ರಾಮನಗರ: ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಕಳೆದು ಹೋದ ಕನಕಪುರ ಒಳಗೊಂಡಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಗಳಲ್ಲಿ ಈವರೆಗೆ ಕಾಂಗ್ರೆಸ್ - 4, ಬಿಜೆಪಿ - 8 ಹಾಗೂ ಜೆಡಿಎಸ್ - 9 ಬಾರಿ ಸೋಲು ಅನುಭವಿಸಿದೆ.
ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರ ಈವರೆಗೆ 2 ಉಪಚುನಾವಣೆ ಸೇರಿದಂತೆ 16 ಚುನಾವಣೆಗಳನ್ನು ಕಂಡಿದೆ. 16 ಚುನಾವಣೆಗಳಲ್ಲಿಯೂ ಸ್ಪರ್ಧಿಸಿರುವ ಕಾಂಗ್ರೆಸ್ - 12ರಲ್ಲಿ, 9 ಚುನಾವಣೆಗಳನ್ನು ಎದುರಿಸಿರುವ ಬಿಜೆಪಿ - 1 ಹಾಗೂ 12 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ - 3 ಚುನಾವಣೆಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.ಕಾಂಗ್ರೆಸ್ ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಈ ಕ್ಷೇತ್ರದಲ್ಲಿ ಕೈ ಪಡೆ ಸೋಲು ಅನುಭವಿಸಿದ 1996, 1998 ಸಾರ್ವತ್ರಿಕ, 2002ರ ಉಪಚುನಾವಣೆಯಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, 2009ರ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
ಬಿಜೆಪಿ 1996ರ ಚುನಾವಣೆಯಲ್ಲಿ 3ನೇ ಸ್ಥಾನ ಪಡೆದಿತ್ತು. ಉಳಿದಂತೆ 1991, 1999, 2004, 2009, 2014 ಹಾಗೂ 2019ರ ಚುನಾವಣೆಯಲ್ಲಿ 2ನೇ ಸ್ಥಾನ ಅಲಂಕರಿಸಿತ್ತು.ಇನ್ನು ಜನತಾ ಪರಿವಾರ 1980, 1984 1989, 2014ರ ಚುನಾವಣೆಗಳಲ್ಲಿ 2ನೇ ಸ್ಥಾನ ಪಡೆದರೆ, 1991, 1998, 1999 ಮತ್ತು 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಕೈ ಭದ್ರಕೋಟೆ ಛಿದ್ರ ಆಗಿದ್ಹೇಗೆ:ಕನಕಪುರ ಲೋಕಸಭಾ ಕ್ಷೇತ್ರ 1967ರಲ್ಲಿ ರಚನೆಯಾಯಿತು. 1967ರಲ್ಲಿ ಕಾಂಗ್ರೆಸ್ ನ ಎಂ.ವಿ. ರಾಜಶೇಖರನ್, 1971ರಲ್ಲಿ ಸಿ.ಕೆ. ಜಾಫರ್ ಷರೀಫ್ ಗೆಲುವು ಸಾಧಿಸಿದರು. ಆನಂತರ ಕಾಂಗ್ರೆಸ್ ಹುರಿಯಾಳಾದ ಎಂ.ವಿ. ಚಂದ್ರಶೇಖರ ಮೂರ್ತಿ 1977, 1980, 1984, 1989 ಹಾಗೂ 1991ರ ಚುನಾವಣೆಗಳಲ್ಲಿ ಕ್ರಮವಾಗಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರನಂತೆ ಮೆರೆದರು.
