ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಣ ಮಾಡಲು ಒತ್ತಾಯ

KannadaprabhaNewsNetwork | Published : Jan 20, 2025 1:33 AM

ಸಾರಾಂಶ

ರಾಮನಗರ: ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.

ರಾಮನಗರ: ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ತಾಣವಾಗುತ್ತಿದ್ದು, ಕೂಡಲೇ ಸರ್ಕಾರ ಈ ವ್ಯವಸ್ಥೆಯನ್ನು ಸರಿಪಡಿಸಬೇಕು. ಜತೆಗೆ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಆಗ್ರಹಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜು, ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಅವ್ಯವಸ್ಥೆಯಿಂದ ಕೂಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಬೇಕು. ಸರ್ಕಾರಿ ಆಸ್ಪತ್ರೆಗಳು ಜನರಿಗೆ ನರಕ ಸದೃಶವಾಗುತ್ತಿದ್ದರೆ, ಇನ್ನೊಂದೆಡೆ ನಾಯಿಗಳಿಗೆ ಸ್ವರ್ಗವಾಗುತ್ತಿದೆ ಎಂದು ಟೀಕಿಸಿದರು.

ಖಾಸಗಿ ಆಸ್ಪತ್ರೆಗಳು ರಾಜಕಾರಣಿಗಳ ಕೈಯಲ್ಲಿವೆ. ಅವುಗಳನ್ನು ಕೂಡಲೇ ರಾಷ್ಟ್ರೀಕರಣ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಅನುಕೂಲವಾಗಲಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳು ಸಾಲು ಸಾಲು ಸಮಸ್ಯೆಗಳನ್ನು ಹೊಂದಿದೆ. ಇವುಗಳನ್ನು ಕೂಡಲೇ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜು, ರಾಜ್ಯಪಾಲರ ನಡೆಯು ಪ್ರಜಾಪ್ರಭುತ್ವದ ವಿರುದ್ಧವಾದ ನಡೆಯಾಗಿದೆ. ಈ ರೀತಿ ಮುಖ್ಯಮಂತ್ರಿಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದರಲ್ಲಿ ಬಿಜೆಪಿ, ಜೆಡಿಎಸ್ ಜತೆಗೆ ಕಾಂಗ್ರೆಸ್ ಅವರು ಸೇರಿದ್ದಾರೆ. ಇರುವ ರಾಜ್ಯಪಾಲರು ಸರ್ವಾಧಿಕಾರಿಗಳಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ನಾನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಇಡಿ ಸಂಸ್ಥೆಯು ಕೇಂದ್ರದ ಕೈಗೊಂಬೆಯಾಗಿದೆ. ಹಾಗಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬಾರದು. ತಮಿಳುನಾಡು, ಆಂಧ್ರಪ್ರದೇಶ. ಕರ್ನಾಟಕ, ತೆಲಂಗಾಣದ ರಾಜ್ಯಪಾಲರು ಸರ್ವಾಧಿಕಾರಿಗಳ ರೀತಿ ವರ್ತಿಸುತ್ತಿದ್ದಾರೆ. ತಮಿಳುನಾಡಿನ ವಿಧಾನಸಭೆಯಲ್ಲಿ ರಾಜ್ಯಪಾಲರು ಭಾಷಣ ಮಾಡದೆ ಹೊರಟು ಹೋಗಿದ್ದಾರೆ. ಇದು ಸರ್ವಾಧಿಕಾರಿಗಳ ರೀತಿ ವರ್ತಿಸುತ್ತಿರುವುದಕ್ಕೆ ಸಾಕ್ಷಿ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕರುನಾಡು ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು, ತಾಲೂಕು ಅಧ್ಯಕ್ಷ ವಿ.ಎನ್. ಗಂಗಾಧರ್, ನಗರ ಘಟಕದ ಅಧ್ಯಕ್ಷ ಪ್ರಸನ್ನಕುಮಾರ್, ಪದಾಧಿಕಾರಿಗಳಾದ ಕುಮಾರ್, ರಾ.ಶಿ.ಬಸವರಾಜು, ಚಂದ್ರಶೇಖರಯ್ಯ, ಮಂಜುನಾಥ್, ಕೃಷ್ಣಮೂರ್ತಿ, ರಾಜು, ಆರ್.ಜಿ.ಅರ್ಜುನ್ ಮತ್ತಿತರರು ಭಾಗವಹಿಸಿದ್ದರು.

19ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ಜಿಲ್ಲಾಸ್ಪತ್ರೆ ಎದುರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Share this article