ತುಂಗಭದ್ರ ಯೋಜನೆ ಕಾಮಗಾರಿ ವಿಳಂಬ: ಪ್ರತಿಭಟನೆ

KannadaprabhaNewsNetwork |  
Published : Feb 21, 2024, 02:01 AM IST
ಫೋಟೋ 19ಪಿವಿಡಿ1ಪಾವಗಡ ಬೇಸಿಗೆ ಬವಣೆ ಶುದ್ದ ನೀರಿನ ಅಭಾವದ ಹಿನ್ನಲೆಯಲ್ಲಿ ಶೀಘ್ರ ತುಂಗಭದ್ರಾ ಯೋಜನೆಯ ಕುಡಿವ ನೀರು ಸರಬರಾಜ್‌ ಹಾಗೂ ರೈತ ಮಹಿಳೆ ಮೇಲೆ ದೌರ್ಜನ್ಯವೆಸಗಿದ ಡಿವೈಎಸ್‌ಪಿ ರಾಮಚಂದ್ರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಫೋಟೋ 19ಪಿವಿಡಿ2ತುಂಗಭದ್ರಾ ಯೋಜನೆಯ ಕುಡಿವ ನೀರು ಶೀಘ್ರ ಪೂರೈಕೆಗೆ ಒತ್ತಾಯಿಸಿ ಅಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ತಾ,500ಕ್ಕೂ ಹೆಚ್ಚು ರೈತ ಸಂಘದ ಮುಖಂಡರು ಚಳ್ಳಕರೆ ರಸ್ತೆ ಮಾರ್ಗದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. | Kannada Prabha

ಸಾರಾಂಶ

ನಾಲ್ಕು ವರ್ಷ ಕಳೆದರೂ ತಾಲೂಕಿಗೆ ತುಂಗಭದ್ರಾ ಯೋಜನೆಯ ಕುಡಿಯುವ ನೀರು ಪೂರೈಕೆಯ ವಿಳಂಬಕ್ಕೆ ವಿರೋಧಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಪಾವಗಡ

ನಾಲ್ಕು ವರ್ಷ ಕಳೆದರೂ ತಾಲೂಕಿಗೆ ತುಂಗಭದ್ರಾ ಯೋಜನೆಯ ಕುಡಿಯುವ ನೀರು ಪೂರೈಕೆಯ ವಿಳಂಬಕ್ಕೆ ವಿರೋಧಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಳ್ಳಾರಿ ರಸ್ತೆಯಲ್ಲಿ ರಸ್ತೆ ತಡೆದು ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಗುತ್ತಿಗೆದಾರ ಹಾಗೂ ಜಿಪಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

500ರಕ್ಕೂ ಹೆಚ್ಚು ರೈತರು, ಚಳ್ಳಕರೆ ರಸ್ತೆ ಮೂಲಕ ಜಾಥಾ ತೆರಳಿ, ಕುಡಿವ ನೀರು ಪೂರೈಕೆ ವಿಚಾರದಲ್ಲಿ ಆಸಕ್ತಿವಹಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇಲ್ಲಿನ ಟೋಲ್‌ಗೇಟ್‌ ಬಳಿಯ ಅಂಬೇಡ್ಕರ್‌ ಪ್ರತಿಮೆಗೆ ಮಾರ್ಲಾಪಣೆ ಸಲ್ಲಿಸಿದ ಬಳಿಕ ನಗರದ ಶನೇಶ್ವರಸ್ವಾಮಿ ದೇಗುಲ ವೃತ್ತಕ್ಕೆ ಆಗಮಿಸಿ ಪ್ರತಿಭಟಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ದೊಡ್ಡಹಟ್ಟಿಯ ಪೂಜಾರಪ್ಪ ಮಾತನಾಡಿ, ಬೇಸಿಗೆ ಆರಂಭವಾಗಿದೆ. ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ತಾಲೂಕಿನ ಜನತೆ ನೀರಿಗಾಗಿ ನಿತ್ಯ ಪರದಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದು ದುರಂತ ಎಂದರು.

