ತಮಿಳುನಾಡಿಗೆ ಪ್ರತಿನಿತ್ಯ 8 ಸಾವಿರ ಕ್ಯುಸೆಕ್ ನೀರು ಬಿಡಲು ತೀರ್ಮಾನ: ಆಕ್ರೋಶ

KannadaprabhaNewsNetwork | Published : Jul 16, 2024 12:35 AM
Follow Us

ಸಾರಾಂಶ

ರಾಜಕೀಯ ಪಕ್ಷಗಳಿಗೆ ರೈತರ ಹಿತ ಕಾಪಾಡುವ ಕಾಳಜಿ ಇಲ್ಲ. ಇಚ್ಛಾ ಶಕ್ತಿ ಕೊರತೆಯಿಂದ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ. ಸರ್ವಸಪಕ್ಷಗಳ ಸಭೆಯಲ್ಲಿ ಕೈಗೊಂಡಿರುವ ನೀರು ಬಿಡುವ ತೀರ್ಮಾನವನ್ನು ಒಪ್ಪಲು ಸಾಧ್ಯವಿಲ್ಲ. ಈ ಕೂಡಲೇ ಸರ್ವಪಕ್ಷ ಸಭೆ ನಿರ್ಣಯ ವಾಪಸ್ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ತಮಿಳುನಾಡಿಗೆ ಪ್ರತಿನಿತ್ಯ 8 ಸಾವಿರ ಕ್ಯುಸೆಕ್ ನೀರು ಬಿಡಲು ಸರ್ವ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿ ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ, ಕಾವೇರಿ ಕೊಳ್ಳದ ಜಲಾಶಯಗಳಿಂದ ಪ್ರತಿನಿತ್ಯ 8 ಸಾವಿರ ಕ್ಯುಸೆಕ್ ನೀರು ಬಿಟ್ಟರೆ ರಾಜ್ಯ ಸರ್ಕಾರ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸೂಚನೆ ಒಪ್ಪಿಕೊಂಡಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪ್ರತಿನಿತ್ಯ 8 ಸಾವಿರ ಕ್ಯುಸೆಕ್ ನೀರು ಬಿಟ್ಟು ಆದೇಶ ಪಾಲನೆ ಮಾಡಿದ ನಂತರ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವುದರಿಂದ ಏನು ಪ್ರಯೋಜನ. ನೀರು ಬಿಡುಗಡೆ ವಿಚಾರದಲ್ಲಿ ಸರ್ಕಾರದ ನಿಲುವಿನಲ್ಲಿ ವೈರುಧ್ಯತೆ ಇದೆ. ರೈತ ವಿರೋಧಿ ನೀತಿಯನ್ನು ಖಂಡಿಸುವುದಾಗಿ ಹೇಳಿದರು.

