ಮಂಡ್ಯದಲ್ಲಿ ಮುಂದುವರೆದ ಹೆಣ್ಣು ಭ್ರೂಣ ಲಿಂಗ ಪತ್ತೆಹಚ್ಚಿ ಹತ್ಯೆ ಮಾಡುವ ಕರಾಳ ದಂಧೆ

KannadaprabhaNewsNetwork | Updated : Aug 17 2024, 05:37 AM IST

ಸಾರಾಂಶ

ಸಕ್ಕರೆ ನಾಡು ಮಂಡ್ಯದಲ್ಲಿ ಬೇರೂರಿರುವ ಹೆಣ್ಣು ಭ್ರೂಣ ಲಿಂಗ ಪತ್ತೆಹಚ್ಚಿ ಹತ್ಯೆ ಮಾಡುವ ಕರಾಳ ದಂಧೆ ಮುಂದುವರೆದಿದೆ

 ಮಂಡ್ಯ/ ನಾಗಮಂಗಲ :  ಸಕ್ಕರೆ ನಾಡು ಮಂಡ್ಯದಲ್ಲಿ ಬೇರೂರಿರುವ ಹೆಣ್ಣು ಭ್ರೂಣ ಲಿಂಗ ಪತ್ತೆಹಚ್ಚಿ ಹತ್ಯೆ ಮಾಡುವ ಕರಾಳ ದಂಧೆ ಮುಂದುವರೆದಿದೆ. ತಾಲೂಕಿನ ಗಡಿಭಾಗ ದೇವರಮಾವಿನಕೆರೆ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯೊಂದರಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಹೆಣ್ಣು ಭ್ರೂಣ ಲಿಂಗ ಪತ್ತೆ ಹತ್ಯೆ ದಂಧೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ನೇತೃತ್ವದ ಅಧಿಕಾರಿಗಳ ತಂಡ ಡೆಕಾಯ್ ಆಪರೇಷನ್ ಮೂಲಕ ಬೇಧಿಸಿ ಮೂವರು ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ದೇವರಮಾವಿನಕೆರೆ ಗ್ರಾಮದ ತೋಟದ ಮನೆಯ ಮಾಲೀಕ ಧನಂಜಯ, ಡಿ- ಗ್ರೂಪ್ ನೌಕರೆ ನಾಗಮಣಿ ಹಾಗೂ ಗರ್ಭಿಣಿ ಮಹಿಳೆಯ ಗಂಡ ಮನೋಹರ್ ಬಂಧಿತ ಆರೋಪಿಗಳು. ಸ್ಕ್ಯಾನಿಂಗ್ ಮಾಡುತ್ತಿದ್ದ ಪ್ರಮುಖ ಆರೋಪಿ ಅಭಿಷೇಕ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆಗೆ ಕರೆತಂದಿದ್ದ ಹಾಸನ ಜಿಲ್ಲೆ ರಾಮನಾಥಪುರದ ಗರ್ಭಿಣಿ ಮಹಿಳೆಯನ್ನು ರಕ್ಷಿಸಿ, ಅಬಾರ್ಷನ್‌ಕಿಟ್, ಸ್ಕ್ಯಾನಿಂಗ್ ಮಿಷನ್‌ನನ್ನು ಗುರುವಾರ ತಡರಾತ್ರಿಯೇ ವಶಕ್ಕೆ ಪಡೆದುಕೊಂಡಿದ್ದಾರೆ.

ನಡೆದಿದ್ದೇನು?:

ದೇವರ ಮಾವಿನಕೆರೆ ಗ್ರಾಮದ ಹೊರವಲಯದಲ್ಲಿ ಧನಂಜಯ ಎಂಬಾತ ತೋಟದ ಮನೆಯನ್ನು ಹೊಂದಿದ್ದು, ಈತ ಕೆ.ಆರ್.ಪೇಟೆಯ ಖಾಸಗಿ ನರ್ಸಿಂಗ್‌ಹೋಂನಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆ ಭಾಗದಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆಗೆ ಬರುತ್ತಿದ್ದ ಗರ್ಭಿಣಿ ಮಹಿಳೆಯರನ್ನು ತಮ್ಮ ತೋಟದ ಮನೆಗೆ ಕರೆತಂದು ಭ್ರೂಣಹತ್ಯೆ ಮಾಡುತ್ತಿದ್ದರು. ಕೃತ್ಯಕ್ಕೆ ಪಾಂಡವಪುರ ತಾಲೂಕು ಶೆಟ್ಟಹಳ್ಳಿ ಗ್ರಾಮದ ಅಭಿಷೇಕ್ ಕೂಡ ಸಾಥ್ ನೀಡುತ್ತಿದ್ದನು ಎಂದು ತಿಳಿದುಬಂದಿದೆ.

