ಕುಸಿಯುತ್ತಿರುವ ವಿಶ್ವಾಸರ್ಹತೆ, ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯ: ವಿ.ಪಿ. ಶಶಿಧರ್

KannadaprabhaNewsNetwork |  
Published : Sep 15, 2024, 01:45 AM IST
ಚಿತ್ರ : ಕೃಷಿ ಅವಾರ್ಡ್  : ಕುಶಾಲನಗರ ತಾಲೂಕಿನ ಐವರು ಕೃಷಿಕರಿಗೆ ನೇಗಿಲಯೋಗಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಸಮಾಜದ 4ನೇ ಅಂಗ ಪತ್ರಿಕೋದ್ಯಮ ನಾನಾನ ಕಾರಣಗಳಿಂದ ಕವಲು ಹಾದಿಯಲ್ಲಿದೆ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿಪಿ. ಶಶಿಧರ್‌ ಹೇಳಿದರು. ನೇಗಿಲ ಯೋಗಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ಜೀವನ ಮೌಲ್ಯಗಳು ಕುಸಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದು, ಸಮಾಜದ 4ನೇ ಅಂಗ ಎನ್ನಿಸಿಕೊಂಡಿರುವ ಪತ್ರಿಕಾರಂಗ ಕೂಡ ನಾನಾ ಕಾರಣಗಳಿಂದ ಕವಲು ಹಾದಿಯಲ್ಲಿದೆ. ವಿಶ್ವಾಸರ್ಹತೆ ಕೂಡ ಕುಸಿಯುವ ಹಂತಕ್ಕೆ ಬಂದಿದ್ದು, ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಂಡು ಎಚ್ಚೆತುಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಶನಿವಾರ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಆಯೋಜಿತಗೊಂಡ ನೇಗಿಲಯೋಗಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಒಳ್ಳೆಯವರಿಗೆ ಮತ್ತು ಒಳ್ಳೆಯದಕ್ಕೆ ಅವಕಾಶ ಮತ್ತು ಪುರಸ್ಕಾರಗಳಿಲ್ಲ. ಬದಲಾಗಿ ಹಣ ಮತ್ತು ಅಧಿಕಾರ ಇರುವವರು ಅಪರಾಧಿಯೇ ಆಗಿದ್ದರೂ ಜೈಕಾರ ಹಾಕುವ ಸಂಕೀರ್ಣ ಕಾಲಘಟ್ಟದಲ್ಲಿದ್ದು, ಬಂಡವಾಳ ಶಾಹಿಗಳು ಮತ್ತು ಉದ್ಯಮಿಗಳ ಹಿಡಿತದಲ್ಲಿರುವ ಹೆಚ್ಚಿನ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಅವರ ಅಭಿಪ್ರಾಯಗಳನ್ನು ಸಮಾಜದ ಮೇಲೆ ಹೇರುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪತ್ರಿಕಾರಂಗ ವೃತ್ತಿ ಧರ್ಮ ವಸ್ತುನಿಷ್ಠ ಮತ್ತು ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು. ಜೊತೆಗೆ ಧ್ವನಿ ಇಲ್ಲದವರ, ದುರ್ಬಲರ ಧ್ವನಿಯಾಗಬೇಕು ಎಂದು ಹೇಳಿದರು.ರೈತರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ನಿಟ್ಟಿನಲ್ಲಿ ತಮ್ಮ ತಂದೆ-ತಾಯಿ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡಿರುವ ಕಂಬಿಬಾಣೆಯ ಕಾಫಿ ಬೆಳೆಗಾರರಾದ ಟಿ.ಕೆ.