ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಹೇಳಿಕೆ
ಕನ್ನಡಪ್ರಭ ವಾರ್ತೆ ಹೊಸಪೇಟೆಉಡುಪಿಯಲ್ಲಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವ ಪುತ್ತಿಗೆ ಶ್ರೀಗಳ ಪರ್ಯಾಯ ಅವಧಿ ಮುಂದಿನ ಜನವರಿ 18ರಿಂದ ಎರಡು ವರ್ಷಗಳ ಕಾಲ ಇರಲಿದ್ದು, ಈ ಅವಧಿಯಲ್ಲಿ ಕೋಟಿ ಭಗವದ್ಗೀತಾ ಸಮರ್ಪಣೆಯ ಸಂಕಲ್ಪ ಮಾಡಲಾಗಿದೆ.
ಪರ್ಯಾಯ ಪೂರ್ವವಾಗಿ ನಗರಕ್ಕೆ ಶನಿವಾರ ಸಂಜೆ ಆಗಮಿಸಿದ ಪುತ್ತಿಗೆ ಮಠದ ಕಿರಿಯ ಶ್ರಿಗಳಾದ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರು ಗಾಂಧಿ ಕಾಲನಿಯ ರಾಘವೇಂದ್ರ ಮಠದಲ್ಲಿ ಪೌರಸನ್ಮಾನ ಸ್ವೀಕರಿಸಿದ ಬಳಿಕ ನೀಡಿದ ಆಶೀರ್ವಚನ ವೇಳೆ ಈ ಮಾಹಿತಿ ನೀಡಿದರು.
ಈ ಹಿಂದಿನ ಪರ್ಯಾಯ ಅವಧಿಯಲ್ಲಿ ಶ್ರೀಗಳು ಲಕ್ಷ ಗೀತಾ ಪಾರಾಯಣ ಮಾಡಿಸಿದ್ದರು. ಉಡುಪಿಯ ಗೀತಾ ಮಂದಿರವೂ ಶ್ರೀಗಳಿಂದಲೇ ಆಗಿದೆ. ಈ ಬಾರಿ ಕೋಟಿ ಗೀತಾ ಯಜ್ಞದ ಜತೆಗೆ ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ನಡೆಸಲಾಗುವುದು. ಉಡುಪಿ ಶ್ರೀಕೃಷ್ಣಮಠಕ್ಕೆ ಮುಖ್ಯ ಪ್ರವೇಶ ಸ್ಥಳವಾದ ಕಲ್ಸಂಕದಲ್ಲಿ ಸ್ವಾಗತ ಗೋಪುರ, ಕೃಷ್ಣನನ್ನು ಕೈಯಲ್ಲಿ ಹಿಡಿದುಕೊಂಡಿರುವ ಭಂಗಿಯ ಮಧ್ವಾಚಾರ್ಯರ ಪ್ರತಿಮೆಯೊಂದಿಗೆ ಮಧ್ವೇಶ ವೃತ್ತ ಸ್ಥಾಪಿಸಲಾಗುವುದು. ಜತೆಗೆ ಗರ್ಭಗುಡಿಯೊಳಗೆ ಚಿನ್ನದ ರಥ ನಿರ್ಮಿಸಿ ನಿತ್ಯ ರಥೋತ್ಸವಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ಪುತ್ತಿಗೆ ಶ್ರೀಗಳ ಪರ್ಯಾಯದ ಅವಧಿಯಲ್ಲಿ ಭಗವದ್ಗೀತೆಗೆ ಈ ಹಿಂದಿನಿಂದಲೂ ಬಹಳ ಮಹತ್ವ ಕೊಡುತ್ತಲೇ ಬರಲಾಗಿದೆ. ಮಹಾಭಾರತದಲ್ಲಿ ಇಲ್ಲದ ವಿಷಯ ಯಾವುದೂ ಇಲ್ಲ. ಮಹಾಭಾರತ ಪಠಣ ಕಷ್ಟ ಎಂಬ ಕಾರಣಕ್ಕೆ ಶ್ರೀಕೃಷ್ಣನಿಂದಲೇ ಹೇಳಲ್ಪಟ್ಟ ಗೀತೆಗೆ ಅಷ್ಟೇ ಮಹತ್ವ ಇರುವುದರಿಂದ ಗೀತೆಯ ಪಾರಾಯಣ, ಪಠಣ, ಪ್ರವಚನ, ವಾಚನಕ್ಕೆ ಮಠ ಬಹಳ ಮಹತ್ವ ಕೊಟ್ಟಿದೆ. ಹೀಗಾಗಿ ಪುತ್ತಿಗೆ ಪರ್ಯಾಯ ಎಂದರೆ ಅದು ವಿಶ್ವ ಗೀತಾ ಪರ್ಯಾಯ ಎಂದೇ ಖ್ಯಾತವಾಗಿದೆ’ ಎಂದರು.