ತಮಿಳುನಾಡಿಗೆ ನಿರಂತರ ನೀರು ಹರಿಸಿದರೆ ಕೃಷ್ಣರಾಜಸಾಗರದಲ್ಲಿ ನೀರಿನ ಪ್ರಮಾಣ ಕುಸಿಯಲಿದೆ. ಕುಡಿಯುವ ನೀರು ಮತ್ತು ಬೆಳೆಗಳಿಗೆ ನೀರು ಕೊಡಲು ಹೇಗೆ ಸಾಧ್ಯ. ಈಗಾಗಲೇ ಕಳೆದ ಬಾರಿ ಬೆಳೆ ಬೆಳೆಯಲು ಸಾಧ್ಯವಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಸಮೃದ್ಧವಾಗಿ ಬೆಳೆ ಬೆಳೆದರೆ ಸಂಕಷ್ಟದಿಂದ ಹೊರಬರಲು ಸಾಧ್ಯ. ಆದರೆ, ನೀರು ಬಿಡುವ ಸರ್ಕಾರದ ತೀರ್ಮಾನ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಧಿವೇಶನದಲ್ಲಿ ಕಾವೇರಿ ಚರ್ಚೆ ಸಾಧ್ಯತೆ ಕಡಿಮೆ. ಸರ್ಕಾರದ ಹಗರಣಗಳ ವಿರುದ್ಧ ಚರ್ಚೆಗೆ ಪ್ರತಿಪಕ್ಷಗಳು ಹೆಚ್ಚಿನ ಆಸಕ್ತಿ ತೋರಲು ಮುಂದಾಗಿದೆ. ಹಾಗಾಗಿ ನಿಲುವಳಿ ಸೂಚನೆಯಲ್ಲಿ ಕಾವೇರಿ ಚರ್ಚೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳಿಗೆ ರೈತರ ಹಿತ ಕಾಪಾಡುವ ಕಾಳಜಿ ಇಲ್ಲ. ಇಚ್ಛಾ ಶಕ್ತಿ ಕೊರತೆಯಿಂದ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ. ಸರ್ವಸಪಕ್ಷಗಳ ಸಭೆಯಲ್ಲಿ ಕೈಗೊಂಡಿರುವ ನೀರು ಬಿಡುವ ತೀರ್ಮಾನವನ್ನು ಒಪ್ಪಲು ಸಾಧ್ಯವಿಲ್ಲ. ಈ ಕೂಡಲೇ ಸರ್ವಪಕ್ಷ ಸಭೆ ನಿರ್ಣಯ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಮ್ ಮಾತನಾಡಿ, ರಾಜ್ಯದ ಮೂರು ರಾಜಕೀಯ ಪಕ್ಷಗಳು ಕಾವೇರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರ ಇಚ್ಛಾಶಕ್ತಿ ಕೊರತೆಯಿಂದ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ. ನೀರು ಬಿಡುವ ನಿರ್ಣಯವನ್ನು ಒಪ್ಪುವುದಿಲ್ಲ ಎಂದರು.

ಸದನದಲ್ಲಿ ಚರ್ಚೆ ಮಾಡಬೇಕಾಗಿರುವುದು ಕಾವೇರಿ ಕೊಳ್ಳಬಾಗದ ಜನಪ್ರತಿನಿಧಿಗಳ ಜವಾಬ್ದಾರಿ. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಈ ಬಗ್ಗೆ ಸಮಗ್ರ ಚರ್ಚೆ ನಡೆಸಿ ರೈತರ ಕಾಪಾಡಲು ಮುಂದಾಗಬೇಕು ಎಂದರು.

ಕಾವೇರಿ ನೀರಿಗಾಗಿ ಹೋರಾಟ ಮಾಡಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ. 8 ಜಿಲ್ಲೆಗಳ ಜನತೆ ಬೀದಿಗಿಳಿದು ಹೋರಾಟ ಮಾಡಬೇಕು. ಇಲ್ಲದಿದ್ದರೆ ಮುಂದಿನ ಸಂಕಷ್ಟ ಕಾಲಕ್ಕೆ ಅವರೇ ಹೊಣೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಶಿವಳ್ಳಿ ಚಂದ್ರಶೇಖರ್, ಎಚ್.ಡಿ.ದೇವೇಗೌಡ ಹುಲಿಗೆರೆಪುರ, ಜಯ ಕರ್ನಾಟಕ ಸಂಘಟನೆಯ ಡಾ.ಎಸ್. ನಾರಾಯಣ್, ಬಸವರಾಜ್, ಸುಶೀಲಮ್ಮ, ವೀಣಾಂಬ, ಇಂದಿರಾ, ಮಂಜುಳಾ, ವನಜಾಕ್ಷಿ, ಬಿ.ಪುಟ್ಟಸ್ವಾಮಿ, ನಾಗೇಶ್, ಪ್ರಸಾದ್, ನಾರಾಯಣಸ್ವಾಮಿ, ಕೆಂಪೇಗೌಡ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಾಂತಪ್ಪ, ಪತ್ರಕರ್ತ ಬಸವೇಗೌಡ, ಎಂ.ಎಲ್ ತುಳಸೀಧರ್ ಸೇರಿದಂತೆ ಹಲವರು ಭಾಗವಹಿಸಿದ್ದರು.