1996ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲ ಬಾರಿಗೆ ಇದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಆ ಚುನಾವಣೆಯಲ್ಲಿ ಅವರು ಸೋಲಿಲ್ಲದ ಸರದಾರನಾಗಿದ್ದ ಕಾಂಗ್ರೆಸ್‌ನ ಚಂದ್ರಶೇಖರ್ ಅವರನ್ನು ಮಣ್ಣು ಮುಕ್ಕಿಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಅಭ್ಯರ್ಥಿ ಗೆಲುವು ದಾಖಲಿಸಿದ್ದರು. ಕುಮಾರಸ್ವಾಮಿ ಅವರಿಂದಾಗಿ ಕಾಂಗ್ರೆಸ್‌ನ ಭದ್ರಕೋಟೆ ಛಿದ್ರಗೊಂಡಿತು.ವಿಶೇಷವೆಂದರೆ 1996ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಮೆರೆದು ಕುಣಿಸಿದ್ದ ಕ್ಷೇತ್ರ ಮತದಾರರು 1999ರಲ್ಲಿ ಠೇವಣಿ ಕಳೆದರು. 1998ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬೆಂಗಳೂರಿನ ಎಂ. ಶ್ರೀನಿವಾಸ್ ಗೆಲುವು ಸಾಧಿಸಿದ್ದರು. ಆದರೆ, ಬಿಜೆಪಿಗೆ ಈ ಖುಷಿ ಹೆಚ್ಚು ಸಮಯ ಇರಲಿಲ್ಲ. 1999ರ ಚುನಾವಣೆಯಲ್ಲಿ ಬಣ ಬದಲಿಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಚಂದ್ರಶೇಖರಮೂರ್ತಿ ಮತ್ತೆ ಗೆದ್ದು, ಈ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು.
ತಂದೆ ಎದುರು ಗೆದ್ದು, ಮಗನ ವಿರುದ್ಧ ಸೋತರು:1999ರಲ್ಲಿ ನಡೆದ ಚುನಾವಣೆಯಲ್ಲಿ ಹಾಸನದಲ್ಲಿ ಸೋಲು ಕಂಡಿದ್ದ ಎಚ್.ಡಿ. ದೇವೇಗೌಡರ ರಾಜಕೀಯ ಮುಗಿದೇ ಹೋಯಿತು ಎನ್ನುವ ಹಂತ ತಲುಪಿತ್ತು. ಆದರೆ, 2002ರಲ್ಲಿ ನಡೆದ ಕನಕಪುರ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದ ದೇವೇಗೌಡ ಅವರನ್ನು ಮತದಾರರು ಗೆಲ್ಲಿಸುವ ಮೂಲಕ ಅವರಿಗೆ ರಾಜಕೀಯ ಮರುಜನ್ಮ ನೀಡಿದರು.
2004ರ ಚುನಾವಣೆಯಲ್ಲಿ ಕಾಂಗ್ರೆಸ್ ತೇಜಸ್ವಿನಿ (5,84,238ಮತ) ವಿರುದ್ಧ ಸ್ಪರ್ಧಿಸಿದ ಜೆಡಿಎಸ್ ನ ದೇವೇಗೌಡರು (4,62,320 ಮತ) 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಬಿಜೆಪಿ ಅಭ್ಯರ್ಥಿ ರಾಮಚಂದ್ರೇಗೌಡ (4,67,575ಮತ) 2ನೇ ಸ್ಥಾನ ಪಡೆದುಕೊಂಡರು.ಮರು ಚುನಾವಣೆಯಲ್ಲಿ ಅಂದರೆ 2009ರಲ್ಲಿ ಕಾಂಗ್ರೆಸ್ ನ ತೇಜಸ್ವಿನಿರವರು 1,92,822 ಮತ ಪಡೆದು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ದೇವೇಗೌಡರ ಪುತ್ರ ಕುಮಾರಸ್ವಾಮಿ 4,93,302 ಮತ ಪಡೆದು ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಬಿಜೆಪಿಯ ಸಿ.ಪಿ. ಯೋಗೇಶ್ವರ್ 3,63,027 ಮತಗಳನ್ನು ಪಡೆದು ಪರಾಭವಗೊಂಡರು.
2009ರ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವು ಸಾಧಿಸಿ 4 ವರ್ಷಗಳ ಕಾಲ ಸಂಸದರಾಗಿದ್ದರು. ಅವರ ರಾಜೀನಾಮೆಯಿಂದಾಗಿ 2013ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ವಿರುದ್ಧ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಡಿ.ಕೆ.ಸುರೇಶ್ 1.36 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. 2014ರಲ್ಲಿಯೂ ಗೆದ್ದ ಸುರೇಶ್ ರವರು 2019ರ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿಯಾಗಿ ವಿಜಯ ಪತಾಕೆ ಹಾರಿಸಿದರು.