ಸಾಯಿಕುಮಾರ್ ಮಾತನಾಡಿ, ರೈತರಿಗೆ ಮತ್ತು ಇತರ ಕೃಷಿಕರಿಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ ಯಾವುದೇ ಮಾರ್ಗದರ್ಶನ ಇಲ್ಲವೆಂದು ವಿಷಾದಿಸಿರಲ್ಲದೆ, ರೈತರು ಮತ್ತು ಕಾಫಿ ಬೆಳೆಗಾರರು ಕಾಡಾನೆಗಳ ಕಾಟದಿಂದ ಹೈರಾಣಾಗಿದ್ದು, ಸರ್ಕಾರದಿಂದ ಯಾವುದೇ ಕಾರ್ಯಕ್ರಮಗಳು ಹೋಗಲಿ, ಕನಿಷ್ಠ ಸಾಂತ್ವನಗಳು ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.ಸುಂಟಿಕೊಪ್ಪ 1 ಗ್ರೇಡ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ ಸಂಘದ ಕಾರ್ಯಕ್ರಮಗಳನ್ನು ಶ್ಲಾಘಿಸಿದರಲ್ಲದೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಹಾರೈಸಿದರು.ಸುಂಟಿಕೊಪ್ಪ 1 ಗ್ರೇಡ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮಾತನಾಡಿ, ರಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಕೆಯಲ್ಲಿ ಕೃಷಿ ಎಷ್ಟರ ಮಟ್ಟಿಗೆ ಲಾಭದಾಯಕ ಎಂಬ ಸಾಧಕ-ಬಾಧಕಗಳನ್ನು ತಿಳಿಯುವ ಪ್ರಯತ್ನವಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಎ.ಮರುಳೀಧರ್ ಮತ್ತು ಗುಡ್ಡೆಹೊಸೂರು ಗ್ರಾ.ಪಂ.ಸದಸ್ಯ ಮತ್ತು ಉದ್ಯಮಿ ಕೆ.ಆರ್.ನಿತ್ಯಾನಂದ್ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿಘ್ನೇಶ್ ಎಂ.ಭೂತನಕಾಡು ವಹಿಸಿದ್ದರು.ಕಾರ್ಯಕ್ರಮದಲ್ಲಿ ಅರಶಿನಗುಪ್ಪೆ ಗ್ರಾಮದ ಬೆಣ್ಣೆ ಹಣ್ಣು ಶುಂಠಿ ಬೆಳೆಗಾರರಾದ ಎಂ.ಟಿ.ಬೇಬಿ, ಹೈನುಗಾರಿಕೆಯಲ್ಲಿ ಗುಡ್ಡೆಹೊಸೂರಿನ ಸಾಗರ್, ಸಮಗ್ರ ಕೃಷಿ ಸಾಧಕ ನಾಕೂರು ಶಿರಂಗಾಲದ ಪಿ.ಎಂ.ಬಿಜು, ಗುಡ್ಡೆಹೊಸೂರಿನ ನಿವಾಸಿ ಕೃಷಿಯಲ್ಲಿ ಸಾಧನೆ ಮಾಡಿದ ಮಹಿಳೆ ವಸಂತಿ ಪೊನ್ನಪ್ಪ, ಅತ್ತೂರು ಗ್ರಾಮ ಯುವ ಕೃಷಿಕ ಎಂ.ಸಜಿತ್ ಅವರಿಗೆ ನೇಗಿಲಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದದಲ್ಲಿ ಪ್ರವೀಣ್ ಕುಮಾರ್ ಪ್ರಾರ್ಥಿಸಿ, ವಿಘ್ನೇಶ್ ಭೂತನಕಾಡು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ.ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು. ವಿ.ಸಿ.ನವೀನ್ ಚಿಣ್ಣಪ್ಪ ವಂದಿಸಿದರು.ಎರಡು ದತ್ತಿ ಪ್ರಶಸ್ತಿ ಘೋಷಣೆ: ಕಂಬಿಬಾಣೆಯ ಕಾಫಿ ಬೆಳೆಗಾರ ಟಿ.ಕೆ. ಸಾಯಿ ಕುಮಾರ್ ಅವರು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಲ್ಲಿ ಅತ್ಯುತ್ತಮ ಅವಿಭಕ್ತ ಕುಟುಂಬಗಳಿಗೆ ಗೌರವಿಸಲು 25, 000 ರು. ಮೊತ್ತದ ದತ್ತಿ ನಿಧಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಗುಡ್ಡೆಹೊಸೂರುವಿನ ಮಹಿಳಾ ಕೃಷಿಕರಾದ ಕೊರವಂಡ ವಸಂತಿ ಪೊನ್ನಪ್ಪ ಅವರು ಕೂಡ ತಾಲೂಕು ಪತ್ರಕರ್ತರ ಸಂಘದಲ್ಲಿ 25, 000 ರು. ಮೊತ್ತದ ದತ್ತಿ ಪ್ರಶಸ್ತಿ ನೀಡುವುದಾಗಿ ಕಾರ್ಯಕ್ರಮದಲ್ಲಿ ಘೋಷಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