ಡೆಕಾಯ್ ಆಪರೇಷನ್:

ಹೆಣ್ಣು ಭ್ರೂಣಹತ್ಯೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯೊಬ್ಬನ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಅದನ್ನು ಖಚಿತಪಡಿಸಿಕೊಳ್ಳಲು ಡೆಕಾಯ್ ಆಪರೇಷನ್ ನಡೆಸಲು ನಿರ್ಧರಿಸಿದರು. ಅದರಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು ಗರ್ಭಿಣಿ ಮಹಿಳೆಯೊಬ್ಬರನ್ನು ಮುಂದಿಟ್ಟುಕೊಂಡು ಕಾರ್ಯಾಚರಣೆಗೆ ಮುಂದಾದರು.

ಗರ್ಭಿಣಿ ಮಹಿಳೆಗೆ 20 ಸಾವಿರ ರು. ಹಣ ಕೊಟ್ಟು ಹೆಣ್ಣು ಭ್ರೂಣಹತ್ಯೆಯಲ್ಲಿ ತೊಡಗಿದ್ದನೆನ್ನಲಾದ ವ್ಯಕ್ತಿಯ ಸಂಪರ್ಕ ಕಲ್ಪಿಸಿಕೊಟ್ಟರು. ಅಲ್ಲಿಂದ ಆರೋಗ್ಯಾಧಿಕಾರಿಗಳ ತಂಡ ಗರ್ಭಿಣಿಯನ್ನು ಹಿಂಬಾಲಿಸಲಾರಂಭಿಸಿದರು. ಗುರುವಾರ ತಡರಾತ್ರಿ ಬೆಳ್ಳೂರು ಕ್ರಾಸ್‌ನಲ್ಲಿ ಇಳಿದ ಗರ್ಭಿಣಿಯನ್ನು ಧನಂಜಯ ಅವರ ಕಾರಿಗೆ ಹತ್ತಿಸಿಕೊಂಡು ಮುಂದೆ ಸಾಗಿದರು. ಅವರು ಎಲ್ಲಿಗೆ ಹೋದರು ಎನ್ನುವುದು ಗೊತ್ತಾಗಲಿಲ್ಲ. ಅಲ್ಲೇ ಕಾದುಕುಳಿತಿದ್ದೆವು.

ಗರ್ಭಿಣಿಯನ್ನು ದೇವರ ಮಾವಿನಕೆರೆಗೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಲು ನೀಡಿದ್ದ 20 ಸಾವಿರ ರು. ಹಣದಲ್ಲಿ 17 ಸಾವಿರ ರು. ಹಣವನ್ನು ಧನಂಜಯ ಪಡೆದುಕೊಂಡಿದ್ದನು. ಇದೇ ವೇಳೆ ನಾವು ಕಳುಹಿಸಿದ್ದ ಗರ್ಭಿಣಿ  ಜೊತೆಗೆ ಹಾಸನದ ಮೂಲದ ಮತ್ತೊಬ್ಬ ಗರ್ಭಿಣಿಗೂ ಸ್ಕ್ಯಾನಿಂಗ್ ಮಾಡಿದ್ದರು. ಆಕೆಗೆ ಆಗಲೇ ಎರಡು ಹೆಣ್ಣು ಮಗುವಿದ್ದ ಕಾರಣ ಭ್ರೂಣ ಪತ್ತೆಗೆ ಬಂದಿದ್ದ ವಿಷಯ ತಿಳಿದುಬಂದಿತು.

ಅಭಿಷೇಕ್ ಪರಾರಿ, ಧನಂಜಯ ವಿಫಲ ಯತ್ನ:

ಬೆಳ್ಳೂರು ಕ್ರಾಸ್‌ನಿಂದ ಗರ್ಭಿಣಿಯನ್ನು ಕರೆದುಕೊಂಡು ಹೋದ ಕಾರು ದೇವರ ಮಾವಿನಕೆರೆಯಲ್ಲಿರುವ ವಿಷಯ ತಿಳಿದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ನೇತೃತ್ವದ ತಂಡ ಅಲ್ಲಿಗೆ ತೆರಳಿತು. ಮನೆಯನ್ನು ಪತ್ತೆ ಮಾಡುವಷ್ಟರಲ್ಲಿ ಆರೋಪಿ ಅಭಿಷೇಕ್ ಅಲ್ಲಿಂದ ಪರಾರಿಯಾಗಿದ್ದನು. ಆರೋಪಿ ಧನಂಜಯ ಕಾರಿನ ಮೂಲಕ ಸ್ಥಳದಿಂದ ಕಾಲ್ಕಿಳಲು ಯತ್ನಿಸಿದ. ಆ ಸಮಯದಲ್ಲಿ ಚಾಲಕ ಸುರೇಶ್ ಮತ್ತು ಬೆಂಗಳೂರಿನಿಂದ ಡೆಕಾಯ್ ಆಪರೇಷನ್‌ಗೆ ಬಂದಿದ್ದ ಮತ್ತೊಬ್ಬ ಚಾಲಕ ಆ ಕಾರನ್ನು ಅಡ್ಡಗಟ್ಟಲು ಯತ್ನಿಸಿದಾಗ ಅವರ ಮೇಲೆಯೇ ಕಾರು ಹರಿಸಲು ಯತ್ನಿಸಿದರು. ಕೊನೆಗೆ ಕಾರನ್ನು ಅಡ್ಡಗಟ್ಟಿ ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು.

