ಹುಲಿ ಹಾಗೂ ಚಿರತೆ ಚರ್ಮದ ಮೇಲೆ ಕುಳಿತಿರುವ ಪೋಟೋಗಳು ವೈರಲ್ । ಅರಣ್ಯ ಇಲಾಖೆಯಿಂದ ಕ್ರಮ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ದತ್ತಪೀಠದ ಶಾಖಾದ್ರಿಯವರ ಮನೆಯಲ್ಲಿ ಅರಣ್ಯ ಇಲಾಖೆಯವರು ಶುಕ್ರವಾರ ಜಿಂಕೆ ಮತ್ತು ಚಿರತೆಯ ತಲಾ ಒಂದೊಂದು ಚರ್ಮವನ್ನು ವಶಕ್ಕೆ ಪಡೆದಿದ್ದಾರೆ. ಶಾಖಾದ್ರಿಯವರು ಹುಲಿ ಹಾಗೂ ಚಿರತೆ ಚರ್ಮದ ಮೇಲೆ ಕುಳಿತಿರುವ ಪೋಟೋಗಳು ಶುಕ್ರವಾರ ವೈರಲ್ ಆಗುತ್ತಿದ್ದಂತೆ, ಶ್ರೀರಾಮ ಸೇನೆ ಮುಖಂಡರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅವರ ಮನೆಯನ್ನು ತಪಾಸಣೆ ಮಾಡುವಂತೆ ಮನವಿ ಮಾಡಿದರು. ಆಗ ಕೂಡಲೇ ಜಾಗೃತಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿಕ್ಕಮಗಳೂರಿನ ಎಂ.ಜಿ. ರಸ್ತೆಯ ಬನಶಂಕರಿ ದೇವಾಲಯದ ರಸ್ತೆಯಲ್ಲಿರುವ ಶಾಖಾದ್ರಿ ಅವರ ಮನೆಗೆ ಹೋಗಿ ನೋಡಿದಾಗ ಮನೆಗೆ ಬೀಗ ಹಾಕಲಾಗಿತ್ತು. ಹಾಗಾಗಿ ಅವರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿದಾಗ ಸಂಜೆ 6 ಗಂಟೆಗೆ ಬರುವುದಾಗಿ ಹೇಳಿದ್ದರು. ಅದ್ದರಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ಥಳದಲ್ಲಿಯೇ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ರಾತ್ರಿ 8 ಗಂಟೆ ವೇಳೆಗೆ ಶಾಖಾದ್ರಿಯವರ ಸಂಬಂಧಿಕರು ಮನೆ ಬೀಗವನ್ನು ತಂದ ಬಳಿಕ ಆರ್‌ಎಫ್‌ಒ ಮೋಹನ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮನೆಯ ತಪಾಸಣೆ ನಡೆಸಿದಾಗ ಚಿರತೆ ಹಾಗೂ ಜಿಂಕೆಯ ತಲಾ ಒಂದೊಂದು ಚರ್ಮಗಳು ಪತ್ತೆಯಾಗಿವೆ. ಇವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಎಫ್‌ಒ ರಮೇಶ್‌ಬಾಬು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. --- ಬಾಕ್ಸ್ ------ ಅರಣ್ಯ ಇಲಾಖೆಯಿಂದ ಪಕ್ಷಪಾತ ಚಿಕ್ಕಮಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಅರಣ್ಯ ಇಲಾಖೆ ಕಾನೂನಿನಂತೆ ಕ್ರಮ ಕೈಗೊಳ್ಳುವಲ್ಲಿ ತೀವ್ರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ. ಮಂಜುನಾಥ ಜೋಷಿ ಆರೋಪಿಸಿದ್ದಾರೆ. ಈ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಖಾಂಡ್ಯ ದೇವಸ್ಥಾನದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಮತ್ತು ನಾಗೇಂದ್ರ ಜೋಯಿಸರನ್ನು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರೆಂದು ಬಂಧಿಸಿರುವುದು ಅತ್ಯಂತ ಆತುರದ ಕ್ರಮ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹುಲಿ ಉಗುರು ಧರಿಸುವುದು ಅಪರಾಧ ಹಾಗೂ ಕಾನೂನಿಗೆ ವಿರೋಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿರುವುದು ತಪ್ಪೆಂದು ಹೇಳುವುದಿಲ್ಲ. ಆದರೆ, ಪ್ರಭಾವಿಗಳು ಧರಿಸಿರುವ ಪ್ರಕರಣಗಳಲ್ಲಿ ಅವರನ್ನು ಬಂಧಿಸದೆ ನೋಟಿಸು ನೀಡಿದ್ದೇವೆ, ಅದು ನಿಜವಾದ ಹುಲಿ ಉಗುರೇ ಎಂದು ಪರಿಶೀಲಿಸುತ್ತಿದ್ದೇವೆ ಎಂದು ನೆಪ ಹೇಳುತ್ತಿರುವ ಇಲಾಖೆ ಅತ್ಯಂತ ಸಾಮಾನ್ಯರನ್ನು ಮಾತ್ರ ಜೈಲಿಗೆ ಕಳುಹಿಸುತ್ತಿರುವುದು ಅತ್ಯಂತ ಖಂಡನೀಯ. ಸರ್ಕಾರ ಈ ಪ್ರಕರಣಗಳ ಬಗ್ಗೆ ನ್ಯಾಯ ಸಮ್ಮತ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಸಹ ಮತ್ತೊಮ್ಮೆ ಯಾವುದೇ ಪ್ರಾಣಿ ಜನ್ಯ ವಸ್ತುಗಳನ್ನು ಬಳಸುವುದು ಅಪರಾಧ ಹಾಗೂ ಆ ರೀತಿ ವಸ್ತುಗಳು ಇದ್ದಲ್ಲಿ ಅವುಗಳನ್ನು ತಕ್ಷಣ ಇಲಾಖಾ ಸುಪರ್ದಿಗೆ ನೀಡಲು ಅವಕಾಶ ನೀಡಿ ಬಂಧಿತರ ಬಿಡುಗಡೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.