ರೈತರ ಎಲ್ಲ ಬೆಲೆಗಳಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ

KannadaprabhaNewsNetwork |  
Published : Dec 23, 2023, 01:45 AM IST
ಬಳ್ಳಾರಿಯ ಗಾಂಧಿಭವನದಲ್ಲಿ ಜರುಗಿದ  ರೈತಕೃಷಿ ಕಾರ್ಮಿಕರ 2ನೇ ತಾಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಎಐಕೆಕೆಎಂಎಸ್‌ನ ರಾಜ್ಯ ಉಪಾಧ್ಯಕ್ಷ ವಿ.ನಾಗಮಾಳ್ ಅವರು ಮಾತನಾಡಿದರು.  | Kannada Prabha

ಸಾರಾಂಶ

ರೈತರ ಎಲ್ಲ ಬೆಲೆಗಳಿಗೆ ಕನಿಷ್ಠ ಬೆಂಬಲಬೆಲೆ ಘೋಷಣೆಯಾಗಬೇಕು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಬಳ್ಳಾರಿ ಗಾಂಧಿಭವನದಲ್ಲಿ ಶುಕ್ರವಾರ ಜರುಗಿದ ಎಐಕೆಕೆಎಂಎಸ್ ಸಂಘಟನೆ ಹಮ್ಮಿಕೊಂಡಿದ್ದ ರೈತಕೃಷಿ ಕಾರ್ಮಿಕರ 2ನೇ ತಾಲೂಕು ಸಮ್ಮೇಳನದಲ್ಲಿ ಆಗ್ರಹಿಸಲಾಗಿದೆ.

ಬಳ್ಳಾರಿ: ರೈತರ ಎಲ್ಲ ಬೆಲೆಗಳಿಗೆ ಕನಿಷ್ಠ ಬೆಂಬಲಬೆಲೆ ಘೋಷಣೆಯಾಗಬೇಕು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಇಲ್ಲಿನ ಗಾಂಧಿಭವನದಲ್ಲಿ ಶುಕ್ರವಾರ ಜರುಗಿದ ಎಐಕೆಕೆಎಂಎಸ್ ಸಂಘಟನೆ ಹಮ್ಮಿಕೊಂಡಿದ್ದ ರೈತಕೃಷಿ ಕಾರ್ಮಿಕರ 2ನೇ ತಾಲೂಕು ಸಮ್ಮೇಳನದಲ್ಲಿ ಆಗ್ರಹಿಸಲಾಗಿದೆ.

ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಎಐಕೆಕೆಎಂಎಸ್‌ನ ರಾಜ್ಯ ಉಪಾಧ್ಯಕ್ಷ ವಿ. ನಾಗಮಾಳ್, ಕೃಷಿ ವಲಯ ವರ್ಷದಿಂದ ವರ್ಷಕ್ಕೆ ಬಿಕ್ಕಟ್ಟು ಎದುರಿಸುತ್ತಿದ್ದು, ಕೃಷಿ ಉತ್ಪನ್ನಗಳಿಗೆ ಬೆಂಬಲಬೆಲೆ ಸಿಗದೆ ರೈತರು ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಹೀಗಾಗಿ ರೈತರ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಘೋಷಣೆ ಮಾಡಬೇಕು ಹಾಗೂ ರೈತರ ಹಿತ ಕಾಯಲುಬೇಕಾದ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಬೇಕು ಎಂದು ಒತ್ತಾಯಿಸಿದರು.

ರೈತ ಹೋರಾಟದ ಮುಂಚೂಣಿ ವಹಿಸಿರುವ ಎಐಕೆಕೆಎಂಎಸ್ ಸಂಘಟನೆ, ದುಡಿಯುವ ಜನರ ಹಿತ ಕಾಯುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಚಳವಳಿ ರೂಪಿಸುತ್ತಾ ಬಂದಿದೆ. ರೈತರು ಸಂಘಟಿತರಾಗಬೇಕು. ಹೋರಾಟಗಳ ಮೂಲಕ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರಲ್ಲದೆ, ನರೇಗಾ ಯೋಜನೆಯಡಿ 200 ದಿನ ಕೆಲಸ ಹಾಗೂ ₹600 ಕೂಲಿ ನೀಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಶೀಘ್ರವೇ ಸರ್ಕಾರ ಸೂಕ್ತ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಬಸಣ್ಣ, ಲಿಂಗಪ್ಪ, ಈರಣ್ಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಹೊಸ ತಾಲೂಕು ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಗಡಿಗೆ ಈರಣ್ಣ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಬಸರಕೊಡು, ರುದ್ರಯ್ಯ, ಮಲ್ಲಪ್ಪ ಕೊರ್ಲಗುಂದಿ, ಕಾರ್ಯದರ್ಶಿಯಾಗಿ ಧನರಾಜ್ ಎತ್ತಿನ ಬುದಿಹಾಳ್, ಜಂಟಿ ಕಾರ್ಯದರ್ಶಿಗಳಾಗಿ ರಮೇಶ್ ಸಿಡಿಗಿನಮೊಳ ಹಾಗೂ 34 ಕಾರ್ಯಕಾರಿ ಸಮಿತಿ ಮತ್ತು 48 ಕೌನ್ಸಿಲ್ ಸದಸ್ಯರು ಸೇರಿ ಒಟ್ಟು 97 ಜನರ ಸಮಿತಿಯನ್ನು ಆಯ್ಕೆ ಮಾಡಲಾಯಿತು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