ಪೊಲೀಸರ ಸಹಕಾರದೊಂದಿಗೆ ಧನಂಜಯ ಅವರನ್ನು ಬಂಧಿಸಿದರು. ಆಗ ಆತನ ಬಳಿ ಗರ್ಭಿಣಿ ನೀಡಿದ್ದ 17 ಸಾವಿರ ರು. ಇದ್ದದ್ದು ಪತ್ತೆಯಾಯಿತು. ಮನೆಯೊಳಗೆ ತೆರಳಿ ಪರಿಶೀಲಿಸಿದಾಗ ಎಬಿ- 2 ಕಿಟ್ ಮಾತ್ರೆಗಳು ಸಿಕ್ಕವು. ಈ ಮಾತ್ರೆಗಳು ಯಾವ ಮೆಡಿಕಲ್‌ನಿಂದ ಪಡೆದುಕೊಳ್ಳಲಾಗಿದೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ವಶಕ್ಕೆ ಪಡೆದಿರುವ ಮೂವರು ಆರೋಪಿಗಳನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ನೀಡಿದ ದೂರಿನ ಮೇರೆಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಇಲಾಖೆ ವೈಫಲ್ಯ?:

ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಲ್ಯಾಬ್ ಟೆಕ್ನಿಷಿಯನ್ ಅಭಿಷೇಕ್ ಬೈಯ್ಯಪ್ಪನಹಳ್ಳಿ ಮತ್ತು ಪಾಂಡವಪುರದಲ್ಲಿ ನಡೆದ ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಆತನ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರೂ ಆತನನ್ನು ಬಂಧಿಸಲು ಇದುವರೆಗೂ ಸಾಧ್ಯವಾಗದಿರುವುದು ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸುವಂತೆ ಮಾಡಿದೆ. ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದಿರುವುದೇ ಕೃತ್ಯ ಮತ್ತೆ ಮತ್ತೆ ಮರುಕಳಿಸುತ್ತಿರುವುದಕ್ಕೆ ಕಾರಣವಾಗಿದೆ. ಅಭಿಷೇಕ್ ಪಾಂಡವಪುರ ತಾಲೂಕು ಮಾಣಿಕ್ಯನಹಳ್ಳಿಯ ಬಳಿಯ ಎಂ.ಶೆಟ್ಟಹಳ್ಳಿಯವನೆಂದು ಗೊತ್ತಾಗಿದೆ. ಆತ ಗ್ಯಾಂಬ್ಲಿಂಗ್ ದಂಧೆಯನ್ನೂ ನಡೆಸುತ್ತಿದ್ದಾನೆಂದು ತಿಳಿದುಬಂದಿದೆ. ಆತನನ್ನು ಬಂಧಿಸಲು ಪೊಲೀಸರು ಈಗಲಾದರೂ ಕ್ರಮ ವಹಿಸಬೇಕು.

‘ಭ್ರೂಣ ಪತ್ತೆ ಮಾಡಿಸುತ್ತಿದ್ದ ವ್ಯಕ್ತಿ ಮೇಲೆ ನಮಗೆ ಮೊದಲಿನಿಂದ ಸಂಶಯವಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ದಾಳಿ ನಡೆಸಲು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಗುರುವಾರ ತಡರಾತ್ರಿ ವೇಳೆ ಡೆಕಾಯ್ ಆಪರೇಷನ್ ಮೂಲಕ ಹೆಣ್ಣು ಭ್ರೂಣ ಪತ್ತೆ ಮಾಡುತ್ತಿದ್ದ ಮನೆ ಮೇಲೆ ಗರ್ಭಿಣಿಯೊಬ್ಬರ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಿದೆವು. ದಾಳಿ ನಡೆಸಿದ ವೇಳೆ ದೇವರಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ಗರ್ಭಿಣಿಯೊಬ್ಬರ ಸ್ಕ್ಯಾನಿಂಗ್ ನಡೆಸಲಾಗಿತ್ತು. ಈ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡುವ ಯತ್ನವೂ ಕೂಡ ನಡೆಯಿತು. ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಭಿಷೇಕ್ ಎಂಬಾತ ಬಯ್ಯಪ್ಪನಹಳ್ಳಿ ಮತ್ತು ಪಾಂಡವಪುರ ಪ್ರಕರಣದಲ್ಲಿಯೂ ಭಾಗಿಯಾಗಿದ್ದು ಆತ ಪರಾರಿಯಾಗಿದ್ದಾನೆ.’

- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ

Share this article