ಹೊಸಪೇಟೆ: ದಿಲ್ಲಿಯ ಕರ್ತವ್ಯ ಪಥದಲ್ಲಿ ಏರ್ಪಡಿಸಲಾದ 76ನೇ ಗಣರಾಜ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಹೊಸಪೇಟೆಯ ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಅವರಿಗೆ ಕೇಂದ್ರ ಸರ್ಕಾರ ಅಹ್ವಾನಿಸಿದೆ.
ಅರಣ್ಯ, ವನ್ಯಜೀವಿಗಳ ಸಂರಕ್ಷಣೆ, ಮಾನವ ಪ್ರಾಣಿ ಸಂಘರ್ಷ ತಡೆಗಟ್ಟುವಿಕೆ, ವನ್ಯಜೀವಿಗಳ ಆವಾಸ ಸ್ಥಾನ ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಅಹರ್ನಿಷಿಯಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಸ್ವಯಂಸೇವಕರನ್ನು ಗುರುತಿಸಿ ನವ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಳುಹಿಸಲು ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ನಿರ್ದೇಶನದ ಮೇರೆಗೆ ಕರ್ನಾಟಕ ಅರಣ್ಯ ಇಲಾಖೆ ಡಾ.ಸಮದ್ ಕೊಟ್ಟೂರು ಅವರ ಹೆಸರನ್ನು ಶಿಫಾರಸು ಮಾಡಿದೆ.ಡಾ.ಸಮದ್ ಕೊಟ್ಟೂರು ಕಳೆದ 35 ವರ್ಷಗಳಿಂದ ಅವಿಭಜಿತ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ವನ್ಯಜೀವಿಗಳ ಆವಾಸ ಸ್ಥಾನವನ್ನು ಗುರುತಿಸಿ ಅವುಗಳ ಸಂರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟು ಹೋರಾಡಿದ್ದಾರೆ. ಇವರ ಅವಿರತ ವೈಜ್ಞಾನಿಕ ಸಂಶೋಧನೆ ಹಾಗೂ ನಿರಂತರ ಶ್ರಮದ ಫಲವಾಗಿ ದರೋಜಿ ಕರಡಿಧಾಮದ ಬುಕ್ಕಸಾಗರ ಅರಣ್ಯವನ್ನು ದರೋಜಿ ಕರಡಿಧಾಮಕ್ಕೆ ಸೇರ್ಪಡೆ ಮಾಡಿದ್ದಾರೆ. ವಿಪರೀತ ಕರಡಿ ದಾಳಿಯಿಂದ ಅಪಾರ ಸಂಖ್ಯೆಯಲ್ಲಿ ಪ್ರಾಣ ಹಾನಿಯಾಗಿದ್ದ ಗುಡೇಕೋಟೆ ಅರಣ್ಯ ಪ್ರದೇಶದಲ್ಲಿ ಅಧ್ಯಯನ ಕೈಗೊಂಡು 2013ರಲ್ಲಿ ಗುಡೇಕೋಟೆ ಕರಡಿಧಾಮ ರಚಿಸಲು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದ್ದಾರೆ. 2015ರಲ್ಲಿ ಹೊಸಪೇಟೆಯ ಟಿ.ಬಿ.ಡ್ಯಾಂನಿಂದ ಹಿಡಿದು ಕಂಪ್ಲಿಯವರೆಗಿನ 35 ಕಿ.ಮೀ. ಉದ್ದದ ತುಂಗಭದ್ರಾ ನದಿಯಲ್ಲಿರುವ ನೀರುನಾಯಿಗಳು, ಮೊಸಳೆಗಳು, ನಾಲ್ಕು ಪ್ರಬೇಧದ ಆಮೆಗಳು, 90 ಪ್ರಬೇಧದ ಮೀನುಗಳನ್ನು ಗುರುತಿಸಿ ಅವುಗಳ ಸಂರಕ್ಷಣೆಗಾಗಿ ಈ ಪ್ರದೇಶವನ್ನು “ತುಂಗಭದ್ರಾ ನೀರುನಾಯಿ ಸಂರಕ್ಷಿತ ಮೀಸಲು” ಎಂದು ಘೋಷಿಸಲು ಅರಣ್ಯ ಇಲಾಖೆಗೆ ನೆರವಾಗಿದ್ದಾರೆ.ದೇಶದಲ್ಲೇ ಕೇವಲ 120ಕ್ಕಿಂದ ಕಡಿಮೆ ಇರುವ ಅಪರೂಪದ ಹಾಗೂ ಅಪಾಯದಂಚಿನಲ್ಲಿರುವ ಎರ್ಲಡ್ಡು ಅಥವಾ ಗ್ರೇಟ್ ಇಂಡಿಯನ್ ಬಸ್ಟರ್ಡ್ ಎಂಬ ಹಕ್ಕಿಯನ್ನು ಸಿರುಗುಪ್ಪದಲ್ಲಿ ಆನಂದ ಕುಂದರಗಿಯವರ ನೆರವಿನಿಂದ ಪತ್ತೆ ಮಾಡಿ, 15 ವರ್ಷಗಳ ಕಾಲ ಅವುಗಳ ಅಧ್ಯಯನ ಮಾಡಿ ಸಂರಕ್ಷಣೆ ಮಾಡಿದ್ದಾರೆ. ಹಂಪಿ ಪ್ರದೇಶದಲ್ಲಿ ಯುಗಾದಿ ಬೇಟೆಯ ನೆಪದಲ್ಲಿ ಕೊಂದು ಹಾಕುತ್ತಿದ್ದ ವನ್ಯಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಯುವಕರ ಜೊತೆಗೂಡಿ ಸತತ 10 ವರ್ಷಗಳ ಕಾಲ ಶ್ರಮಿಸಿ ಅದನ್ನು ತಡೆಗಟ್ಟಿದ್ದಾರೆ.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷಿ ವೀಕ್ಷಣೆ, ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಛಾಯಾಗ್ರಹಣ ಮುಂತಾದ ಕ್ಷೇತ್ರದಲ್ಲಿ ಬಳ್ಳಾರಿ ಹಾಗೂ ಉತ್ತರ ಕರ್ನಾಟಕದ ಅನೇಕ ವಿದ್ಯಾರ್ಥಿ ಹಾಗೂ ಯುವಜನರಿಗೆ ಪ್ರೇರಣೆ ನೀಡಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಯುವ ಜನರಿಗೆ ಪಕ್ಷಿ ವೀಕ್ಷಣೆ ಶಿಬಿರ, ವನ್ಯಜೀವಿ ಸಂರಕ್ಷಣಾ ಕಾರ್ಯಾಗಾರ, ಕ್ಷೇತ್ರ ಭೇಟಿ ಮುಂತಾದ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹಿಸಿದ್ದಾರೆ. ಇವರಿಂದ ತರಬೇತಿ ಪಡೆದ ಅನೇಕ ಯುವಕರು ಇಂದು ನ್ಯಾಚುರಲಿಸ್ಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ.ಡಾ.ಸಮದ್ ಕೊಟ್ಟೂರು ಕರಡಿ- ಮಾನವ ಸಂಘರ್ಷದ ಕುರಿತು ಪಿಎಚ್‌ಡಿ ಮಾಡಿದ್ದಾರೆ. ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಾ ಕಳೆದ ಮೂರು ದಶಕಗಳಿಂದ ವನ್ಯಜೀವಿ, ಅರಣ್ಯ ಸಂರಕ್ಷಣೆಯಲ್ಲಿ ಡಾ.ಸಮದ್ ಕೊಟ್ಟೂರು ತೊಡಗಿದ್ದಾರೆ.