ಕಾರ್ಪೊರೇಟ್ ಕಂಪನಿಗಳೇ ದೇಶಬಿಟ್ಟು ತೊಲಗಲು ಆಗ್ರಹ

KannadaprabhaNewsNetwork | Published : Aug 10, 2024 1:41 AM

ಸಾರಾಂಶ

1942ರಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ " ಎಂಬ ಐತಿಹಾಸಿಕ ಹೋರಾಟ ನಡೆಸಲಾಯಿತು.

ಬಳ್ಳಾರಿ: ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸಂಯುಕ್ತ ಕಿಸಾನ್ ಮೋರ್ಚಾ ಕರೆ ಮೇರೆಯ ದೇಶವ್ಯಾಪಿ ನಡೆಯುತ್ತಿರುವ ಹೋರಾಟದ ಹಿನ್ನಲೆಯಲ್ಲಿ ನಗರದ ವಿವಿಧ ರೈತ ಸಂಘಗಳು ಜಂಟಿಯಾಗಿ ಚಳವಳಿ ನಡೆಸಿದವು.

ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಆಗಮಿಸಿದ ರೈತ ಸಂಘಟನೆಗಳ ನಾಯಕರು ಹಾಗೂ ಸದಸ್ಯರು, ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ ಹಾಗೂ ಕರ್ನಾಟಕ ಜನಶಕ್ತಿಯ ವಸಂತ್ ಕಾಳೆ, 1942ರಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ " ಎಂಬ ಐತಿಹಾಸಿಕ ಹೋರಾಟ ನಡೆಸಲಾಯಿತು. ಸ್ವಾತಂತ್ರ್ಯ ನಂತರ ಈ ದೇಶದ ದುಡಿವ ಜನರಿಗೆ ಸೇರಬೇಕಾದ ಸಂಪತ್ತನ್ನು ಲೂಟಿಹೊಡೆಯುತ್ತಿರುವ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ಒತ್ತಾಯಿಸಿ ದೇಶವ್ಯಾಪಿ ಬೃಹತ್ ಹೋರಾಟ ನಡೆಯುತ್ತಿದೆ ಎಂದು ಹೇಳಿದರು.

ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಬಂಡವಾಳಶಾಹಿಗಳ ಪರವಾಗಿ ನೀತಿಗಳನ್ನು ಜಾರಿಗೆ ತಂದು, ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತಿವೆ. ಕೃಷಿಯ - ಕಾರ್ಪೋರೇಟಿಕರಣ ನಿಲ್ಲಿಸಬೇಕು. ರೈತ ವೀರೋಧಿ - ವಿದ್ಯುತ್ ಖಾಸಗಿಕರಣ ಮಸೂದೆ ಹಿಂಪಡೆಯಬೇಕು. ಭಾರತದ ಕೃಷಿ ಉತ್ಪಾದನೆ, ಮಾರುಕಟ್ಟೆ-ಸಂಗ್ರಹಣೆ ಮತ್ತು ವಿತರಣೆ ರೈತರು ಮತ್ತು ಸರಕಾದ ಅಧೀನದಲ್ಲಿಯೇ ಇರುವಂತೆ ಜೋಪಾನ ಮಾಡಬೇಕು. ಕೃಷಿಭೂಮಿ ರೈತರಲ್ಲೇ ಉಳಿಯುವಂತೆ ಸಂರಕ್ಷಿಸಬೇಕು.ಕೈಗಾರಿಕೆ- ರಾಷ್ಟ್ರೀಯ ಹೆದ್ದಾರಿ- ರಾಜ್ಯ ಹೆದ್ದಾರಿ ನಿರ್ಮಾಣ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುವುದನ್ನು ನಿಲ್ಲಿಸಬೇಕು ಎಂದರು.

ಕೃಷಿ ಉತ್ಪಾದನೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಡಬೇಕು. ಕೃಷಿ ಉತ್ಪನ್ನಗಳಿಗೆ ಡಾ.ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ಉತ್ಪಾದನಾ ವೆಚ್ಚದ ಶೇ.50 ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಬೇಕು. ಕೃಷಿಗೆ ಅಂತರಿಕ ಸಹಾಯಧನ ಹೆಚ್ಚು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಪೊರೇಟ್ ಕಂಪನಿಗಳ ಹಾವಳಿಯಿಂದ ಕೃಷಿ ವಲಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ತಿಳಿಸಿದ ಪ್ರತಿಭಟನಾಕಾರರು, ಕಾರ್ಪೊರೇಟ್ ಕಂಪನಿಗಳು ಈ ದೇಶದಿಂದ ತೊಲಗಿದರೆ ಮಾತ್ರ ಕೃಷಿ ವಲಯ ಉಳಿಯಲು ಸಾಧ್ಯ ಎಂದು ಹೇಳಿದರು.

ಎಐಕೆಕೆಎಂಎಸ್ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ರಾಜ್ಯ ರೈತ ಸಂಘದ ದ್ಯಾವಣ್ಣ ಜನಶಕ್ತಿಯ ಜಿಲ್ಲಾ ಸದಸ್ಯ ಅಪ್ಪಾಜಿ, ಹೊನ್ನೂರಪ, ಸೇರಿದಂತೆ ರೈತ ಸಂಘಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share this article