ಧಾರವಾಡ:
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಒಂದೆಡೆ ಸಸಿ ನೆಡುವ ಕಾರ್ಯ ಭರದಿಂದ ಸಾಗುತ್ತಿದ್ದರೆ, ಇನ್ನೊಂದೆಡೆ ರಾಜ್ಯದ 2ನೇ ಅತಿ ಹಳೆಯ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ವಿರೋಧದ ಮಧ್ಯೆಯೂ ಮರಗಳ ಮಾರಣ ಹೋಮ ನಡೆಯುತ್ತಿದೆ.ಒಣಗಿದ ಹಾಗೂ ಅಪಾಯಕಾರಿ ಮರಗಳ ಕಡಿಯುವ ನೆಪದಲ್ಲಿ ನೂರಕ್ಕೂ ಹೆಚ್ಚು ವರ್ಷಗಳ ಹಳೆಯದಾದ ಹಚ್ಚ ಹಸಿರಿನ ಮರಗಳು ಸಹ ಕೊಡಲಿ ಏಟು ತಿನ್ನುವುದನ್ನು ಕಣ್ಣಾರೆ ಕಂಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಇದೀಗ ಮರಗಳನ್ನು ಅಪ್ಪಿಕೊಂಡು ಅವುಗಳನ್ನು ಕಡಿಯಬೇಡಿ ಎಂದು ವಿರೋಧ ವ್ಯಕ್ತಪಡಿಸುವ ಸ್ಥಿತಿ ಬಂದಿದೆ.
ವಿವಿ ಆವರಣದಲ್ಲಿನ ಮರ ಕಡಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಶೋಧನಾ ವಿದ್ಯಾರ್ಥಿಗಳ ಸಂಘದ ವತಿಯಿಂದ ಮರಗಳ ಹತ್ಯಾಕಂಡಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮರಗಳನ್ನು ಅಪ್ಪಿಕೊಂಡು ತಾತ್ಕಾಲಿಕವಾಗಿ ಮರ ಕಡಿಯುವುದನ್ನು ನಿಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯ 700ಕ್ಕೂ ಹೆಚ್ಚು ಎಕರೆ ಪ್ರದೇಶ ಹೊಂದಿದೆ. ಎತ್ತರ ಪ್ರದೇಶ ಹೊಂದಿರುವ ಕಾರಣ ಹಚ್ಚ ಹಸುರಿನ ಗಿಡಗಳು ಇಲ್ಲಿ ನಳನಳಿಸುತ್ತಿವೆ. ಕವಿವಿ ಕ್ಯಾಂಪಸ್ ನೋಡುವುದೇ ಕಣ್ಣಿಗೆ ಚೆಂದ. ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳಿಗೆ ಈ ಜಾಗ ನೆಲೆಯಾಗಿದೆ. ಕೆಲವು ಮರಗಳು ನೂರು ವರ್ಷಗಳಿಗಿಂತ ಹೆಚ್ಚು ಹಳೆಯವು. 120ಕ್ಕೂ ಹೆಚ್ಚು ಮರಗಳು ಒಣಗಿದ್ದು, ದಾರಿಹೋಕರಿಗೆ ಅಪಾಯ ತಂದೊಡ್ಡುತ್ತಿವೆ ಮತ್ತು ವಿದ್ಯುತ್ ತಂತಿಗೆ ಸಿಕ್ಕು ಬೀಳುವ ಸಾಧ್ಯತೆ ಇದೆ ಎಂದು ಏಪ್ರಿಲ್‌ನಲ್ಲಿ ವಿವಿಯು ಅರಣ್ಯ ಇಲಾಖೆಗೆ ಪರವಾನಗಿಗೆ ಮನವಿ ಸಲ್ಲಿಸಿತ್ತು. ಈ ಮನವಿ ಆಧರಿಸಿ ಅರಣ್ಯ ಇಲಾಖೆ 