ಇಲ್ಲಿನ ನೀರಿನ ಸಮಸ್ಯೆ ಕುರಿತು ಸಮಗ್ರ ವರದಿ ಪಡೆದ ಸಿಎಂ ಸಿದ್ದರಾಮಯ್ಯ, ಕಳೆದ ನಾಲ್ಕು ವರ್ಷಗಳ ಹಿಂದೆ ಬಯಲು ಸೀಮೆಯ ಬಹುಗ್ರಾಮಗಳ ಕುಡಿವ ನೀರಿಗಾಗಿ ರಾಜ್ಯ ಸರ್ಕಾರದಿಂದ 2.352 ಕೋಟಿ ಹಣ ಬಿಡುಗಡೆಗೊಳಿಸಿದ್ದರು. ಈ ಸಂಬಂಧ 2023ರ ಜುಲೈ ಅಂತ್ಯಕ್ಕೆ ಪಾವಗಡ ತಾಲೂಕಿಗೆ ತುಂಗಭದ್ರಾ ಕುಡಿವ ನೀರು ಪೂರೈಕೆಗೆ ಆದೇಶಿಸಿದ್ದರು. ಈ ಸಂಬಂಧ ಗುತ್ತಿಗೆಪಡೆದ ಆಂಧ್ರ ಮೂಲದ ಮೆಗಾ ಕಂಪನಿಯ ಗುತ್ತಿಗೆದಾರರು ಹಾಗೂ ಇಲ್ಲಿನ ಜಿಪಂ ಕುಡಿಯುವ ನೀರು ವಿಭಾಗದ ಎಂಜಿನಿಯರ್‌ಗಳ ಆಸಮರ್ಥತೆಯ ಪರಿಣಾಮ ಪೈಪ್‌ಲೈನ್‌ ಕಾಮಗಾರಿ ವಿಳಂಬವಾಗಿ ಇದುವರೆಗೂ ತುಂಗಭದ್ರಾ ಹಿನ್ನೀರಿನ ಕುಡಿವ ನೀರು ತಾಲೂಕಿಗೆ ಪೂರೈಕೆ ಆಗಿಲ್ಲ ಎಂದರು.

ಬೆಳೆ ಸಂರಕ್ಷಣೆ ಹಿನ್ನೆಲೆ ಕೊಳವೆಬಾವಿಗಳಲ್ಲಿ ನೀರಿನ ಅಭಾವ ತಪ್ಪಿಸುವ ಸಲುವಾಗಿ ಕೆರೆಗಳಿಗೆ ನೀರು ತುಂಬಿಸಲು ಭದ್ರಾಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿದೆ. ಕಳೆದ ನಾಲ್ಕೈದು ವರ್ಷ ಕಳೆದರೂ ಈ ಯೋಜನೆ ಫಲಿತ ಕಂಡಿಲ್ಲ ಎಂದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕುಡಿವ ನೀರು ವಿಭಾಗದ ಎಇಇ ಹನುಮಂತರಾಯಪ್ಪ, ಮಾ.25ರೊಳಗೆ ತುಂಗಭದ್ರಾ ಯೋಜನೆ ಕುಡಿವ ನೀರು ತಾಲೂಕಿಗೆ ಪೂರೈಕೆಗೆ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಬಳಿಕ ಬೇಡಿಕೆ ಈಡೇರುವವರೆವಿಗೂ ರೈತ ಸಂಘದ ಪ್ರತಿಭಟನೆ ನಿರಂತರವಾಗಿ ಮುಂದುವರಿಸುವುದಾಗಿ ತಿಳಿಸಿ ಅಲ್ಲಿನ ಶಾಮೀಯಾನದಲ್ಲಿ ಸರ್ಕಾರದ ವಿರುದ್ಧ ದಿಕ್ಕಾರ ಮೊಳಗಿಸಿದರು.

ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಮಹದೇವಮ್ಮ, ಒಕ್ಕೂಟದ ರಾಜ್ಯಾಧ್ಯಕ್ಷೆ ನವಿಲುಗುಂದಶ್ರೀ, ರಾಜ್ಯ ರೈತ ಸಂಘ ಯುವ ಒಕ್ಕೂಟದ ಅಧ್ಯಕ್ಷ ಚಿಕ್ಕಮಂಗಳೂರು ಚಂದ್ರಶೇಖರ್‌, ಜಿಲ್ಲಾ ಕಾರ್ಯದರ್ಶಿ ಮಂಜಣ್ಣ, ಬಸವರಾಜ್‌ ಹಿರಿಯ ಮುಖಂಡ ಕೃಷ್ಣರಾವ್‌ ಹಾಗೂ ಪಾವಗಡ ತಾಲೂಕು ಹೋಬಳಿ ಘಟಕದ ಅಧ್ಯಕ್ಷ ವೀರಭದ್ರಪ್ಪ, ಕಿರ್ಲಾಲಹಳ್ಳಿ ಈರಣ್ಣ, ಗುಂಡ್ಲಹಳ್ಳಿ ರಾಮಾಂಜಿನಪ್ಪ ಚಿತ್ತಣ್ಣ, ತಾಲೂಕು ರೈತ ಸಂಘದ ಕಾರ್ಯದರ್ಶಿ ಶಿವು, ಆಶೋಕ್‌, ನಾಗಲಮಡಿಕೆ ಹೋಬಳಿ ಅಧ್ಯಕ್ಷೆ ಹನುಮಕ್ಕ, ಮುಖಂಡರಾದ ಸದಾಶಿವಪ್ಪ, ನಡುಪನ್ನ, ಚಿಕ್ಕಣ್ಣ, ಹನುಮಂತರಾಯಪ್ಪ, ನರಸಿಂಹಪ್ಪ, ಲಕ್ಷ್ಮೀದೇವಮ್ಮ, ಇತರೆ 300ಕ್ಕೂ ಹೆಚ್ಚು ಮಂದಿ ರೈತ ಸಂಘದ ಮುಖಂಡರು ಹಾಗೂ ರೈತರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...