ಹೇಮಾವತಿ ಕಚೇರಿ ಮುಂಭಾಗ ರೈತರೊಂದಿಗೆ ಚರ್ಚೆಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜಿಲ್ಲಾ ಉಸ್ತುವಾರಿ ಸಚಿವರು ಹೇಮಾವತಿ ನೀರಿಗಾಗಿ ತೆಗೆದುಕೊಂಡಿರುವ ನಿರ್ಣಯ ಸೂಕ್ತವಾಗಿಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆರೋಪಿಸಿದರು.ಪಟ್ಟಣದ ಹೇಮಾವತಿ ಕಚೇರಿ ಮುಂಭಾಗದಲ್ಲಿ ಗುರುವಾರ ಕುಡಿಯುವ ನೀರು ಮತ್ತು ಕೆರೆಕಟ್ಟೆಗಳನ್ನು ಕೂಡಲೇ ತುಂಬಿಸಬೇಕು ಎಂಬ ಬೇಡಿಕೆಗಳ ಪತ್ರದೊಂದಿಗೆ ರೈತರೊಂದಿಗೆ ಚರ್ಚಿಸಿದರು. ಬಳಿಕ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹೇಮಾವತಿ ನೀರಿಗಾಗಿ ತೆಗೆದುಕೊಂಡಿರುವ ನಿರ್ಣಯ ಸರಿ ಇಲ್ಲ. ಏಕೆಂದರೆ ಅವರು ಮಧುಗಿರಿ ಕ್ಷೇತ್ರಕ್ಕೆ ಮಾತ್ರ ಶಾಸಕರಲ್ಲ. ಅವರು ಹಾಸನ ಜಿಲ್ಲೆಯ ಉಸ್ತವಾರಿ ಸಚಿವರು ಮತ್ತು ಸಹಕಾರಿ ಸಚಿವರು ಎಂಬ ವಿಷಯವನ್ನು ಮರೆತು ತೀರ್ಮಾನ ತೆಗೆದುಕೊಂಡು ಹಾಸನ ಜಿಲ್ಲೆಯ ರೈತರನ್ನು ಮತ್ತು ಸಾರ್ವಜನಿಕರನ್ನು ಕಡೆಗಣಿಸಿ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಹರಿಸಿದ್ದಾರೆ ಎಂದು ದೂರಿದರು.
ಮೊದಲು ನಮ್ಮ ಸ್ಥಳೀಯ ಜನತೆಗೆ ನೀರು ನೀಡಿ, ನಂತರ ಪಕ್ಕದ ಜಿಲ್ಲೆಗೆ ನೀರು ಕೊಡುವುದು ಸೂಕ್ತವಾಗಿದೆ. ಸ್ಥಳೀಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತು ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿವೆ. ಅದರ ಜತೆಯಲ್ಲಿ ತಾಲೂಕಿನ ಶಾಸಕರು ಕೂಡ ಈ ಸಮಿತಿಯಲ್ಲಿ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಆದರೆ ಶಾಸಕರೇ ಈ ವಿಷಯವನ್ನು ಕಡೆಗಣಿಸಿ ಸಾರ್ವಜನಿಕರ ಕುಡಿಯುವ ನೀರಿನ ಮತ್ತು ಜಾನುವಾರು ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸುವ ಶಕ್ತಿಯನ್ನು ಮರೆ ಮಾಚುತ್ತಿದ್ದಾರೆ. ಈ ವಿಷಯವನ್ನು ಈಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಇಲಾಖೆಯ ಸಚಿವರೊಂದಿಗೂ ಕೂಡ ಚರ್ಚಿಸಿ ಸೂಕ್ತ ಪರಿಹಾರ ಮಾಡಲಾಗುವುದು ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಮಂಜುನಾಥ್, ಮೂರ್ತಿ, ರವೀಶ್, ಸ್ವಾಮಿ, ಮೋಹನ್ ಕುಮಾರ್ ಮುಂತಾದವರು ಹಾಜರಿದ್ದರು.ಚನ್ನರಾಯಪಟ್ಟಣದ ಹೇಮಾವತಿ ಕಚೇರಿ ಮುಂಭಾಗದಲ್ಲಿ ಗುರುವಾರ ಕುಡಿಯುವ ನೀರು ಮತ್ತು ಕೆರೆಕಟ್ಟೆಗಳನ್ನು ಕೂಡಲೇ ತುಂಬಿಸಬೇಕು ಎಂಬ ಬೇಡಿಕೆಗಳ ಪತ್ರದೊಂದಿಗೆ ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ರೈತರೊಂದಿಗೆ ಚರ್ಚಿಸಿದರು.