- ವೈದ್ಯರು ಲಿಂಗ ತಾರತಮ್ಯಕ್ಕೆ ಅವಕಾಶ ನೀಡಬಾರದು । ಪಿಸಿ- ಪಿಎನ್ ಡಿಟಿ ಹಾಗೂ ಕೆಪಿಎಂಇ ಕಾಯ್ದೆ ಕುರಿತ ತರಬೇತಿ ಕಾರ್ಯಾಗಾರ,
ಭಾರತೀಯ ವೈದ್ಯಕೀಯ ಸಂಘದ ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಪಿಸಿ ಮತ್ತು ಪಿಎನ್.ಡಿಟಿ ಹಾಗೂ ಕೆಪಿಎಂಇ ಕಾಯ್ದೆಗಳ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಳೆದ 10 ವರ್ಷಗಳ ಸರಾಸರಿ ಜನನ ಪ್ರಮಾಣ ಗಮನಿಸಿದರೆ ಹೆಣ್ಣು ಹಾಗೂ ಗಂಡು ಮಕ್ಕಳ ಜನನ ಪ್ರಮಾಣದ ಅನುಪಾತದಲ್ಲಿ ಹೆಣ್ಣು ಮಕ್ಕಳ ಜನನ ಕಡಿಮೆಯಾಗುತ್ತಿದೆ. ಈ ಬಗ್ಗೆ ಆತಂಕ ಪಡು ವಂತಾಗಿದೆ. ಸ್ವಾಭಾವಿಕವಾಗಿ ಗಂಡು ಮಕ್ಕಳ ಜನನ ಪ್ರಮಾಣ ಹೆಚ್ಚಾದರೂ ಚಿಂತೆ ಇಲ್ಲ ಆದರೆ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಜಿಲ್ಲಾಧಿಕಾರಿಗಳು, ಈ ಜಿಲ್ಲೆಯಲ್ಲಿ ಅಂತಹ ಪ್ರಕರಣಗಳು ನಡೆದಿಲ್ಲವಾದರೂ ಕಳಸ, ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕಿನಲ್ಲಿ ಸರಾಸರಿ 10 ವರ್ಷದ ಅವಧಿಯಲ್ಲಿ ಹೆಣ್ಣು ಶಿಶುಗಳ ಜನನ ಪ್ರಮಾಣ ಕಡಿಮೆ ಇದೆ. ಇದರ ಕಾರಣ ಹುಡುಕಬೇಕಾಗಿದೆ. ವೈದ್ಯರು ಪ್ರತ್ಯಕ್ಷ ದೇವರು ಎಂಬ ಭಾವನೆ ಇದ್ದು, ಲಿಂಗ ತಾರತಮ್ಯಕ್ಕೆ ಅವಕಾಶ ನೀಡದಂತೆ ಮನಸ್ಸಾಕ್ಷಿಯಿಂದ ಕಾರ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.
ಎಲ್ಲಾ ಕ್ಷೇತ್ರಗಳಲ್ಲೂ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆಯಾದರೂ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಆತಂಕಕ್ಕೀಡು ಮಾಡಿರುವ ವಿಷಯ. ಇದಕ್ಕೆ ಕಾರಣ ಹುಡುಕುವ ಜೊತೆಗೆ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣ ನಡೆಯದಂತೆ ನಿಗಾ ವಹಿಸಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಡಾ. ಸಂತೋಷ್ ನೇತಾ ಹಾಗೂ ಡಾ. ಅನುರಾಧ ಪ್ಯಾಟ್ರಿಕ್ ನೇತೃತ್ವದಲ್ಲಿ ವಕೀಲರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡಂತೆ ಜಿಲ್ಲಾ ಸಲಹಾ ಸಮಿತಿ ರಚಿಸಿದ್ದು, ಈ ಸಮಿತಿ ಆಗಿಂದಾಗ್ಗೆ ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡುತ್ತದೆ ಎಂದು ಮಾಹಿತಿ ನೀಡಿದರು.
ಲಿಂಗಪತ್ತೆ ಅಪರಾಧ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ವಿದ್ದು ಅಪರಾಧ ಎಸಗುವ ಸ್ಕ್ಯಾನಿಂಗ್ ಸೆಂಟರ್ ಅಥವಾ ವೈದ್ಯರ ಮೇಲೆ ನೇರ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ತಿಳಿಸಿದರು.
ಚಿಕ್ಕಮಗಳೂರಿನ ಐಎಂಎ ಕಟ್ಟಡದಲ್ಲಿ ನಡೆದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಹಾಗೂ ಕೆ.ಪಿ.ಎಂ.ಇ ಕಾಯಿದೆಗಳ ಕುರಿತ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉದ್ಘಾಟಿಸಿದರು. ಡಿಎಚ್‌ಒ ಡಾ. ಅಶ್ವಥ್ ಬಾಬು ಇದ್ದರು.