ಜೋಯಿಡಾ:
ತಾಲೂಕಿನ ಜಗಲಬೇಟನ ಪ್ಲಾಟ್‌ನಲ್ಲಿ ಬಾಣಂತಿ ಹಾಗೂ ನವಜಾತ ಶಿಶು ಮೃತಪಟ್ಟಿರುವ ಘಟನೆ ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ!ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ ಬಾಣಂತಿ ಸಾವನ್ನಪ್ಪಿದ್ದರೆ, ಖಾನಾಪುರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆಕೆಯ ಮಗು ಮೃತಪಟ್ಟಿದೆ. ಜಗಲಬೇಟನ ಪ್ಲಾಟ್‌ನಲ್ಲಿ ವಾಸವಾಗಿರುವ ನಾಗರಾಜ ನಾಯ್ಕ ಪತ್ನಿ ನಮ್ರತಾ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದಳು. ಕಳೆದ ಬುಧವಾರ ಬೆಳಗ್ಗೆ 11ಕ್ಕೆ ಆಶಾ ಕಾರ್ಯಕರ್ತೆ ಮತ್ತು ಕುಟುಂಬಸ್ಥರು ಆಕೆಯನ್ನು ರಾಮನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ರಾತ್ರಿ 9 ಗಂಟೆ ವರೆಗೂ ಚಿಕಿತ್ಸೆಗಾಗಿ ಆಕೆಯನ್ನು ಅಲ್ಲಿಯೇ ಇರಿಸಿಕೊಂಡಿದ್ದಾರೆ. ಸತತ 10 ಗಂಟೆ ಕಾಲ ಇರಿಸಿಕೊಂಡು ಸಹಜ ಹೆರಿಗೆಗೆ ಅವಕಾಶ ಕಡಿಮೆ ಇದೆ ಎಂದು ರಾತ್ರಿ 9ರ ಸುಮಾರಿಗೆ ರಾಮನಗರ ಸರ್ಕಾರಿ ಆರೋಗ್ಯ ಕೇಂದ್ರದಿಂದ ಖಾನಾಪುರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಬಳಿಕ 11.15ಕ್ಕೆ ಖಾನಾಪುರದ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ, ಸಹಜವಾಗಿ ಹೆರಿಗೆ ಮಾಡಿಸಲಾಗಿತ್ತಾದರೂ ಮಗು ಸಾವನ್ನಪ್ಪಿದೆ. ಮತ್ತು ಹೆರಿಗೆ ವೇಳೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಖಾನಾಪುರದಿಂದ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ನಮ್ರತಾ ಅವರನ್ನು ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಬಾಣಂತಿನಿ ಕೂಡಾ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ರಾಮನಗರದ ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ಸೂಕ್ತ ಸೂಚನೆ ನೀಡಿದ್ದರೆ ಇಬ್ಬರ ಜೀವ ಉಳಿಸಬಹುದಿತ್ತು. 10 ಗಂಟೆ ರಾಮನಗರ ಆಸ್ಪತ್ರೆಯಲ್ಲಿ ಇರಿಸಿಕೊಂಡು ಬಳಿಕ ಸಹಜ ಹೆರಿಗೆ ಅಸಾಧ್ಯವೆಂದು ತಿಳಿಸಿದರು ಎಂದು ಮೃತಳ ಕುಟುಂಬಸ್ಥರು ದೂರಿದ್ದಾರೆ.ಎಂಟು ವರ್ಷಗಳ ಹಿಂದೆ ನಾಗರಾಜ ನಾಯ್ಕ ನಮ್ರತಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಆರು ವರ್ಷದ ಮಗಳಿದ್ದಾಳೆ. ನಮ್ರತಾ ಅವರ ಮೊದಲ ಹೆರಿಗೆ ಸಹಜವಾಗಿತ್ತು. ಆದರೆ ಇದೀಗ ಮಗು ಮತ್ತು ಹೆಂಡತಿಯ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.ಈ ಘಟನೆಗೆ ಯಾರು ಹೊಣೆ. ಇಲ್ಲಿನ ಆರೋಗ್ಯ ಕೇಂದ್ರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ಪತ್ನಿ, ಮಗು ಮೃತಪಟ್ಟಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ಮೃತಳ ಪತಿ ನಾಗರಾಜ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಆ ದಿನ ನಾನು ಮೀಟಿಂಗ್‌ನಲ್ಲಿದ್ದೆ. ಗರ್ಭಿಣಿಯನ್ನು ಅನುಭವಿ ತಜ್ಞರಿಂದ ಪರಿಶೀಲಿಸಿದ್ದೇವೆ. ಸುಲಭವಾಗಿ ಹೆರಿಗೆ ಆಗುತ್ತದೆ ಎಂಬ ಕಾರಣಕ್ಕೆ ವೈದ್ಯರು ಅವರನ್ನು ಪರಿಶೀಲಿಸುತ್ತಲೆ ಇದ್ದಾರೆ. ಆದರೂ ಅವರು ನೋವು ಕೊಡದೆ ಇದ್ದಾಗ ನಾವು ಅವರ ಇಚ್ಛೆಯಂತೆ ನಮ್ಮ ಕಾರ್ಯಕರ್ತೆಯೊಂದಿಗೆ ಖಾನಾಪುರ ಆಸ್ಪತ್ರೆ ಕಳಿಸಿದ್ದೇವೆ. ಅಲ್ಲಿ ಸುಲಭವಾಗಿ ಹೆರಿಗೆ ಆದರೂ ಮಗು ತೀರಿದೆ. ಆಕೆಗೆ ತುಂಬಾ ರಕ್ತಸ್ರಾವ ಆಗಿರುವ ಕಾರಣ ಖಾನಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯೂ ತಜ್ಞ ವೈದ್ಯರು ಪರಿಶೀಲಿಸಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸುಜಾತಾ ಉಕ್ಕಲಿ ತಿಳಿಸಿದರು.