ಲೋಕ ಸ್ಪರ್ಧೆಗೆ ವಾರದೊಳಗೆ ನಿರ್ಧಾರ: ಜಯಪ್ರಕಾಶ್ ಹೆಗ್ಡೆ

KannadaprabhaNewsNetwork | Published : Mar 5, 2024 1:32 AM

ಸಾರಾಂಶ

ಯಾವುದೇ ಪಕ್ಷ ಸೇರುವ ಬಗ್ಗೆಯಾಗಲಿ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆಯಾಗಲಿ ನಿರ್ಧಾರ ಮಾಡಿಲ್ಲ. ಕುಟುಂಬ ಸದಸ್ಯರ ಮತ್ತು ಆಪ್ತರ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇನೆ ಎಂದ ಅವರು, ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ, ಕರೆ ಮಾಡುತ್ತಿದ್ದಾರೆ, ಆದರೆ ಯಾವುದೇ ಪಕ್ಷದಿಂದ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಜೆಪಿ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಒಂದು ವಾರದಲ್ಲಿ ನಿರ್ಧರಿಸುತ್ತೇನೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಗದ ಅಧ್ಯಕ್ಷನಾದ ಕೂಡಲೇ ತನ್ನ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸಹಜವಾಗಿಯೇ ರದ್ದಾಗಿದೆ. ಮರಳಿ ಬಿಜೆಪಿ ಸದಸ್ಯತ್ವ ಪಡೆದಿಲ್ಲ. ಪ್ರಸ್ತುತ ತಾನು ಯಾವುದೇ ಪಕ್ಷದ ಸದಸ್ಯನಲ್ಲ ಎಂದವರು ಹೇಳಿದರು.ಯಾವುದೇ ಪಕ್ಷ ಸೇರುವ ಬಗ್ಗೆಯಾಗಲಿ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆಯಾಗಲಿ ನಿರ್ಧಾರ ಮಾಡಿಲ್ಲ. ಕುಟುಂಬ ಸದಸ್ಯರ ಮತ್ತು ಆಪ್ತರ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇನೆ ಎಂದ ಅವರು, ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ, ಕರೆ ಮಾಡುತ್ತಿದ್ದಾರೆ, ಆದರೆ ಯಾವುದೇ ಪಕ್ಷದಿಂದ ಅಧಿಕೃತ ಆಹ್ವಾನ ಬಂದಿಲ್ಲ ಎಂದರು.

ಕಾಂಗ್ರೆಸ್ ಸೇರಿ ಚುನಾವಣೆಗೆ ಸ್ಪರ್ಧಿಸುವ ವದಂತಿಗಳಿಗೆ ಪ್ರತಿಕ್ರಿಯಿಸಿದ ಹೆಗ್ಡೆ, ಚುನಾವಣೆಗೆ ಸ್ಪರ್ಧಿಸಬೇಕು ಬೇಡವೋ ಎನ್ನುವ ಗೊಂದಲದಲ್ಲಿದ್ದೇನೆ, ಈ ಬಗ್ಗೆ ಮೊದಲು ಚರ್ಚೆ ಮಾಡುತ್ತೇನೆ, ಆಮೇಲೆ ಯಾವ ಪಕ್ಷ ಎಂದು ಯೋಚಿಸುತ್ತೇನೆ ಎಂದವರು ಹೇಳಿದರು.ಹಿಂದೆ ನಾನು ಉಡುಪಿ-ಚಿಕ್ಕಮಗಳೂರು ಸಂಸದನಾಗಿದ್ದೆ, ಆದರೆ ಈಗ ಪುನಃ ಸ್ಪರ್ಧಿಸುವುದು ಸುಲಭದ ಕೆಲಸವಲ್ಲ, ರಿಸ್ಕ್ ಇದೆ. ಮತದಾರರನ್ನು ಪುನಃ ಸಂಪರ್ಕಿಸಬೇಕು, ನನ್ನ ವಯಸ್ಸು ಮತ್ತು ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗಿದೆ. ನನಗೆ ಚುನಾವಣಾ ರಾಜಕೀಯನೇ ಬೇಕು ಅಂತೇನೂ ಇಲ್ಲ, ಹೀಗೆ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ, ನೆಮ್ಮದಿಯಾಗಿದ್ದೇನೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.2014ರಲ್ಲಿಯೇ ನನಗೆ ಲೋಕಸಭಾ ಟಿಕೆಟ್ ಸಿಗುತ್ತದೆ ಎನ್ನುವ ವಾತಾವರಣವಿತ್ತು, ಆದರೆ ಕೊನೆ ಕ್ಷಣದಲ್ಲಿ ಸಿಗಲಿಲ್ಲ, ಹಾಗಂತ ನಾನು ದೃತಿಗೆಡಲಿಲ್ಲ. ಆಗ ನನ್ನನ್ನು ಕರೆದು ಹಿಂ.ವ.ಗಳ ಆಯೋಗದ ಅಧ್ಯಕ್ಷನನ್ನಾಗಿ ಮಾಡಿದರು. ಅದರಲ್ಲಿ ಅತೀ ಸಣ್ಣ ಜಾತಿಗಳಿಗೂ ಧ್ವನಿ ನೀಡುವ ಕೆಲಸ ಮಾಡಿದ ತೃಪ್ತಿ ಇದೆ ಎಂದರು.ರಾಜಕೀಯದಲ್ಲಿ ನಾನೇನೂ ಸಾಧನೆ ಮಾಡಿದ್ದೇನೆ ಎಂದು ಹೇಳಿಕೊಂಡು ಓಡಾಡುವ ಅಗತ್ಯ ನನಗಿಲ್ಲ, 94ರಿಂದ ರಾಜಕೀಯದಲ್ಲಿದ್ದೇನೆ, ನಾನು ಮಾಡಿದ ಕೆಲಸಗಳೇ ನನ್ನ ಬಗ್ಗೆ ಹೇಳುತ್ತವೆ ಎಂದರು.

Share this article