ಆಗ್ರಹಿಸಿದೆ.ಮಹಾ ಒಕ್ಕೂಟ ಅಧ್ಯಕ್ಷ ಲೋಲಾಕ್ಷ ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಡಿಸಿಆರ್‌ಇ ಘಟಕಗಳನ್ನು ಪೊಲೀಸ್ ಠಾಣೆಗಳನ್ನಾಗಿ ಪರಿವರ್ತನೆ ಮಾಡುವ ಆಶಯ ಉತ್ತಮವಾದರೂ ಅನುಷ್ಠಾನದಲ್ಲಿ ಯಾವುದೇ ಲೋಪವಾದರೆ, ಅದು ಪರಿಶಿಷ್ಟ ಜನ ಸಮುದಾಯಗಳ ಬದುಕಿನ ಮೇಲೆ ಅತ್ಯಂತ ಅಪಾಯಕಾರಿ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾದೀತು ಎಂದು ಅವರು ಆತಂಕ ವ್ಯಕ್ತಪಡಿಸಿದರು.ದೌರ್ಜನ್ಯ ಜಾಗೃತಿ ಸಮಿತಿ ಬದಲಿಸಿ:
ಪರಿಶಿಷ್ಟ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯು, ಕಾನೂನು ನಿಯಮಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವ, ಸಾಮಾಜಿಕ ಬದ್ಧತೆ ಮತ್ತು ಕಾಳಜಿ ಇರುವ ವ್ಯಕ್ತಿಗಳನ್ನು ಒಳಗೊಂಡಿರಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಪರಿಸ್ಥಿತಿ ಭಿನ್ನ ಇರುವುದರಿಂದ, ಅದನ್ನು ಬದಲಿಸಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಮುಖಂಡರಾದ ಕಾಂತಪ್ಪ ಆಲಂಗಾರು, ಜನಾರ್ದನ ಬೋಳಂತೂರು, ದಯಾನಂದ್, ರಾಜಾ ಚಂಡ್ತಿಮಾರ್, ಲಕ್ಷ್ಮಣ ಕಾಂಚನ್ ಮತ್ತಿತರರಿದ್ದರು.