ರಾಯಚೂರು/ಸಿಂಧನೂರು: ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಸಾಮರಸ್ಯ ಉಳಿಯಬೇಕಾದರೆ ಬಿಜೆಪಿ ಪಕ್ಷವನ್ನು ಈ ಬಾರಿ ಸೋಲಿಸೇಕು ಎಂದು ಚಿಂತಕ ರಹೆಮತ್ ತರೀಕೆರೆ ಹೇಳಿದರು.
ರಾಯಚೂರು ಮತ್ತು ಸಿಂಧನೂರಿನಲ್ಲಿ ಅವರು ಮಾತನಾಡಿದರು. ದೇಶ ಬಹುಜನಾಂಗ, ಬಹುಸಂಸ್ಕೃತಿಯಿಂದ ಕೂಡಿದೆ. ಜಾತ್ರೆ, ಉರುಸುಗಳನ್ನು ಎಲ್ಲರೂ ಒಗ್ಗೂಡಿ ಆಚರಿಸುವ ಪರಂಪರೆಯಿದೆ. ಇದನ್ನು ಹಾಳು ಮಾಡಲು ಜಾತಿ, ಧರ್ಮ, ದೇವರುಗಳ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರಲ್ಲಿ ವಿಷಬೀಜ ಬಿತ್ತಿ ಕೋಮುಗಲಭೆ ಸೃಷ್ಟಿಸಿ, ದ್ವೇಷ ಹಬ್ಬಿಸಿ ಶಾಂತಿ, ಸೌಹಾರ್ದತೆ, ಸಾಮರಸ್ಯಕ್ಕೆ ಬಿಜೆಪಿ ಸರ್ಕಾರ ಧಕ್ಕೆ ತಂದು ರಾಜಕಾರಣ ಮಾಡಿ ಅಧಿಕಾರ ಪಡೆಯಲು ಕುತಂತ್ರ ಮಾಡುತ್ತಿರುವುದು ಲಜ್ಜೆಗೇಡಿನತನದ ಸಂಗತಿ ಎಂದು ದೂರಿದರು.ಭಾರತ ಹಲವು ರಾಜ್ಯಗಳ ಒಕ್ಕೂಟದಿಂದ ಕೂಡಿದೆ. ಹೀಗಾಗಿ ಕೇಂದ್ರ ಸರ್ಕಾರ ಅಲ್ಲ, ಒಕ್ಕೂಟ ಸರ್ಕಾರವೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿರುವುದು ಸತ್ಯದ ಸಂಗತಿ. ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಂದ ಅತಿಹೆಚ್ಚು ತೆರಿಗೆ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಆದರೆ ನನ್ನ ತೆರಿಗೆಯ ಪಾಲನ್ನು ನಮ್ಮ ರಾಜ್ಯಗಳಿಗೆ ಕೊಡದೆ, ಗುಜರಾತ್, ಉತ್ತರಪ್ರದೇಶ ರಾಜ್ಯಗಳಿಗೆ ಕೊಟ್ಟು ಮಹಾದ್ರೋಹ ಬಗೆಯುತ್ತಿದೆ. ಹಣ ಬಿಡುಗಡೆ ಕುರಿತು ಸಭೆಯನ್ನೇ ಕರೆಯುತ್ತಿಲ್ಲ. ಅಲ್ಲದೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಯೋಜನೆಯಡಿ ಬರಗಾಲ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡಬೇಕು. ಅದನ್ನು ಕೊಡಲು ಮೀನಾಮೇಷ ಎಣಿಸುತ್ತಿದೆ ಎಂದು ಕಿಡಿಕಾರಿದರು.
ಸಂಚಾಲಕ ರಮೇಶ ಸಂಕ್ರಾಂತಿ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಹುಸೇನಸಾಬ, ಮುಖಂಡ ಎಸ್.ಎ.ಖಾದರ್ಸುಭಾನಿ, ಜನಶಕ್ತಿ ಸಂಘಟನೆಯ ಬಸವರಾಜ ಬಾದರ್ಲಿ ಇದ್ದರು.