ಈ ಬಾರಿ ಅದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಯಲಿದೆ. ಆಸಕ್ತರಿಗೆ ಒಂದು ಮುದ್ರಿತ ಗೀತಾ ಪುಸ್ತಕ, ಒಂದು ಖಾಲಿ ಪುಸ್ತಕ ಕೊಟ್ಟು, ಖಾಲಿ ಪುಸ್ತಕದಲ್ಲಿ ಗೀತೆ ಬರೆಸುವುದು, ಅದನ್ನು ಉಡುಪಿಗೆ ತಂದು ವಾಚಿಸಿ ಕೃಷ್ಣನಿಗೆ ಸಮರ್ಪಿಸುವುದು, ಮಠದ ಮುದ್ರೆ, ಶ್ರೀಗಳ ಸಹಿಯೊಂದಿಗೆ ಪುನಃ ಪ್ರಸಾದ ರೂಪದಲ್ಲಿ ನೀಡಿ ಅದನ್ನು ಮನೆಯಲ್ಲಿ ಪೂಜಿಸುವುದೇ ಈ ಕೋಟಿ ಗೀತಾ ಪ್ರವಚನದ ಮುಖ್ಯಾಂಶ’ಎಂದು ಶ್ರೀಗಳು ವಿವರಿಸಿದರು.ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ದಿವಾಕರ್, ಪ್ರಮುಖರಾದ ಗುರುರಾಜ ಆಚಾರ್, ಭೂಪಾಳ ರಾಘವೇಂದ್ರ ಶೆಟ್ಟಿ, ಶ್ರೀಪತಿ ಆಚಾರ್, ಸತೀಶ್ ರಾವ್ ಪಾವಂಜೆ, ನರಸಿಂಹಮೂರ್ತಿ, ವೆಂಕೋಬ ರಾವ್, ಗುರುರಾಜ ದಿಗ್ಗಾವಿ ಇತರರಿದ್ದರು.ಮನೆ ಮನೆಯಲ್ಲಿ ಗೀತೆ:ಭಗವದ್ಗೀತೆಯನ್ನು ಸ್ವತಃ ಬರೆದು, ಶ್ರೀಕೃಷ್ಣನಿಗೆ ಅರ್ಪಿಸಿ, ವಾಪಸ್ ಪ್ರಸಾದ ರೂಪದಲ್ಲಿ ಮನೆಗೆ ತರುವ ಪುಸ್ತಕವನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸಬೇಕು ಎಂಬುದು ಪುತ್ತಿಗೆ ಶ್ರಿಗಳ ಆಶಯ. ಮುಂದಿನ ಪೀಳಿಗೆಗೆ ಕೂಡ ಅಪ್ಪ,ಅಜ್ಜ, ಮುತ್ತಜ್ಜ, ಅಜ್ಜಿ, ಮುತ್ತಜ್ಜಿ ಬರೆದ ಭಗವದ್ಗೀತೆ ಎಂಬ ಭಾವನೆಯೊಂದಿಗೆ ಗೀತಾ ಪ್ರವಚನ ಮಾಡುವಂತಾಗಬೇಕು ಎಂಬುದು ಇಡೀ ಪರಿಕಲ್ಪನೆಯ ಸಾರ.