ಜೋಯಿಡಾ:ತಾಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೋಳಿ ಗ್ರಾಮದ ೬ ಗ್ರಾಮಗಳಿಗೆ ವಿದ್ಯುತ್ ಪೂರೈಸಲು ಹೆಸ್ಕಾಂ ಇಲಾಖೆ ವಿಫಲವಾಗಿದೆ. ಒಂದು ವಾರದೊಳಗೆ ವಿದ್ಯುತ್ ನೀಡಲು ಕ್ರಮಕೈಗೊಳ್ಳದೇ ಇದ್ದರೆ ತಹಸೀಲ್ದಾರ್ ಕಚೇರಿ ಎದುರು ನಿರಂತರ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಗ್ರಾಮಸ್ಥರು
ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.ಅಂಬೋಳಿ ಗ್ರಾಮದ ಮಜರೆಗಳಾದ ಕಾಮರೆ, ಬಿಕಂಡಿ, ಚಾಂದೇಗಾಳಿ, ಫೊಂಡೆಗಾಳಿ, ಭೋಗಾಳಿ ಮತ್ತು ಕುಂಬಾರಮಾತಿ ಮಜರೆಗಳಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ಅನಾದಿ ಕಾಲದಿಂದಲೂ ಬದುಕುತ್ತಿದ್ದಾರೆ. ದೇಶ ಸ್ವಾತಂತ್ರ್ಯವಾಗಿ 7 ದಶಕ ಕಳೆದರೂ ಇವರ ಮನೆಯ ಕತ್ತಲೆ ಹೋಗಲಾಡಿಸುವ ಕೆಲಸವಾಗಿಲ್ಲ. ಈ ಗ್ರಾಮಗಳಿಗೆ 2017ರಲ್ಲಿ ವಿದ್ಯುತ್ ಮಂಜೂರಿ ಆದಾಗ ಗ್ರಾಮ ಪಂಚಾಯಿತಿ ಉಳವಿ ಮುಖಾಂತರ ರೇಶನ್ ಕಾರ್ಡ್, ಆಧಾರ್ ಸೇರಿದಂತೆ ಎಲ್ಲ ದಾಖಲೆ ನೀಡಲಾಗಿದೆ. ಬೆಳಕು ಯೋಜನೆ ನಮ್ಮ ಪಾಲಿಗೆ ಕತ್ತಲೆ ಯೋಜನೆ ಆಗಿದೆ. ಶಾಲಾ ವಿದ್ಯಾರ್ಥಿಗಳು, ರೈತರು ತೊಂದರೆ ಅನುಭವಿಸುವಂತಾಗಿದೆ. ಚಿಮಣಿ ಎಣ್ಣೆ ಇಲ್ಲದೆ ಬೆಂಕಿಮನೆ ಬೆಳಕು ನೀಡುತ್ತದೆ. ಕಾರಣ ಒಂದು ವಾರದೊಳಗೆ ವಿದ್ಯುತ್ ನೀಡಲು ಕ್ರಮಕೈಗೊಳ್ಳದೇ ಇದ್ದರೆ ತಹಸೀಲ್ದಾರ್ ಕಚೇರಿ ಎದುರು ನಿರಂತರ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ..ಹರಿಜನ ಕುಟುಂಬಕ್ಕೂ ವಿದ್ಯುತ್ ಇಲ್ಲ:ಈ ಗ್ರಾಮದ ಮಧ್ಯೆ ಹರಿಜನ ಮತ್ತು ಗಿರಿಜನ ಕುಟುಂಬಗಳಿದ್ದರು ಈ ಕುಟುಂಬಗಳಿಗೆ ಎಲ್ಲ ಮೂಲಭೂತ ಸೌಲಭ್ಯ ನೀಡಬೇಕೆಂದು ಸರ್ಕಾರ ಹೇಳುತ್ತಿದೆ. ಆದರೆ ಇವರ ಪಾಲಿಗೆ ವಿದ್ಯುತ್ ಇಲ್ಲದೇ ಕತ್ತಲೆಯ ಭಾಗ್ಯ ಸರ್ಕಾರ ನೀಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮನವಿಯಲ್ಲಿ ಪ್ರಮುಖರಾದ ಪ್ರೇಮಾನಂದ ವೆಳಿಪ, ಸಂದೇಶ ಮಿರಾಶಿ, ಲಕ್ಷ್ಮಣ ಮಿರಾಶಿ, ವಿಷ್ಣು ಭಿರಂಗತ್, ಸಂತೋಷ ಸಾವಂತ್, ಲಕ್ಷ್ಮಣ ಹನ್ನೋಲಕರ, ಸಂದೀಪ್ ಮಿರಾಶಿ, ಕೃಷ್ಣ ಮಿರಾಶಿ, ಕೃಷ್ಣ ಹರಿಜನ, ಗೋಪಾಲ ಬಿರಂಗತ ಮುಂತಾದವರು ಸಹಿ ಮಾಡಿದ್ದಾರೆಎ.