ಕನಕಗಿರಿ: ಇಲ್ಲಿನ ಮುಜರಾಯಿ ಇಲಾಖೆ ವ್ಯಾಪ್ತಿಯ ಶ್ರೀಕನಕಾಚಲಪತಿ ದೇವಸ್ಥಾನದಲ್ಲಿ ಛಟ್ಟಿ ಅಮವಾಸ್ಯೆ ಅಂಗವಾಗಿ ಭಕ್ತರಿಂದ ದೀಪೋತ್ಸವ ಕಾರ್ಯಕ್ರಮ ಗುರುವಾರ ಝಗಮಗಿಸಿತು.
ಪ್ರತಿ ವರ್ಷದಂತೆ ಈ ವರ್ಷವೂ ಛಟ್ಟಿ ಅಮವಾಸ್ಯೆ ಅಂಗವಾಗಿ ಪೌರಾಣಿಕ, ಇತಿಹಾಸ ಪ್ರಸಿದ್ಧ ತೊಂಡಿತೇವರಪ್ಪ, ಪ್ರತಾಪರಾಯ, ಸಚ್ಚಿದಾನಂದ ಮಠ, ಮೆಲುಗಡೆ ಅಗಸಿ ಹನುಮಪ್ಪ, ಆನೆಗೊಂದಿಯ ಆಂಜನೇಯಸ್ವಾಮಿ ಸೇರಿ ನಾನಾ ದೇಗುಲಗಳಲ್ಲಿ ಕಾರ್ತಿಕೋತ್ಸವ ಸಂಭ್ರಮದಿಂದ ನಡೆಯಿತು. ಕನಕಾಚಲಪತಿ ದೇಗುಲದಲ್ಲಿ ನಡೆದ ಕಾರ್ತಿಕೋತ್ಸವದಲ್ಲಿ ಸಾವಿರಾರು ಭಕ್ತರು ಜಮಾಯಿಸಿ ಓಂ, ಕನಕಾಚಲ, ಲಕ್ಷ್ಮೀ, ಅಯ್ಯಪ್ಪ, ಭಜರಂಗಿ, ಶ್ರೀರಾಮನ ಹೆಸರಿನಲ್ಲಿ ಬಣ್ಣ-ಬಣ್ಣದ ರಂಗೋಲಿ ಬಿಡಿಸಿ ಸಾಮೂಹಿಕವಾಗಿ ದೀಪ ಬೆಳಗಿಸಿ ಸಂಭ್ರಮಿಸಿದರು.ಹೀಗೆ ಚೌಕ್ ಹಾಗೂ ವೃತ್ತಾಕಾರದಲ್ಲಿ ಇರಿಸಿದ್ದ ದೀಪಗಳು ಬೆಳಕಿನ ಸೊಬಗಿಗೆ ಮನಸೋತ ಭಕ್ತರು ತಮ್ಮ ಮೊಬೈಲ್ ನಲ್ಲಿ ಸೆಲ್ಪಿ ತೆಗೆದುಕೊಂಡು ಖುಷಿಪಟ್ಟರು. ಹೊಸ ಉಡುಗೆ ಧರಿಸಿದ್ದ ಯುವಕ/ತಿಯರು ದೇವಸ್ಥಾನ ಪ್ರಾಂಗಣದಲ್ಲಿ ನಿಂತು ಪೋಟೋ ಕ್ಲಿಕ್ಕಿಸಿಕೊಳ್ಳುವುದು ಕಂಡು ಬಂದಿತು.
ದೇವಸ್ಥಾನ ಸಮಿತಿಯಿಂದಲೂ ಪ್ರತಿ ವರ್ಷದಂತೆ ದೀಪ ಬೆಳಗಿಸಲು ತುಪ್ಪ, ಎಣ್ಣೆ, ಹಣತೆಗಳ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 8.30ರ ನಂತರ ಮಹಾ ಮಂಗಳಾರತಿ ನಂತರ ದೀಪೋತ್ಸವ ಕಾರ್ಯಕ್ರಮ ಆರಂಭಗೊಂಡಿತು. ಸಾವಿರಾರು ಭಕ್ತರಿಂದ 50 ಸಾವಿರಕ್ಕೂ ಹೆಚ್ಚು ದೀಪಗಳು ಬೆಳಗಿರುವುದು ನೆರದಿದ್ದವರನ್ನು ಆಕರ್ಷಿಸಿತು. ಕನಕಾಚಲಪತಿ ಭಜನಾ ಸಂಘದ ದಾಸರ ಕಿರ್ತನೆಗಳು ಮೊಳಗಿದವು. ಅಮವಾಸ್ಯೆ ಹಿನ್ನೆಲೆಯಲ್ಲಿ ಕನಕಾಚಲಪತಿ ಹಾಗೂ ಲಕ್ಷ್ಮೀ ದೇವಿಗೆ ವಿಶೇಷ ಪೂಜೆಗಳು ನಡೆದವು.ವೈಭವದಿಂದ ನಡೆಯುವ ದೀಪೋತ್ಸವ ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ನಲವಾಗಲ ಗ್ರಾಮದ ಚಂದ್ರಪ್ಪ ಕುಟುಂಬಸ್ಥರು ಆಗಮಿಸಿದ್ದರು. ಸತತ 12 ವರ್ಷಗಳಿಂದ ಇಲ್ಲಿಗೆ ಬರುತ್ತಿರುವ ಕುಟುಂಬಸ್ಥರು ವಿಭಿನ್ನ ರಂಗೋಲಿ ಮತ್ತು ಕನಕಾಚಲಪತಿ, ಲಕ್ಷ್ಮೀ ಹೆಸರು ಬಿಡಿಸಿ ಕಾರ್ತಿಕ ಹಚ್ಚಿ ಭಕ್ತಿ ಸಮರ್ಪಿಸಿದರು.
ಕನಕರಾಯ ಮನೆ ದೇವರು ಆಗಿರುವುದರಿಂದ ಪ್ರತಿ ವರ್ಷ ನಡೆಯುವ ದೀಪೋತ್ಸವದಲ್ಲಿ ನಮ್ಮ ಕುಟುಂಬದವರೆಲ್ಲರೂ ಭಾಗಿಯಾಗಿ ದೀಪ ಬೆಳಗಿಸಿ ಮರು ದಿನ ನಮ್ಮೂರಿಗೆ ತೆರಳುತ್ತೇವೆ ಎಂದು ಭಾವನಾ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯ ವೆಂಕಟೇಶ ಸೌದ್ರಿ, ಕೀರ್ತಿಕುಮಾರ ಸೋನಿ, ನಾಗಪ್ಪ ಕೊರೆಡ್ಡಿ, ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಕನಕರೆಡ್ಡಿ ಮಹಲಿನಮನಿ, ವಿಜಯಕುಮಾರ ಅರ್ಚಕ, ಗೋಪಾಲರೆಡ್ಡಿ ಎಂ, ಗುಂಡಪ್ಪ ಚಿತ್ರಗಾರ, ಶ್ರೀನಿವಾಸರೆಡ್ಡಿ ಓಣಿಮನಿ, ನಾಗರಾಜ ಚಿತ್ರಗಾರ, ಕರುಣಾಕರರೆಡ್ಡಿ ಸೇರಿದಂತೆ ದೇವಸ್ಥಾನ ಸಿಬ್ಬಂದಿ, ಭಕ್ತರು ಇದ್ದರು.