ವಿದ್ಯುತ್ ಪ್ರವಹಿಸಿ ಎಮ್ಮೆ ಸಾವು: ಪರಿಹಾರ ನೀಡದ ಬೆಸ್ಕಾಂ ಇಲಾಖೆ

KannadaprabhaNewsNetwork | Published : Aug 4, 2024 1:21 AM

ಸಾರಾಂಶ

ವಿದ್ಯುತ್‌ ಶಾಕ್‌ನಿಂದ ಎಮ್ಮೆ ಸಾವಿನ ಕುರಿತು ಪಶು ವೈದ್ಯರಿಂದ ಮರಣೋತ್ತರ ದೃಢೀಕರಣ ಹಾಗೂ ಇತರೆ ಸಾವಿನ ಸಂಬಂಧ ಅಗತ್ಯ ದಾಖಲೆ ಪಡೆದು 10 ತಿಂಗಳೂ ಕಳೆದಿದ್ದರೂ, 50 ಸಾವಿರ ರು. ಎಮ್ಮೆಗೆ ಸಂಬಂಧಪಟ್ಟ ಪರಿಹಾರ ಇನ್ನೂ ಕಲ್ಪಿಸುವಲ್ಲಿ ಬೆಸ್ಕಾಂ ಹಾಗೂ ಪಶು ಆರೋಗ್ಯ ಇಲಾಖೆ ಅಧಿಕಾರಿಗಳು ಮೀನಾಮೇಷ ಎಣ್ಣಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಶಾರ್ಕ್ ಸಕ್ಯೂರ್ಟ್‌ನಿಂದ ಎಮ್ಮೆ ಸತ್ತು 10 ತಿಂಗಳು ಕಳೆದರೂ ಬೆಸ್ಕಾಂ ಹಾಗೂ ತಾಲೂಕು ಪಶುಪಾಲನಾ ಇಲಾಖೆಯಿಂದ ಯಾವುದೇ ಪರಿಹಾರ ಕಲ್ಪಿಸಿಲ್ಲ ಎಂದು ತಾಲೂಕಿನ ಕಡಮಲಕುಂಟೆ ಗ್ರಾಮದ ಬಡ ರೈತ ಮಾರುತಿ ಆಳಲು ತೋಡಿಕೊಂಡಿದ್ದಾರೆ.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವರ್ಷ ನ.8 ರಂದು ತಾಲೂಕಿನ ಕಡಮಲಕುಂಟೆ ಗ್ರಾಮದ ಕೆರೆ ಹತ್ತಿರದ 1-63 ಕೆವಿಎ ಪರಿವರ್ತಕದ ನ್ಯೂಟ್ರಲ್ ವೈರ್‌ನಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಗ್ರೌಡಿಂಗ್ ಆಗಿ, ಎಮ್ಮೆ ಸ್ಥಳದಲ್ಲಿಯೇ ಮೃತಪಟ್ಟಿತ್ತು. ಪಾವಗಡ ಉಪ ವಿಭಾಗದ ಬೆಸ್ಕಾಂ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಗಲಮಡಿಕೆ ಶಾಖಾಧಿಕಾರಿ ಕೂಡಲೇ ಸ್ಥಳಕ್ಕೆ ಆಗಮಿಸಿ ಎಮ್ಮೆ ಸಾವಿನ ಬಗ್ಗೆ ಪರಿಶೀಲನೆ ನಡೆಸಿದ್ದರು. ಬಳಿಕ ಘಟನೆ ಕುರಿತು ಸಂಬಂಧಪಟ್ಟ ಬೆಸ್ಕಾಂ ಎಇಇಗೆ ವರದಿ ಸಲ್ಲಿಸಿದ್ದರು. ಇದೇ ವೇಳೆ ಮಾಹಿತಿ ಮೇರೆಗೆ ತಾಲೂಕು ಪಶು ಪಾಲನಾ ಆರೋಗ್ಯ ಇಲಾಖೆ ಸಹಾಯಕ ನಿರ್ದೇಶಕ ಹೊಸ್ಕೇರಪ್ಪ ಭೇಟಿ ನೀಡಿ ಎಮ್ಮೆ ಸಾವಿನ ಬಗ್ಗೆ ಮಾಹಿತಿ ಪಡೆದಿದ್ದರು ಎಂದು ತಿಳಿಸಿದರು.

ವಿದ್ಯುತ್‌ ಶಾಕ್‌ನಿಂದ ಎಮ್ಮೆ ಸಾವಿನ ಕುರಿತು ಪಶು ವೈದ್ಯರಿಂದ ಮರಣೋತ್ತರ ದೃಢೀಕರಣ ಹಾಗೂ ಇತರೆ ಸಾವಿನ ಸಂಬಂಧ ಅಗತ್ಯ ದಾಖಲೆ ಪಡೆದು 10 ತಿಂಗಳೂ ಕಳೆದಿದ್ದರೂ, 50 ಸಾವಿರ ರು. ಎಮ್ಮೆಗೆ ಸಂಬಂಧಪಟ್ಟ ಪರಿಹಾರ ಇನ್ನೂ ಕಲ್ಪಿಸುವಲ್ಲಿ ಬೆಸ್ಕಾಂ ಹಾಗೂ ಪಶು ಆರೋಗ್ಯ ಇಲಾಖೆ ಅಧಿಕಾರಿಗಳು ಮೀನಾಮೇಷ ಎಣ್ಣಿಸುತ್ತಿದ್ದಾರೆ ಎಂದು ದೂರಿದರು.

ಇದರಿಂದ ಎಮ್ಮೆ ಸಾಕಾಣಿಕೆ ಹಾಗೂ ಕೂಲಿಯಿಂದ ಜೀವನ ಸಾಗಿಸುವ ನಮ್ಮ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಪರಿಹಾರ ಕಲ್ಲಿಸಿದರೆ ಜೀವನೋಪಾಯಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

Share this article