ಚರ್ಚೆಗೆ ಗ್ರಾಸವಾದ ಕೈ ಟಿಕೆಟ್ ಘೋಷಣೆ ವಿಳಂಬ

KannadaprabhaNewsNetwork |  
Published : Mar 19, 2024, 12:48 AM IST
18ಕೆಪಿಎಲ್22 ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ವಿಜೇಯೇಂದ್ರ ಅವರನ್ನು ಕೊಪ್ಪಳ ನಿಯೋಜಿತ ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ಭೇಟಿಯಾಗಿ, ಅಭಿನಂದಿಸುತ್ತಿರುವುದು. | Kannada Prabha

ಸಾರಾಂಶ

ಕಾಂಗ್ರೆಸ್‌ ತನ್ನ ಹುರಿಯಾಳು ಘೋಷಿಸಲು ವಿಳಂಬ ಮಾಡುತ್ತಿರುವುದು ಹಲವು ರಾಜಕೀಯ ಚರ್ಚೆಗೆ ಇಂಬು ನೀಡಿದೆ.

- ಸಂಸದ ಸಂಗಣ್ಣ ಕರಡಿ ನಡೆ ಇನ್ನು ನಿಗೂಢ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಡಾ.ಕೆ. ಬಸವರಾಜ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿ ಆಗಲೇ ಒಂದು ವಾರವಾಗುತ್ತ ಬಂದಿದ್ದು, ಕಾಂಗ್ರೆಸ್‌ ತನ್ನ ಹುರಿಯಾಳು ಘೋಷಿಸಲು ವಿಳಂಬ ಮಾಡುತ್ತಿರುವುದು ಹಲವು ರಾಜಕೀಯ ಚರ್ಚೆಗೆ ಇಂಬು ನೀಡಿದೆ.

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಕಾಂಗ್ರೆಸ್ ಪಾಳೆಯದಲ್ಲಿ ನಾನಾ ಲೆಕ್ಕಚಾರಗಳು ಶುರುವಾಗಿವೆ. ಇದು ಬಿಜೆಪಿ ಪಾಳೆಯದಲ್ಲಿಯೂ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ. ಕೆ. ಬಸವರಾಜ ಕ್ಷೇತ್ರದಾದ್ಯಂತ ಸುತ್ತಾಡಿ, ಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಮಾಜಿ ಸಚಿವ ಹಾಲಪ್ಪ ಆಚಾರ, ಬಿಜೆಪಿ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ ಹಾಗೂ ಚಂದ್ರು ಕವಲೂರು ಸೇರಿದಂತೆ ಅನೇಕರು ಸಾಥ್ ನೀಡಿದ್ದಾರೆ. ಇದು ಹಾಲಿ ಸಂಸದ ಸಂಗಣ್ಣ ಕರಡಿ ಅವರ ಪಾಳೆಯವನ್ನು ಕೆರಳುವಂತೆ ಮಾಡಿದೆ.

ಕಾಂಗ್ರೆಸ್ ವಿಳಂಬ:

ಕಾಂಗ್ರೆಸ್ ಇದುವರೆಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡದಿರುವುದು ಎರಡೂ ಪಕ್ಷಗಳಲ್ಲಿ ಹಲವು ಚರ್ಚೆಗಳಿಗೆ ನಾಂದಿಯಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆಯನ್ನು ಬಿಜೆಪಿ ಸಹ ಕಾಯುತ್ತಿದೆ. ಹಾಲಿ ಸಂಸದರನ್ನು ಕಾಂಗ್ರೆಸ್‌ಗೆ ಕರೆತರುತ್ತಾರೆ ಎನ್ನುವ ವಾದ ಒಂದು ಕಡೆಯಾದರೇ ಅವರಿಗೆ ಟಿಕೆಟ್ ಇಲ್ಲ, ಎಂಎಲ್ಸಿ ಮಾಡುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತದೆ. ಇದರ ಜೊತೆಗೆ ಕಾಂಗ್ರೆಸ್ ಟಿಕೆಟ್ ಈಗಾಗಲೇ ಕಳೆದ ಬಾರಿ ಪರಾಭವಗೊಂಡಿರುವ ರಾಜಶೇಖರ ಹಿಟ್ನಾಳ ಅವರಿಗೆ ಫೈನಲ್ ಎನ್ನಲಾಗುತ್ತಿದೆ. ಇದರ ನಡುವೆಯೂ ಬೇರೆಡೆ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಿದ್ದೇ ಆದರೆ ಬಸನಗೌಡ ಬಾದರ್ಲಿಗೆ ಟಿಕೆಟ್ ಎನ್ನುವುದು ಕಾಂಗ್ರೆಸ್‌ನಲ್ಲಿ ಇದುವರೆಗೂ ಇದ್ದ ಲೆಕ್ಕಚಾರ.

