ಕನ್ನಡಪ್ರಭ ವಾರ್ತೆ ಭಾರತೀನಗರಪ್ರಸ್ತುತ ದಿನಗಳಲ್ಲಿ ದುಡಿಯುವ ಮನೋಭಾವ ಕಡಿಮೆಯಾಗಿದೆ. ಶ್ರಮ ಎನ್ನುವುದು ಮರೆಯಾಗಿದೆ. ಸ್ವಾರ್ಥ ಭಾವನೆ ಹೆಚ್ಚಿರುವ ಇಂತಹ ಕಾಲಘಟ್ಟದಲ್ಲಿ ಉದಯ್ ಚಾರಿಟಬಲ್ ಟ್ರಸ್ಟ್ ಸಮಾಜ ಸೇವೆಯಲ್ಲಿ ನಿಸ್ವಾರ್ಥದಿಂದ ತೊಡಗಿರುವುದು ಮಾದರಿ, ಅನುಕರಣೀಯ ಎಂದು ನಟ ದರ್ಶನ್ ತೂಗುದೀಪ ಶ್ಲಾಘಿಸಿದರು.
ಮದ್ದೂರು ತಾಲೂಕಿನ ಭಾರತೀನಗರದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಸೇವಾ ಹೆಜ್ಜೆ ಮೂರರ ಸಂಭ್ರಮ ಹಾಗೂ ಉದಯಯಾನ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.ಸಮಾಜದಲ್ಲಿ ದುಡಿದಿದ್ದೆಲ್ಲವೂ ನನಗೇ ಇರಲಿ ಎಂಬ ಸ್ವಾರ್ಥ ಮನೋಭಾವ ಹೆಚ್ಚಾಗಿದೆ. ಚುನಾವಣೆ ಸಮಯದಲ್ಲಿ ಇಂತಹ ಕಾರ್ಯಕ್ರಮಗಳು ನಡೆದರೆ ಅದಕ್ಕೆ ಬೇರೆ ಅರ್ಥ ಇರುತ್ತದೆ. ಆದರೆ, ಚುನಾವಣೆ ನಂತರವೂ ಸಮಾಜ ಸೇವೆ ಮುಂದುವರೆಸಿರುವ ಟ್ರಸ್ಟ್‌ನ ಸೇವೆ ಶ್ಲಾಘನೀಯವಾಗಿದೆ ಎಂದರು.
ಇಂದಿನ ದಿನಗಳಲ್ಲಿ ಟ್ರಸ್ಟ್ ನಡೆಸುವುದೇ ಕಷ್ಟವಾಗಿದೆ. ಅದರ ನಡುವೆ ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಸಮಾಜದ ವಿವಿಧ ಕ್ಷೇತ್ರದ ಹಲವರ ಬದುಕಿಗೆ ಆಸರೆಯಾಗಲು ವಿತರಿಸುತ್ತಿರುವ ಸವಲತ್ತುಗಳು ಸದ್ಬಳಕೆಯಾಗಬೇಕು. ಇದರಿಂದ ಅನುಕೂಲ ಪಡೆದುಕೊಂಡವರು ಮುಂದಿನ ವರ್ಷ ಇನ್ನಷ್ಟು ಜನರಿಗೆ ಅನುಕೂಲ ಮಾಡಿಕೊಡಬೇಕು. ಇದು ಸರಪಳಿಯಂತೆ ನಿರಂತರವಾಗಿ ಮುಂದುವರೆದಾಗ ಸೇವಾ ಚಟುವಟಿಕೆಗಳಿಗೆ ಹೊಸ ಅರ್ಥ ಬರುತ್ತದೆ. ನಮ್ಮಂತಹ ಕಲಾವಿದರಿಗೆ ಪ್ರೀತಿ ಗೌರವ ನೀಡುವ ಕದಲೂರು ಉದಯ್ ಅವರು ಮಾತು ಕಡಿಮೆಯಾದರೂ ಸಮಾಜ ಒಪ್ಪುವ ಕಾಯಕದಲ್ಲಿ ಸಾಗುತ್ತಿದ್ದು, ಮತ್ತಷ್ಟು ಒಳಿತಾಗಲಿ ಎಂದರು.ಚಿತ್ರನಟ ಚಿಕ್ಕಣ್ಣ ಮಾತನಾಡಿ, ಸಂಪತ್ತು ಇರುವುದು ದೊಡ್ಡದಲ್ಲ, ಇರುವುದನ್ನು ಅನ್ಯರಿಗೆ ಹಂಚವುದು ದೊಡ್ಡತನ. ಆ ಕಾರ್ಯದಲ್ಲಿ ನಿರತವಾಗಿರುವ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮೂರರ ಸಂಭ್ರಮ ನೂರಕ್ಕೆ ವಿಸ್ತರಿಸಲಿ. ಸಮಾಜಕ್ಕೆ ಮತ್ತಷ್ಟು ಒಳಿತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕೃಷಿ, ಹೈನುಗಾರಿಕೆ, ಸಾವಯವ ಕೃಷಿ, ರೇಷ್ಮೆ ಹಾಗೂ ಕರಕುಶಲ ವೃತ್ತಿಗಾರರನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಶಾಸಕ ಕದಲೂರು ಉದಯ್, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಬಸವರಾಜು, ಜಿಪಂ ಮಾಜಿ ಸದಸ್ಯ ಅಣ್ಣೂರು ರಾಜೀವ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ ಗೌಡ, ಉದ್ಯಮಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮುಖಂಡರಾದ ಸಿಪಾಯಿ ಶ್ರೀನಿವಾಸ್, ದಿನೇಶ್ ಬಾಬು, ರವಿ, ವಿನುತಾ ಉದಯ್ ಉಪಸ್ಥಿತರಿದ್ದರು.
