ಕನ್ನಡ ಫಲಕಕ್ಕೆ ಕರವೇ ಮಾ.5ರ ಗಡುವು

KannadaprabhaNewsNetwork | Updated : Feb 29 2024, 08:52 AM IST

ಸಾರಾಂಶ

ಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಅನುಷ್ಠಾನಕ್ಕೆ ಮಾರ್ಚ್‌ 5 ರವೆರೆಗೆ ಕರ್ನಾಟಕ ರಕ್ಷಣಾ ವೇದಿಕೆ ಬಿಬಿಎಂಪಿಗೆ ಗಡುವು ನೀಡಿದ್ದು, ಆ ನಂತರವೂ ಕನ್ನಡ ನಾಮ ಫಲಕ ಅಳವಡಿಕೆ ಮಾಡದ ವಾಣಿಜ್ಯ ಮಳಿಗೆಗಳ ಪಟ್ಟಿ ಸಿದ್ಧಪಡಿಸಿ ಬಿಬಿಎಂಪಿಗೆ ಸಲ್ಲಿಸುವುದಕ್ಕೆ ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಅನುಷ್ಠಾನಕ್ಕೆ ಮಾರ್ಚ್‌ 5 ರವೆರೆಗೆ ಕರ್ನಾಟಕ ರಕ್ಷಣಾ ವೇದಿಕೆ ಬಿಬಿಎಂಪಿಗೆ ಗಡುವು ನೀಡಿದ್ದು, ಆ ನಂತರವೂ ಕನ್ನಡ ನಾಮ ಫಲಕ ಅಳವಡಿಕೆ ಮಾಡದ ವಾಣಿಜ್ಯ ಮಳಿಗೆಗಳ ಪಟ್ಟಿ ಸಿದ್ಧಪಡಿಸಿ ಬಿಬಿಎಂಪಿಗೆ ಸಲ್ಲಿಸುವುದಕ್ಕೆ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಬುಧವಾರ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ನಾರಾಯಣಗೌಡ, ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಕೆ ಹೋರಾಟದಿಂದ ಇದೀಗ ನಾಮಫಲಕ ಅಳವಡಿಕೆ ಆರಂಭಗೊಂಡಿದೆ.

 ರಾಜ್ಯ ಸರ್ಕಾರ ಸಹ ಸುಗ್ರೀವಾಜ್ಞೆ ಹೊರಡಿಸಿ ನಾಮ ಫಲಕದಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆಗೆ ಆದೇಶಿಸಿದೆ ಎಂದರು.

ನಗರದಲ್ಲಿ 55 ಸಾವಿರಕ್ಕೂ ಅಧಿಕ ಮಳಿಗೆ ಮಾಲೀಕರಿಗೆ ಬಿಬಿಎಂಪಿಯಿಂದ ನೋಟಿಸ್‌ ನೀಡಿದೆ. ಈ ಪೈಕಿ ಸುಮಾರು 40 ಸಾವಿರಕ್ಕೂ ಅಧಿಕ ಮಳಿಗಳಲ್ಲಿ ಈಗಾಗಲೇ ಕನ್ನಡ ನಾಮ ಫಲಕ ಅಳವಡಿಕೆ ಮಾಡಿಕೊಂಡಿರುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.

ಮಾರ್ಚ್‌ 1 ರಿಂದ ಕನ್ನಡ ನಾಮ ಫಲಕ ಅಳವಡಿಕೆ ಮಾಡಿಕೊಳ್ಳದ ವ್ಯಾಪಾರಿಗಳ ಉದ್ದಿಮೆ ಪರವಾನಗಿ ರದ್ದು ಪಡಿಸಿ, ಸೀಜ್‌ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ, ಬಿಬಿಎಂಪಿಗೆ ಕನ್ನಡ ನಾಮ ಫಲಕ ಅನುಷ್ಠಾನಕ್ಕೆ ಮಾರ್ಚ್‌ 5 ವರೆಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು.ವಾರ್ಡ್‌ ವಾರು ಪಟ್ಟಿ

ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮಾರ್ಚ್ 6 ರಿಂದ ವಾರ್ಡ್‌ ವಾರು ಸಮೀಕ್ಷೆ ನಡೆಸಿ ಕನ್ನಡ ನಾಮ ಫಲಕ ಅಳಡಿಕೆ ಮಾಡಿಕೊಳ್ಳದ ಅಂಗಡಿ ಹೆಸರು ಮತ್ತು ವಿಳಾಸವನ್ನು ಪಟ್ಟಿ ಮಾಡಬೇಕು. 

ಈ ಪಟ್ಟಿಯನ್ನು ಬಿಬಿಎಂಪಿ ಅಧಿಕಾರಿಗಳಿಗೆ ನೀಡಿ ಕನ್ನಡ ನಾಮ ಫಲಕ ಅಳಡಿಕೆಗೆ ಆಗ್ರಹಿಸುವ ಕೆಲಸ ಮಾಡೋಣ ಎಂದು ನಾರಾಯಣಗೌಡ ತಿಳಿಸಿದರು.

ಕಾರ್ಯಕರ್ತದಿಂದ ತೆರವು ಬೇಡ: ಸರ್ಕಾರ ಕಾನೂನು ರಚಿಸಿದೆ. ಹೀಗಾಗಿ, ವೇದಿಕೆಯ ಕಾರ್ಯಕರ್ತರು ಅನ್ಯ ಭಾಷೆಯ ನಾಮ ಫಲಕ ಕಂಡು ಬಂದರೆ ತೆರವು ಮಾಡುವುದು ಬೇಡ. ಅಧಿಕಾರಿಗಳ ಮೂಲಕ ತೆರವು ಗೊಳಿಸುವ ಕೆಲಸ ಮಾಡೋಣ ಎಂದು ನಾರಾಯಣ ಗೌಡ ಹೇಳಿದರು.ತಾತ್ಕಾಲಿಕ ಕ್ರಮ

ಕನ್ನಡ ಭಾಷೆಯ ನಾಮ ಫಲಕ ಅಳವಡಿಕೆಗೆ ನೀಡಲಾಗಿದ್ದ ಗಡುವು ಫೆ.28ಕ್ಕೆ ಮುಕ್ತಾಯಗೊಂಡಿರುವುದರಿಂದ ನಗರದ ವಿವಿಧ ಅಂಗಡಿ ಮಾಲೀಕರು ಅನ್ಯ ಭಾಷೆಯ ನಾಮ ಫಲಕಗಳಿಗೆ ಬಟ್ಟೆ ಸೇರಿದಂತೆ ಮೊದಲಾದವುಗಳಿಂದ ಮುಚ್ಚುವ ಕೆಲಸ ಮಾಡಿದ್ದಾರೆ. 

ಇನ್ನು ಕೆಲವು ಕಡೆ ಕನ್ನಡ ಭಾಷೆ ಬಳಸಿದ ಬಟ್ಟೆ ಬ್ಯಾನರ್‌ಗಳನ್ನು ಅನ್ಯ ಭಾಷೆಯ ಶಾಶ್ವತ ನಾಮ ಫಲಕದ ಮೇಲೆ ಅಳವಡಿಕೆ ಮಾಡಿರುವುದು ಕಂಡು ಬಂದಿದೆ.

ನಾಮ ಫಲಕ ಅಳವಡಿಕೆ ಅಭಿಯಾನದ ಕಾವು ಕಡಿಮೆಯಾದ ಬಳಿಕ ತಮ್ಮ ಹಳೆ ಚಾಳಿ ಮುಂದುವರೆಸುವ ತಂತ್ರ ಮಾಡಲಾಗಿದೆ.

Share this article