ಆದರೆ, ಅದನ್ನು ಮೀರಿ ಈಗ ಕಾಂಗ್ರೆಸ್‌ನಲ್ಲಿನ ಒಂದು ಗುಂಪು ಸಂಗಣ್ಣರನ್ನು ಕರೆತಂದು, ಅಖಾಡಕ್ಕೆ ಇಳಿಸಬೇಕು ಎನ್ನುವ ಕಸರತ್ತು ನಡೆಸಿದೆ. ಇದು ಹಿಟ್ನಾಳ ಕುಟುಂಬವನ್ನು ಕೆಂಡಮಂಡಲವಾಗುವಂತೆ ಮಾಡಿದೆ. ಕರಡಿ ಅವರನ್ನು ಕರೆತರುವುದಕ್ಕೆ ವಿರೋಧ ಇಲ್ಲವಾದರೂ ಟಿಕೆಟ್‌ ನೀಡಬೇಕು ಎನ್ನುವ ವಾದಕ್ಕೆ ಸಿಡಿಮಿಡಿಗೊಂಡಿದ್ದಾರೆ ಎಂದು ಕಾಂಗ್ರೆಸ್ ಪಾಳೆಯದಲ್ಲಿಯೇ ಗುಸುಗುಸು ಚರ್ಚೆಯಾಗುತ್ತಿದೆ.

ಬಿಜೆಪಿಯಲ್ಲಿಯೂ ಲೆಕ್ಕಚಾರ:

ಶಿವಮೊಗ್ಗದಲ್ಲಿ ಬಂಡಾಯ ಎದ್ದಿರುವ ಕೆ.ಎಸ್. ಈಶ್ವರಪ್ಪಗೆ ಕೊಪ್ಪಳ ಟಿಕೆಟ್ ನೀಡಬೇಕು ಮತ್ತು ಪಂಚಮಸಾಲಿ ಸಮುದಾಯಕ್ಕೆ ಪರ್ಯಾಯವಾಗಿ ಬೇರೆಡೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆಯೂ ಬಿಜೆಪಿ ಪಾಳೆಯದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದೆ.

ಇದಕ್ಕಾಗಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುವುದನ್ನು ಕಾಯುತ್ತಿದೆ. ಈಶ್ವರಪ್ಪರನ್ನು ಸಮಾಧಾನ ಮಾಡಲು ಬಿಜೆಪಿ ಪಾಳೆಯದಲ್ಲಿ ಇದೊಂದು ಪ್ರಯತ್ನ ನಡೆಯುತ್ತಿದೆ. ಆದರೆ, ಇದಕ್ಕೆ ಇದುವರೆಗೂ ಯಾವುದೇ ಸ್ವರೂಪ ಬಂದಿಲ್ಲ.

ಕರಡಿ ನಡೆ ಇನ್ನೂ ನಿಗೂಢ:

ಕರಡಿ ಅವರ ನಡೆ ಇನ್ನೂ ನಿಗೂಢವಾಗಿಯೇ ಇದೆ. ಇದುವರೆಗೂ ಬಿಜೆಪಿಯ ಅಭ್ಯರ್ಥಿಯ ಪರವಾಗಿ ನಡೆಯುತ್ತಿರುವ ಪ್ರಚಾರ ಕಾರ್ಯದಲ್ಲಿಯೂ ಭಾಗಿಯಾಗುತ್ತಿಲ್ಲ ಮತ್ತು ಬೇರೆ ಯಾವುದೇ ಪಕ್ಷದ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸುತ್ತಿಲ್ಲ.

ಈ ನಡುವೆ ಮಾ. 19ರಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಕರೆದು ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಬಿಜೆಪಿ ಪದಾಧಿಕಾರಿಗಳನ್ನು ಆಹ್ವಾನ ಮಾಡಿರುವುದು ಇನ್ನೂ ಕುತೂಹಲ ಕೆರಳುವಂತೆ ಮಾಡಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