ಸಮಾಜಸೇವೆ ನಿರಂತರವಾಗಿ ಸಾಗಲಿದೆ: ಕದಲೂರು ಉದಯ್ಕನ್ನಡಪ್ರಭ ವಾರ್ತೆ ಭಾರತೀನಗರ
ವಿಧಾನಸಭಾ ಕ್ಷೇತ್ರದ ಜನತೆ ನಮ್ಮ ಸೇವೆ ಒಪ್ಪಿ ಬಹುಮತದಿಂದ ನನಗೆ ಶಾಸಕ ಸ್ಥಾನದ ದೊಡ್ಡ ಗೌರವವನ್ನು ಕಲ್ಪಿಸಿಕೊಟ್ಟರು. ಅದೃಷ್ಟಕ್ಕೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ನಮ್ಮ ಸಮಾಜಸೇವೆ ನಿರಂತರವಾಗಿ ಸಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಮದ್ದೂರು ತಾಲೂಕಿನ ಭಾರತೀನಗರದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಸೇವಾ ಹೆಜ್ಜೆ ಮೂರರ ಸಂಭ್ರಮ ಹಾಗೂ ಉದಯಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಸೇವೆ ಮಾಡಬೇಕೆಂಬ ಅದಮ್ಯ ಆಸೆಯಿಂದ ಕಳೆದ ಮೂರು ವರ್ಷಗಳ ಹಿಂದೆ ಕೊರೋನಾ ಸಂಕಷ್ಟದ ವೇಳೆ ಟ್ರಸ್ಟ್ ಮೂಲಕ ಸೇವೆ ಆರಂಭಿಸಲಾಯಿತು. ಆಗ ಬಹಳಷ್ಟು ಜನರು ನಮ್ಮ ಬಗ್ಗೆ ವ್ಯಾಪಕ ಟೀಕೆ ಮಾಡಿದರು. ಅದನ್ನು ಮನಸ್ಸಿಗೆ ಹಾಕಿಕೊಳ್ಳದೇ ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ. ಇದೇ ಸಾರ್ಥಕ ಕ್ಷಣ ಎಂದರು.ಮಹಿಳೆಯರ ನಿರುದ್ಯೋಗ ಸಮಸ್ಯೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲವರಿಗೆ ಕಂಪನಿಗಳಲ್ಲಿ ಉದ್ಯೋಗ ಕೊಡಿಸಿದ್ದೇನೆ, ಇಂದು ಹಲವರಿಗೆ ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ. ತೆಂಗಿನ ಮರವೇರಲು ಯಂತ್ರ ವಿತರಣೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲ್ಯಾಪ್‌ಟಾಪ್ ಹಾಗೂ ಸರ್ಕಾರಿ ಶಾಲೆಯ ಅಡುಗೆ ಸಹಾಯಕಿಯರಿಗೆ ತಲಾ ೨ ಜೊತೆ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ ಎಂದರು.
ಬರಗಾಲದ ಹಿನ್ನೆಲೆಯಲ್ಲಿ ಕೃಷಿಕರನ್ನು ಸಂಕಷ್ಟದಿಂದ ಹೊರ ತರಲು ಪಿಎಲ್‌ಡಿ ಬ್ಯಾಂಕ್ ಸಾಲ ಮನ್ನಾ ಯೋಜನೆಗೆ ಒಳಪಟ್ಟ ೧೩೬ ರೈತರಿಗೆ ಅಸಲು ಹಣ ಪಾವತಿ ಮಾಡಿ, ರೈತರು ಹಾಗೂ ಬ್ಯಾಂಕ್ ಅಭಿವೃದ್ಧಿಗೆ ನಾಂದಿ ಹಾಡಲಾಗಿದೆ ಎಂದರು.ಭಾರತೀನಗರ ವ್ಯಾಪ್ತಿಯ ನಾಗರೀಕರ ಮನವಿ ಮೇರೆಗೆ ಶವ ಸಂಸ್ಕಾರ ವಾಹನ ವಿತರಣೆ ಹಾಗೂ ಆಲಬೂಜನಹಳ್ಳಿ ಬಸವಪ್ಪನಿಗೆ ಬಸವರಥ ನೀಡಲಾಗುತ್ತಿದ್ದು, ನಮ್ಮ ಟ್ರಸ್ಟ್‌ನ ಸಾಮಾಜಿಕ ಸೇವೆಗಳು ನಿರಂತರವಾಗಿ ಸಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಮಹಿಳೆಯರು, ಪುರುಷರು ಹಾಗೂ ಯುವಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.ನೆಚ್ಚಿನ ಚಿತ್ರನಟ ದರ್ಶನ್ ಅವರನ್ನು ಕಾಣಲು ಬಿಸಿಲು ಲೆಕ್ಕಿಸದೇ ಭಾರೀ ಸಂಖ್ಯೆಯ ಜನಸಮೂಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.