ಹಾರನಹಳ್ಳಿಯಲ್ಲಿ ಸ್ವಾಮೀಜಿ ಗದ್ದುಗೆ ನಾಶ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork | Published : Nov 29, 2023 1:15 AM

ಸಾರಾಂಶ

ಕೆ.ಆರ್. ವಿಶ್ವನಾಥ್, ಶಿವಕುಮಾರ್ ತಂಡದ 20 ಜನರು ಗ್ರಾಮದಲ್ಲಿ ಭಯೋತ್ಪಾದಕರಂತೆ ವರ್ತಿಸಿದ್ದಾರೆ. ಊರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ಕೂಡಲೇ ತನಿಖೆ ತೀವ್ರಗೊಳಿಸಿ ಸಂಬಂಧಪಟ್ಟವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು. ಅಲ್ಲದೇ, ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಾಲೂಕಿನ ಹಾರನಹಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದ ಹಿರಿಯ ಸ್ವಾಮೀಜಿಗಳ ಗದ್ದುಗೆಯನ್ನು ನಾಶಪಡಿಸಿ ಮಠದ ಸ್ವತ್ತುಗಳನ್ನು ಅಪಹರಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಹಾರನಹಳ್ಳಿ ಗ್ರಾಮಸ್ಥರು ಮತ್ತು ಮಠದ ಭಕ್ತವೃಂದ ಮಂಗಳವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದರು.

ನ.25ರಂದು ಮಠದ ಮಠಾಧಿಪತಿ ಅವರು ಇಲ್ಲದ ಸಂದರ್ಭ ಬೆಂಗಳೂರಿನಿಂದ ಬಂದ 20 ಜನರ ತಂಡ ಏಕಾಏಕಿ ಮಠದೊಳಗೆ ಪ್ರವೇಶಿಸಿ, ಹಿಂದಿನ ಗುರುಗಳ ಪೋಟೋ ಒಡೆದು ಹಾಕಿದ್ದಾರೆ. 3 ಗಾಡ್ರೇಜ್ ಬೀರುಗಳನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು, ಅದರಲ್ಲಿದ್ದ 800 ಗ್ರಾಂ ಬೆಳ್ಳಿಯ ಪೂಜಾ ಸಾಮಗ್ರಿಗಳು ಹಾಗೂ ಮಠಕ್ಕೆ ಸೇರಿದ ಎಲ್ಲ ದಾಖಲಾತಿಗಳನ್ನು ದೋಚಿದ್ದಾರೆ ಎಂದು ಆರೋಪಿಸಿದರು.

ಮಠದ ಆವರಣದಲ್ಲಿ ಶ್ರೀರಾಮಲಿಂಗೇಶ್ವರ ದೇವಸ್ಥಾನ ಬಾಗಿಲು ಸಹ ಮುರಿದು, ಒಳಗಡೆ ಇದ್ದ ದೇವರ ಪ್ರತಿಮೆಯನ್ನೂ ಧ್ವಂಸಗೊಳಿಸಿದ್ದಾರೆ. ಪಕ್ಕದ್ದಲ್ಲಿದ್ದ ಲಿಂಗೈಕ್ಯ ಗುರುಗಳ ಸಮಾಧಿಯನ್ನು ಚಮಟಿಯಿಂದ ಹೊಡೆದು ದ್ವಂಸಗೊಳಿಸಿದ್ದಾರೆ ಎಂದು ದೂರಿದರು.

ಕೆ.ಆರ್. ವಿಶ್ವನಾಥ್, ಶಿವಕುಮಾರ್ ತಂಡದ 20 ಜನರು ಗ್ರಾಮದಲ್ಲಿ ಭಯೋತ್ಪಾದಕರಂತೆ ವರ್ತಿಸಿದ್ದಾರೆ. ಊರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ಕೂಡಲೇ ತನಿಖೆ ತೀವ್ರಗೊಳಿಸಿ ಸಂಬಂಧಪಟ್ಟವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು. ಅಲ್ಲದೇ, ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಹಾರನಹಳ್ಳಿ ಮಠದ ಶಿವಯೋಗಿ ಸ್ವಾಮಿಗಳು, ಜಂಗಮ ಸಮಾಜದ ಪ್ರಮುಖರಾದ ಚಂದ್ರಯ್ಯ, ಕೆ.ಆರ್.ಸೋಮನಾಥ್ ಮೊದಲಾದವರು ಇದ್ದರು.

- - --28ಎಸ್‌ಎಂಜಿಕೆಪಿ04:

ಶಿವಮೊಗ್ಗ ತಾಲೂಕಿನ ಹಾರ್‍ನಹಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದಲ್ಲಿರುವ ಹಿರಿಯ ಸ್ವಾಮೀಜಿಗಳ ಗದ್ದುಗೆಯನ್ನು ನಾಶಪಡಿಸಿ ಮಠದ ಸ್ವತ್ತುಗಳನ್ನು ಅಪಹರಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾರ್‍ನಹಳ್ಳಿ ಗ್ರಾಮಸ್ಥರು ಮತ್ತು ಮಠದ ಭಕ್ತ ವೃಂದದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

Share this article