ಕನ್ನಡ ಶಾಲಾ, ಕಾಲೇಜುಗಳಿಗೆ ವೇತನಾನುದಾನ ನೀಡಲು ಆಗ್ರಹ

KannadaprabhaNewsNetwork | Published : Dec 13, 2024 12:48 AM

ಸಾರಾಂಶ

1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ, ಕಾಲೇಜುಗಳಿಗೆ ವೇತನಾನುದಾನ ನೀಡುವುದು ಸೇರಿದಂತೆ ಮತ್ತಿತರ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಶಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟ ನೇತೃತ್ವದಲ್ಲಿ ಮಠಾಧೀಶರು, ನೌಕರರು ಸುವರ್ಣ ವಿಧಾನಸೌಧದ ಬಳಿಯಿರುವ ಸುವರ್ಣ ಗಾರ್ಡನ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ, ಕಾಲೇಜುಗಳಿಗೆ ವೇತನಾನುದಾನ ನೀಡುವುದು ಸೇರಿದಂತೆ ಮತ್ತಿತರ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಶಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟ ನೇತೃತ್ವದಲ್ಲಿ ಮಠಾಧೀಶರು, ನೌಕರರು ಸುವರ್ಣ ವಿಧಾನಸೌಧದ ಬಳಿಯಿರುವ ಸುವರ್ಣ ಗಾರ್ಡನ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಮ್ಮ ಕನ್ನಡ ಶಾಲೆ ಉಳಿಸಬೇಕು. ಪ್ರತಿಯೊಂದು ಮಗುವಿಗೂ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಸರ್ಕಾರವೇ ಎಲ್ಲ ಭಾಗದಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಸಾಧ್ಯವಾಗದ ಕಾರಣ ಖಾಸಗಿಯವರು ಮತ್ತು ಮಠಾಧೀಶರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡುತ್ತ ಬಂದಿದ್ದಾರೆ. ಸರ್ಕಾರದಅರ್ಧ ಕೆಲಸವನ್ನು ಕಡಿಮೆ ಮಾಡಿವೆ. ಶಿಕ್ಷಣ ನೀಡುವ ಎಲ್ಲ ಸಂಸ್ಥೆಗಳಿಗೆ ಅನುದಾನ ನೀಡಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರಗಳು ಮಲತಾಯಿ ದೋರಣೆ ತಳೆದಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಕರ್ನಾಟಕದಲ್ಲಿ ಸ್ವಾತಂತ್ರ ಪೂರ್ವದಿಂದಲೂ ಮತ್ತು ಸ್ವಾತಂತ್ರ ನಂತರವೂ ಸರ್ಕಾರದವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ನೀಡಲಾಗುತ್ತಿತ್ತು. ನಂತರ ಈ ಪ್ರಕ್ರಿಯೆ 1986ಕ್ಕೆ ನಿಂತುಹೋಗಿತ್ತು. 1999ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಅನುದಾನ ಕೊಡುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ನಂತರ 2006ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ 1987 ರಿಂದ 1995 ರವರೆಗೆ ಅನುದಾನ ನೀಡಿತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಸರ್ಕಾರಗಳು ಅನುದಾನವನ್ನು ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. 