ಮುಂಡಗೋಡ: ಕಾಡುನಾಯಿಗಳ ದಾಳಿಯಿಂದ ಜಿಂಕೆಯೊಂದು ಮೃತಪಟ್ಟ ಘಟನೆ ತಾಲೂಕಿನ ಸುಳ್ಳಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಜಿಂಕೆಯನ್ನು ಬೆನ್ನಟ್ಟಿಕೊಂಡು ಹೋದ ಕಾಡುನಾಯಿಗಳು, ಕಚ್ಚಿ ಗಾಯಗೊಳಿಸಿವೆ. ಇದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ಉಪಚರಿಸುವ ವೇಳೆಯಲ್ಲಿ ಜಿಂಕೆ ಸಾವಿಗೀಡಾಗಿದೆ ಎನ್ನಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ನಿಯಮಾನುಸಾರವಾಗಿ ಜಿಂಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಪತ್ನಿ ಕೊಲೆ: ಪತಿಗೆ ಜೀವಾವಧಿ ಶಿಕ್ಷೆಶಿರಸಿ: ಪತ್ನಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.ಸಿದ್ದಾಪುರ ತಾಲೂಕಿನ ಹೆಗ್ಗೋಡಮನೆಯ ಮಂಜುನಾಥ ಕೆರಿಯಾ ಚನ್ನಯ್ಯನಿಗೆ ಜೀವಾವಧಿ ಶಿಕ್ಷೆ ಹಾಗೂ ₹೨೫ ಸಾವಿರ ದಂಡ, ₹೫೦ ಸಾವಿರವನ್ನು ಮೃತರ ಅವಲಂಬಿತರ ಮಕ್ಕಳಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ.
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗೋಡಮನೆಯ ಎಸ್‌ಸಿ ಕೇರಿಯ ನಿವಾಸಿ ಆಪಾದಿತ ಮಂಜುನಾಥ ಕೆರಿಯಾ ಚನ್ನಯ್ಯ ವಿಪರೀತ ಮದ್ಯ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದ. 2022ರ ಮೇ 20ರಂದು ಪತ್ನಿಯೊಂದಿಗೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿದ್ದ. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕ ಕುಮಾರ ಕೆ. ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಲ್ಲಿರುವ ಸಾಕ್ಷ್ಯದಿಂದ ಆರೋಪಿತನ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಶಿರಸಿ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪೀಠಾಸೀನ ಶಿರಸಿಯ ನ್ಯಾಯಾಧೀಶ ಕಿರಣ ಅವರು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ವಾದಿಸಿದ್ದರು.