- ಹಗರಣಗಳ ದಾರಿ ತಪ್ಪಿಸಲು ಹುಲಿ ಉಗುರು ಪ್ರಕರಣ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು ಕಳೆದ ಐದೂವರೆ ತಿಂಗಳಿನಿಂದ ರಾಜ್ಯ ಸರ್ಕಾರ ನಡೆಸುತ್ತಿರುವ ಹಗರಣಗಳು ಹಾಗೂ ವೈಫಲ್ಯಗಳ ಮುಚ್ಚಿಹಾಕಲು ಹುಲಿ ಉಗುರು ಪ್ರಕರಣವನ್ನು ಮುಂಚೂಣಿಗೆ ತಂದು ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ 40% ಸರ್ಕಾರ ಎಂದು ಅಪಪ್ರಚಾರ ಮಾಡುತ್ತಿದ್ದರು. ಆದರೆ 40% ಸರ್ಕಾರ ಇದೀಗ ಆಡಳಿತ ನಡೆಸುತ್ತಿದೆ. ಇದೇ ನಿಜವಾದ ಹಗರಣಗಳ ಸರ್ಕಾರ ಎಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು. ಬಿಬಿಎಂಪಿಗೆ ಬಿಡುಗಡೆಯಾದ ರು.600 ಕೋಟಿ ಹಗರಣದಲ್ಲಿ 100 ಕೋಟಿ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕರೂ ತುಟಿ ಬಿಚ್ಚದ ಸಚಿವರು, ಇದು ಕಾಂಗ್ರೆಸ್ಸನ್ನು ಟಾರ್ಗೆಟ್ ಮಾಡಿದ್ದು ಎಂದು ಸಮರ್ಥಿಸಿಕೊಂಡು ಭ್ರಷ್ಟಾಚಾರವೇ ನಮ್ಮ ಮೂಲ ಮಂತ್ರ ಎನ್ನುತ್ತಿದ್ದಾರೆ. ಶೃಂಗೇರಿ ಶಾಸಕರು ಸಹ ಸಭೆಯೊಂದರಲ್ಲಿ ಅಧಿಕಾರಿಗಳು, ಸಾರ್ವಜನಿಕರ ಮುಂದೆ ಕೆಲಸ ಮಾಡಿಕೊಡಲು ಅಧಿಕಾರಿಗಳಿಗೆ ಟಿಪ್ಸ್ ಕೊಡಬೇಕು ಎನ್ನುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರದ ಸುಳಿವುನೀಡಿದ್ದಾರೆ. ಕಾಂಗ್ರೆಸ್ ಶಾಸಕರು 135 ಜನರಿದ್ದರೂ ಮಂತ್ರಿಗಳಲ್ಲಿ, ಶಾಸಕರಲ್ಲಿ ಭಿನ್ನಾಭಿಪ್ರಾಯವಿದೆ. ಅವರ ತೂಕಕ್ಕೆ ಅವರೇ ಕುಸಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ 5 ಗಂಟೆ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಬಿಲ್ ಡಬಲ್ ಆಗಿದೆ. 10ಕೆಜಿ ಅಕ್ಕಿ ನೀಡುವ ಭರವಸೆ ಹುಸಿಯಾಗಿ ಕೇಂದ್ರದಿಂದ ಬರುವ ಅಕ್ಕಿ ಮಾತ್ರ ನೀಡುತ್ತಿದ್ದಾರೆ. ಅಕ್ಕಿ ಹಣ, ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ತಲುಪಿಲ್ಲ. ಒಬ್ಬ ನಿರುದ್ಯೋಗಿಗೂ ಭತ್ಯೆ ನೀಡಲಾಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ಸರ್ಕಾರದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಹಗರಣದಲ್ಲಿ ಮುಳುಗಿದೆ. ಜನರ ದಾರಿ ತಪ್ಪಿಸುವ ಸಲುವಾಗಿ ಜನಪ್ರಿಯ ಶೋ ಬಿಗ್ ಬಾಸ್ ಮನೆಯಿಂದ ಸ್ಪರ್ಧಿ ಸಂತೋಷ್ ನನ್ನು ನೇರವಾಗಿ ಬಂಧನ ಮಾಡಿದ್ದಾರೆ. ಇತಿಹಾಸ ಪ್ರಸಿದ್ಧ ಖಾಂಡ್ಯ ದೇಗುಲದಲ್ಲಿ ತಲೆ ತಲಾಂತರದಿಂದ ಪೂಜೆ ಮಾಡುತ್ತಿದ್ದ ಅರ್ಚಕರಿಗೆ ನೋಟಿಸ್ ನೀಡದೆ ಏಕಾಏಕಿ ಬಂಧಿಸಿದ್ದಾರೆ. ಅವರೇನು ಅಪರಾಧ ಮಾಡಿಲ್ಲ. ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕಿತ್ತು. ಇದು ಸ್ಪಷ್ಟವಾಗಿ ಬಹುಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ಪ್ರಹಾರ. ಈ ಹಿಂದೆ ಹುಲಿ ಸಾಯಿಸಿ ದವರನ್ನು ಸನ್ಮಾನ, ಮೆರವಣಿಗೆ ಮಾಡುವ ಪ್ರವೃತ್ತಿಯಿತ್ತು. ಹಲವು ದೇಗುಲಗಳಲ್ಲಿ ಜಗದ್ಗುರುಗಳು, ಯತಿಗಳು ಈಗಲೂ ಹುಲಿ, ಜಿಂಕೆ ಚರ್ಮ ಬಳಸುವುದನ್ನು ಕಾಣಬಹುದು. ಖಾಂಡ್ಯ ದೇವಾಲಯದ ಅರ್ಚಕರಿಗೆ ಪರಂಪರೆಯಿಂದ ಬಂದ ಹುಲಿ ಉಗುರಿನ ಲಾಕೆಟ್ ಅವರ ಕುಟುಂಬಸ್ಥರು ನೀಡಿರಬಹುದು. ಗಣ್ಯರಿಗೆ ನೋಟಿಸ್ ನೀಡಿದಂತೆ ಇವರಿಗೂ ನೀಡಬಹುದಿತ್ತು. ಉಗುರುಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಒಳಪಡಿಸ ಬಹುದಿತ್ತು. ಇದ್ಯಾವುದನ್ನು ಮಾಡದೆ ಬಹುಸಂಖ್ಯಾತ ಹಿಂದೂಗಳ ಭಾವನೆ ಮೇಲೆ ಪ್ರಹಾರ ಮಾಡಿ, ಅರ್ಚಕರ ಮಾನಸಿಕ ಸ್ಥಿತಿ ಕುಗ್ಗಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಮಾಯಕರ ಮೇಲೆ ದೌರ್ಜನ್ಯವನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಕ್ಷೇತ್ರದ ಶಾಸಕರು ಕನಿಷ್ಠ ಅರ್ಚಕರ ಬಂಧನ ತಡೆಯಬಹುದಿತ್ತು. ಇವರ ಅನ್ಯಾಯದ ಕೆಲಸವನ್ನು ಮಾರ್ಕಾಂಡೇಶ್ವರ ಸ್ವಾಮಿಯೂ ಕ್ಷಮಿಸುವುದಿಲ್ಲ. ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪ್ರಣಸ್ವಿ, ಮುಖಂಡರಾದ ಟಿ.ಎಂ.ನಾಗೇಶ್, ಟಿ.ಎಂ.ಉಮೇಶ್ ಕಲ್ಮಕ್ಕಿ, ಬಿ. ಜಗದೀಶ್ಚಂದ್ರ, ಮಂಜು ಹೊಳೆಬಾಗಿಲು, ಎಚ್.ಎಚ್.ಕೃಷ್ಣಮೂರ್ತಿ, ಪ್ರದೀಪ್ ಕಿಚ್ಚಬ್ಬಿ, ಈಶ್ವರ್ ಇಟ್ಟಿಗೆ, ಸುಧಾಕರ್ ಮತ್ತಿತರರು ಇದ್ದರು. ---(ಬಾಕ್ಸ್)--- ರಾಜಕೀಯದಲ್ಲಿ ನಾನು ಸನ್ಯಾಸಿಯಲ್ಲ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಅಭ್ಯರ್ಥಿ ಸ್ಥಾನ ಖಾಲಿಯಿಲ್ಲ. ಹಾಲಿ ಸಂಸದರು ಈಗಾಗಲೇ ಇದ್ದಾರೆ. ಆದರೆ ಪಕ್ಷ ಹಾಗೂ ನಾಯಕರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದರೆ ನಾನು ಸಿದ್ಧನಿದ್ದೇನೆ. ನಾನೇನು ರಾಜಕೀಯದಲ್ಲಿ ಸನ್ಯಾಸಿಯಲ್ಲ ಎನ್ನುವ ಮೂಲಕ ನಾನು ಸಹ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಪರೋಕ್ಷವಾಗಿ ಹೇಳಿದರು. ಕೇಂದ್ರ, ರಾಜ್ಯ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಬದ್ಧ. ನಾವೆಲ್ಲ ದೇಶದಲ್ಲಿ ನರೇಂದ್ರ ಮೋದಿ ನಾಯಕತ್ವಕ್ಕಾಗಿ ಕೆಲಸ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೋ ಅವರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು. ೨೮ಬಿಹೆಚ್‌ಆರ್ ೧: ಜೀವರಾಜ್.