120 ಮರ ನೆಲಸಮ ಮಾಡಲು ಒಪ್ಪಿಗೆ ನೀಡಿತ್ತು. ಹತ್ತಕ್ಕೂ ಹೆಚ್ಚು ಕಾರ್ಮಿಕರು ಒಣಗಿದ ಮರಗಳೂ ಸೇರಿದಂತೆ ಎಲ್ಲ ಮರ ಕಡಿಯಲು ಪ್ರಾರಂಭಿಸಿದ್ದೇ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳನ್ನು ಕೆರಳಿಸಿತು. ಜತೆಗೆ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಗಳು ನಡೆಯಿತು.ಕೆಲ ದಿನಗಳ ಹಿಂದೆ ಕನಕ ಭವನದ ಪಕ್ಕದಲ್ಲಿದ್ದ ನೀಲಗಿರಿ ತೋಟ ಹಾಗೂ ಕೆಲವು ಹಣ್ಣಿನ ಮರ ನೆಲಸಮ ಮಾಡಲಾಗಿದೆ. ವಿವಿಯಲ್ಲಿನ ಹಸಿರು ಹೊದಿಕೆ ಅಳಿಸಿಹಾಕಿ ಕಟ್ಟಡ ನಿರ್ಮಿಸುವುದು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಅಭ್ಯಾಸವಾಗಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಇಲ್ಲಿಯ ವರೆಗೆ ಕತ್ತರಿಸಿದ ಮರಗಳ ವಿವರ ಮತ್ತು ಮಾರಾಟದಿಂದ ವಿವಿಗೆ ಏನಾದರೂ ಆರ್ಥಿಕ ಲಾಭವಾಗಿದೆಯೇ ಎಂಬ ವಿವರಗಳನ್ನು ನಾವು ಕೇಳಿದ್ದೇವೆ. ಅನವಶ್ಯಕವಾಗಿ ಮರ ಕಡಿಯುತ್ತಿರುವುದು ಬೇಸರ ಎನಿಸಿ ಪ್ರತಿಭಟನೆ ಮಾಡಬೇಕಾಯಿತು ಎಂದು ಸಂಘದ ಅಧ್ಯಕ್ಷ ನಾಗರಾಜ್ ಹೇಳಿದರು.
ಕೆಲವು ವರ್ಷಗಳಿಂದ ವಿವಿಯಲ್ಲಿ ಹಸಿರಿನ ಪರಿಸರವು ದುರ್ಬಲವಾಗಿದೆ. 20 ವರ್ಷಗಳ ಹಿಂದೆ ಈ ಕ್ಯಾಂಪಸ್‌ನಲ್ಲಿ 120ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳು ಕಾಣಿಸಿಕೊಂಡಿವೆ. ಆದರೆ, ಈ ವರ್ಷ ನಡೆದ ಪಕ್ಷಿಗಳ ಎಣಿಕೆಯಲ್ಲಿ 25ರಿಂದ 30 ಜಾತಿಯ ಪಕ್ಷಿಗಳು ಮಾತ್ರ ಕಂಡುಬಂದಿವೆ. ಮರಗಳ ಮಾರಣಹೋಮವೇ ಇದಕ್ಕೆ ಕಾರಣ. ವಿಶ್ವವಿದ್ಯಾನಿಲಯವು ಸಸ್ಯವರ್ಗದ ಮೇಲೆ ನಿರ್ದಯವಾಗಿ ದಾಳಿಯನ್ನು ಮುಂದುವರೆಸಿದರೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಪರಿಸರವಾದಿ ಹರ್ಷವರ್ಧನ ಶೀಲವಂತ ಎಚ್ಚರಿಸಿದರು. ಈ ಕುರಿತು ದಿನವಿಡೀ ಪದೇ ಪದೇ ಕರೆ ಮಾಡಿದರೂ ಕವಿವಿ ಉಪಕುಲಪತಿ ಕೆ.ಬಿ. ಗುಡಸಿ ಪ್ರತಿಕ್ರಿಯೆ ನೀಡಲಿಲ್ಲ.