ಕನ್ನಡಪ್ರಭ ವಾರ್ತೆ ಬಂಗಾರಪೇಟೆತಾಲೂಕಿನ ಗಡಿಭಾಗದ ಬಹುತೇಕ ರಸ್ತೆಗಳು ಹಾಳಾಗಿದ್ದು, ಕಲ್ಲು ಹಾಗೂ ಗುಂಡಿಗಳಿಂದ ಹೂಡಿದ ರಸ್ತೆಯಲ್ಲಿ ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸುವ ಜನರು ಹೈರಾಣುಗುತ್ತಿದ್ದಾರೆ.ಆಂಧ್ರ ಮತ್ತು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಜನರಿಗೆ ಬೇರೆಡೆಗೆ ಹೋಗಲು ರಸ್ತೆ ಮಾರ್ಗವೆ ಆಗಿದ್ದು, ಅಭಿವೃದ್ಧಿಯ ದ್ಯೋತಕ ಎನಿಸಿಕೊಂಡಿರುವ ತಾಲ್ಲೂಕಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕಿತ್ತುಬಂದ ಡಾಂಬರ್:
ರಸ್ತೆ ಅಭಿವೃದ್ದಿ ಹೆಸರಿನಲ್ಲಿ ಡಾಂಬರ್ ಹಾಕಿದ ರಸ್ತೆಗಳು ಕಾಮಗಾರಿ ನಡೆಸಿದ ಕೆಲವೇ ತಿಂಗಳುಗಳಲ್ಲಿ ಡಾಂಬರ್ ಕಿತ್ತು ಹೋಗಿ ಕಲ್ಲು ಕಾಣುತ್ತಿವೆ. ಅಲ್ಪ ಪ್ರಮಾಣದ ಮಳೆ ಬಿದ್ದರೂ ಗುಂಡಿಗಳು ನಿರ್ಮಾಣವಾಗುತ್ತಿವೆ. ಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಹಿಂದೆ ಬರುವಂತಹ ವಾಹನ ಸವಾರರಿಗೆ ಕಲ್ಲುಗಳು ತಾಗಿ ಗಾಯಗೊಂಡಿರುವ ಸಾಕಷ್ಟು ನಿದರ್ಶನಗಳಿವೆ.ಕಾಮಸಮುದ್ರದಿಂದ ತೋಪ್ಪನಹಳ್ಳಿ ಮಾರ್ಗದ ರಸ್ತೆಯೂ ಅಲ್ಲಲ್ಲಿ ಹಾಳಾಗಿದೆ. ಹೆಚ್ಚಿನ ಸಂಖ್ಯೆಯ ವಾಹನಗಳು ಓಡಾಡುವ ಈ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ನರಕಯಾತನೆ ಅನುಭವಿಸುವ ಸ್ಥಿತಿ ಇದೆ. ಕಳವಂಚಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಮಾರ್ಗದಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದೆ.
ಈಜುಕೊಳದಂತಾದ ರಸ್ತೆಮಳೆ ಬಂದರೆ ರಸ್ತೆಗಳು ಈಜು ಕೊಳಗಳಾಗುತ್ತವೆ. ಜೊತೆಗೆ ಚರಂಡಿ ನಿರ್ಮಾಣ ಮಾಡದ ಕಾರಣ ರಸ್ತೆಗೆ ನೀರು ಹರಿದು ಬರುತ್ತಿದ್ದು ನಿತ್ಯ ಸಂಚರಿಸುವ ವಾಹನ ಸವಾರರು ಹರಸಾಹಸ ಪಡಬೇಕಿದೆ. ಹದಗೆಟ್ಟ ರಸ್ತೆಗಳಿಗೆ ಮೋಕ್ಷ ಕಲ್ಪಿಸಲು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬದಲಾವಣೆಯಾಗಿಲ್ಲ.ತಾಲ್ಲೂಕಿನ ಮುಖ್ಯ ರಸ್ತೆಗಳ ಸ್ಥಿತಿಯೇ ಹೀಗಿದ್ದರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳ ಸ್ಥಿತಿ ಬಣ್ಣಿಸಲಾಗದು. ತಾಲ್ಲೂಕಿನ ದವಡಬೆಟ್ಟ ಗ್ರಾಮದ ಬಳಿ ರಸ್ತೆ ಬಾವಿಗೆ ಕುಸಿದಿದ್ದು, ಆ ಗ್ರಾಮದ ಜನತೆ ಕಳೆದ ಎರಡು ವ?ಗಳಿಂದ ಕೆರೆ ಕಟ್ಟೆ ಮೇಲಿಂದ ಅಪಾಯಕಾರಿ ಸ್ಥಿತಿಯಲ್ಲಿ ಓಡಾಡುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆಗಳ ಅಭಿವೃದ್ದಿಗೆ ಒತ್ತುಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.