2010ರಿಂದ ನಿರಂತರವಾಗಿ ಬೆಂಗಳೂರು-ಬೆಳಗಾವಿ ಎಲ್ಲ ಅಧಿವೇಶನಗಳಲ್ಲಿ ಹೋರಾಟ ಮಾಡಿದರೂ ಸಹ ಪ್ರಯೋಜನವಾಗಿಲ್ಲ, ಸಾವಿರಾರು ಶಿಕ್ಷಕರು ಬಿಡಿಗಾಸು ಇಲ್ಲದೆ ನಿವೃತ್ತಿಯಾದರು. ಇದರಿಂದ ಕನ್ನಡ ಮಾದ್ಯಮ ಶಾಲಾ ಕಾಲೇಜುಗಳು ಅನುದಾನವಿಲ್ಲದೆ ಅವನತಿಯತ್ತ ಸಾಗುತ್ತಿವೆ. ಸಾವಿರಾರು ಶಾಲೆಗಳು ಆಂಗ್ಲ ಮಾಧ್ಯಮಕ್ಕೆ ಪರಿವರ್ತನೆಯಾಗುತ್ತಿವೆ. ಕನ್ನಡ ಕರ್ನಾಟಕದ ಆಡಳಿತ ಭಾಷೆ ಮಾತೃಭಾಷೆಕೂಡ, ಇದು ಕೇವಲ ನವೆಂಬರ್ ತಿಂಗಳು ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಂದಾಗ ಮಾತ್ರ ಕನ್ನಡ ಭಾಷೆಯ ಮೇಲೆ ಅಪಾರವಾದ ಪ್ರೀತಿ ಬರುತ್ತದೆ. ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದ್ದು, ಭಾರತದಲ್ಲೇ ಅತಿಹೆಚ್ಚು 8 ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಇಂದು ನಾವಿಕನಿಲ್ಲದ ಹಡಗಿ ನಂತಾಗುತ್ತಿದೆ. ಕಾರಣ ಯಾವುದೇ ಭಾಷೆ ಉಳಿದು ಬೆಳೆಯಬೇಕಾದರೇ ಶಾಲೆಗಳು ಇರುವುದು ಮುಖ್ಯ. ಆದರೆ, ಕರ್ನಾಟಕದಲ್ಲಿ ಕನ್ನಡ ಶಾಲೆಗಳಿಗೆ ಉಳಿಗಾಲವಿಲ್ಲ, ಸರ್ಕಾರದ ಅನುದಾನವಿಲ್ಲದೆ ಶಾಲಾ ಕಾಲೇಜುಗಳನ್ನು ನಡೆಸುವುದು ತುಂಬಾ ಕಷ್ಟವಾಗಿದೆ. ಜತೆಗೆ ಸರ್ಕಾರಗಳೇ ಆಂಗ್ಲ ಮಾಧ್ಯಮದಲ್ಲಿ ಶಾಲೆಗಳನ್ನು ತೆರೆಯುತ್ತಿವೆ. ಇದು ನಮ್ಮ ದುರ್ದೈವ ಎಂದು ತಿಳಿಸಿದರು.ಕಾಂಗ್ರೆಸ್‌ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿಯೂ 2012ರ ತನಕ ಅನುದಾನ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ, ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಜಾರಿಯಾಗಿಲ್ಲ. ಇದರಿಂದಾಗಿ ಲಕ್ಷಾಂತರ ಬಡಮಕ್ಕಳು ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೇ ವಂಚಿತವಾಗಿವೆ. ಸಾವಿರಾರು ಶಿಕ್ಷಕರು ಅನುದಾನವಿಲ್ಲದೇ ನಿವೃತ್ತಿಯಾಗುತ್ತಿದ್ದಾರೆ. ಸರ್ಕಾರಿ ನೌಕರರಿಗೆ 7ನೇ ವೇತನ ನೀಡಲಾಗುತ್ತಿದೆ. ಆದರೆ, ಖಾಸಗಿ ಶಾಲೆಗಳ ಶಿಕ್ಷಕರಿಗೆ 1ನೇ ವೇತನವೇ ಇಲ್ಲವಾಗಿದೆ ಎಂದು ಆರೋಪಿಸಿದರು.ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಬೈಲಹೊಂಗಲ ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಕಿತ್ತೂರಿನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಹಂದಿಗನೂರಿನ ಶಿವಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಜಿ.ಸಿ.ಶಿವಪ್ಪ, ಐ.ಎಸ್‌.ಹೊರಗಿನಮಠ, ಎಸ್‌.ಎಸ್‌.ಮಠದ,ಎಂ.ಎ.ಕೋರಿಶೆಟ್ಟಿ,ಸಲೀಮ ಕಿತ್ತೂರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share this article