ಕನ್ನಡಪ್ರಭವಾರ್ತೆ ಮಂಡ್ಯ
ಪತ್ನಿ ಗ್ರಾಪಂ ಸದಸ್ಯರಾಗಿದ್ದ ಅವಧಿಯಲ್ಲಿ 14ನೇ ಹಣಕಾಸು ಯೋಜನೆಯ 9 ಕಾಮಗಾರಿ ಮತ್ತು ಗ್ರಾಪಂ ನಿಧಿಯ 5 ಕಾಮಗಾರಿಗಳನ್ನು ನಿರ್ವಹಣೆ ಮಾಡಿರುವ ಆರೋಪದಡಿ ನಾಗಮಂಗಲ ತಾಲೂಕಿನ ಕರಡಹಳ್ಳಿ ಗ್ರಾಪಂ ಸದಸ್ಯ ಸಿದ್ದಲಿಂಗಪ್ಪ ಅವರ ಸದಸ್ಯತ್ವ ರದ್ದುಪಡಿಸುವ ಜೊತೆಗೆ 6 ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಆದೇಶ ಹೊರಡಿಸಿದ್ದಾರೆ.ತಾಲೂಕಿನ ಕಲ್ಲಿನಾಥಪುರ ಗ್ರಾಮದ ಸಿದ್ದಲಿಂಗಪ್ಪ ಪತ್ನಿ ಸವಿತಾ ಎಂಬುವರು ಕಳೆದ 2015 ರಿಂದ 2020ರವರೆಗೆ ಕರಡಹಳ್ಳಿ ಗ್ರಾಪಂ ಸದಸ್ಯೆಯಾಗಿದ್ದರು. ಈ ಅವಧಿಯಲ್ಲಿ 4ನೇ ದರ್ಜೆ ಗುತ್ತಿಗೆದಾರರಾಗಿರುವ ಪತಿ ಸಿದ್ದಲಿಂಗಪ್ಪ ವಿವಿಧ ಕಾಮಗಾರಿಗಳನ್ನು ನಿರ್ವಹಣೆ ಮಾಡಿರುವ ಜೊತೆಗೆ ನರೇಗಾ ಯೋಜನೆಯ ಕಾಮಗಾರಿಗಳಿಗೆ ಸಾಮಗ್ರಿ ಪೂರೈಕೆ ಮಾಡಿರುವ ಬಿಲ್ ಪಡೆದಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸವಿತಾ ಎಂಬುವರು ಕರಡಹಳ್ಳಿ ಗ್ರಾಪಂ ಸದಸ್ಯೆಯಾಗಿದ್ದ ಅವಧಿಯಲ್ಲಿ ಪತಿ ಸಿದ್ದಲಿಂಗಪ್ಪ 14ನೇ ಹಣಕಾಸು ಯೋಜನೆಯ 9 ಕಾಮಗಾರಿಗಳು ಮತ್ತು ಗ್ರಾಪಂ ನಿಧಿಯ 5 ಕಾಮಗಾರಿಗಳನ್ನು ನಿರ್ವಹಣೆ ಮಾಡಿರುವುದಲ್ಲದೆ ನರೇಗಾ ಯೋಜನೆಯ ಒಟ್ಟು 29 ಕಾಮಗಾರಿಗಳಿಗೆ ಸಾಮಗ್ರಿ ಪೂರೈಕೆ ಮಾಡಿರುವ ಬಿಲ್ ಪಡೆದಿರುವುದು ತನಿಖೆ ವೇಳೆ ಸಾಬೀತಾಗಿದೆ. ಕಳೆದ 2021ರಿಂದ ಗ್ರಾಪಂ ಸದಸ್ಯರಾಗಿರುವ ಸಿದ್ದಲಿಂಗಪ್ಪ ಅವರು ಗ್ರಾಪಂ ನಿಧಿಯಲ್ಲಿ ಯಾವುದೇ ಕಾಮಗಾರಿ ನಿರ್ವಹಣೆ ಮಾಡಿಲ್ಲ. ನರೇಗಾ ಯೋಜನೆಯ ಕಾಮಗಾರಿಗಳಿಗೆ ಸಾಮಗ್ರಿ ಪೂರೈಕೆ ಮಾಡಿಲ್ಲ. ಆದರೆ, ಇವರ ಪುತ್ರ ಕೆ.ಎಸ್.ದರ್ಶನ್ ನರೇಗಾ ಯೋಜನೆಯ 3 ಕಾಮಗಾರಿಗಳಿಗೆ ಸಾಮಗ್ರಿ ಪೂರೈಕೆ ಮಾಡಿ ಬಿಲ್ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿಯಲ್ಲಿ ಗ್ರಾಪಂ ಸದಸ್ಯ ಸಿದ್ದಲಿಂಗಪ್ಪ ಅವರ ವಿರುದ್ಧ ಕ್ರಮವಹಿಸುವಂತೆ ಜಿಪಂ ಸಿಇಒ ಅವರು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಸೂಕ್ತ ದಾಖಲಾತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದ್ದರು.ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯ ಸಿದ್ದಲಿಂಗಪ್ಪ ವಿರುದ್ಧದ ಆರೋಪಗಳು ಸಾಬೀತಾಗಿರುವುದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿಯಲ್ಲಿ ಸಿದ್ದಲಿಂಗಪ್ಪ ಅವರ ಗ್ರಾಪಂ ಸದಸ್ಯತ್ವವನ್ನು ರದ್ದುಪಡಿಸುವ ಜೊತೆಗೆ 6 ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಆದೇಶಿಸಿದ್ದಾರೆ.